ಮೈಸೂರು: ಕುರುಬಾರಹಳ್ಳಿ ಸರ್ವೆ ನಂ.4ರ ವಿಚಾರವಾಗಿ ಸರ್ಕಾರ “ಬಿ’ ಖರಾಬು ತೆರವಿಗೆ ಆದೇಶ ನೀಡಿಲ್ಲ. ಮುಂದಿನ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸೂಚಿ ಸಿದ್ದಾರಷ್ಟೆ. ಇದನ್ನು ರಾಮದಾಸ್ ಅಧಿಕೃತ ಆದೇಶ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರಾಮದಾಸ್ ಸರ್ಕಾರ ನೀಡಿರುವ ಅನಧಿಕೃತ ಟಿಪ್ಪಣಿಯನ್ನು “ಬಿ’ ಖರಾಬು ತೆರವಿನ ಅಧಿಕೃತ ಆದೇಶ ಎಂದು ತೋರಿಸಿದ್ದಾರೆ. “ಬಿ’ ಖರಾಬು ತೆರವಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಅನುಮೋದನೆ ದೊರೆತಿತ್ತು. ಆದರೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ.
2012ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಂದಾಯ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಹಾಗೂ ಉಸ್ತುವಾರಿ ಸಚಿವರಾಗಿದ್ದ ರಾಮ ದಾಸ್ ಸ.ನಂ.4ರ ಪ್ರದೇಶವನ್ನು “ಬಿ’ ಖರಾಬು ಭೂಮಿ ಎಂದು ಘೋಷಿಸಿದ್ದರು. ಈ ಆದೇಶದ ವಿರುದ 74 ಪ್ರಕರಣಗಳು ದಾಖಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಶಾಸಕರಾಗಿದ್ದ ಎಂ.ಕೆ.ಸೋಮ ಶೇಖರ್, ಉಸ್ತುವಾರಿ ಮಂತ್ರಿಯಾಗಿದ್ದ ಮಹದೇವಪ್ಪ ಹೋರಾಡಿ ಆ ಜಮೀನನ್ನು ಮುಡಾ ವ್ಯಾಪ್ತಿಗೆ ಸೇರಿಸಲು ಸಂಪುಟದ ಅನುಮೋದನೆ ಪಡೆದಿದ್ದರು ಎಂದು ಮಾಹಿತಿ ನೀಡಿದರು.
ಅಧಿಕೃತ ಆದೇಶ ಬರುವ ಮುನ್ನವೇ ಪತ್ರಿಕಾಗೋಷ್ಠಿ ನಡೆಸಿದ್ದೇಕೆ? ಇದರಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೈವಾಡವೂ ಇದೆ. ಗೋ.ಮಧುಸೂದನ್ ಹಾಗೂ ರಾಮದಾಸ್ ಇನ್ನು ಒಂದು ತಿಂಗಳೊಳಗೆ ಈ ಜಮೀನುಗಳಿಗೆ ಮುಕ್ತಿ ಕೊಡಿಸದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ ಇದ್ದರು.