ಮೈಸೂರು: ಗಂಗರ ಆಳ್ವಿಕೆಯಿಂದ ಚಾರಿತ್ರಿಕ ಪ್ರಸಿದ್ಧಿ ಹಾಗೂ ಹಿನ್ನೆಲೆ ಪಡೆದಿರುವ ತಲಕಾಡಿನ 55 ಮಂದಿ ಸಾಧಕರನ್ನು ಸ್ಮರಿಸುವ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವೆಂಕಟಗಿರಿ ಪ್ರಕಾಶನದ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಟಿ.ಎನ್.ದಾಸೇಗೌಡರ “ತಲಕಾಡಿನ ರತ್ನಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ.ಬಿ.ಆರ್. ಅಂಬೇಡ್ಕರ್‌ರ ನಾಣ್ಣುಡಿಯಂತೆ ದಾಸೇಗೌಡ ಅವರು ಇತಿಹಾಸ ಸ್ಮರಿಸುವ ಮೂಲಕ ಇತಿಹಾಸ ಸೃಷ್ಟಿಸಬಹುದು ಎಂಬುದನ್ನು ಹೇಳಿದ್ದಾರೆ. ಈ ನಿಟ್ಟಿನಲ್ಲಿ ತಲಕಾಡಿನ ಮೊದಲ ದಲಿತಗುರು ರಂಗೇನಾಯಕ್, ಮಾಧವ ಮಂತ್ರಿ ಸೇರಿದಂತೆ ತಲಕಾಡಿನಿಂದ ಹೆಸರು ವಾಸಿಯಾದ ವ್ಯಕ್ತಿಗಳ ಬಗ್ಗೆ ತಮ್ಮ ಕೃತಿಯಲ್ಲಿ ಉಲ್ಲೇಖೀಸಿದ್ದಾರೆಂದರು.
ಕೃತಿ ಕುರಿತು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ತಲಕಾಡಿನ ರತ್ನಗಳು ಕೃತಿ ಚಾರಿತ್ರಿಕ ಪರಂಪರೆ ಹೊಂದಿರುವ ಪುಸ್ತಕವಾಗಿದ್ದು, ಭೌಗೋಳಿಕ, ಭೌತಿಕವಲ್ಲದಿದ್ದರೂ ಇದೊಂದು ಕಿರು ವಿಶ್ವಕೋಶ. ಕೃತಿಯಲ್ಲಿ ತಲಕಾಡಿನ 55 ಸಾಧಕರ ಕುರಿತಂತೆ ಮಾಹಿತಿ ನೀಡಲಿದ್ದು, ಯಾವುದೇ ಸ್ಥಳ, ವ್ಯಕ್ತಿಗಳ ಬಗ್ಗೆ ಕೃತಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿಗಳ ಬಗ್ಗೆ ಬರೆಯುವ ಸಂದರ್ಭದಲ್ಲಿ ಪ್ರಸಿದ್ಧ ವ್ಯಕ್ತಿಗಳು ಏನು ಹೇಳುತ್ತಾರೆ, ಅವರ ಅಭಿಪ್ರಾಯಗಳು ಏನೆಂಬುದನ್ನು ದಾಸೇಗೌಡರು ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ತಮ್ಮ ಕೃತಿಯಲ್ಲಿ ಕವಿಯಾಗಿ ವರ್ಣನೆ ಮಾಡಿರುವ ದಾಸೇಗೌಡರ ಕವಿ ಮನಸ್ಸು ಪುಸ್ತಕದಲ್ಲಿ ಕೆಲಸ ಮಾಡಿದೆ ಎಂದರು.
ಪರಿಶೀಲಿಸುವ ಭರವಸೆ: ಬೆಳ್ಳಾಳ ಒಕ್ಕಲಿಗರನ್ನು ಹಿಂದುಳಿದ ವರ್ಗ 3ಎಗೆ ಸೇರಿಸುವಂತೆ ಒತ್ತಾಯಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಡಾ.ಎಚ್.ಸಿ.ಮಹದೇವಪ್ಪ ಬೆಳ್ಳಾಳ ಒಕ್ಕಲಿಗರನ್ನು 3ಎಗೆ ಸೇರಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ತಲಕಾಡು ಹಸ್ತೀಕೇರಿ ಮಠದ ಪೀಠಾಧ್ಯಕ್ಷ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಒಕ್ಕಲಿಗರ ಸಂಘದ ಟಿ.ಆರ್.ಕೃಷ್ಣೇಗೌಡ, ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ, ಸಮಾಜ ಸೇವಕ ಟಿ.ಎ.ರಾಮೇಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಉದ್ದಂಡೇಗೌಡ ಇದ್ದರು.