Advertisement

 ಕಾಮಗಾರಿ ಪೂರ್ಣವಾದರೂ ವೀಕ್ಷಣೆಗೆ ಸಿಗುತ್ತಿಲ್ಲ

12:07 PM Nov 20, 2017 | Team Udayavani |

ಮಹಾನಗರ: ಕರಾವಳಿ ಜನತೆ ಬಹುನಿರೀಕ್ಷೆಯಿಂದ ಕಾಯುತ್ತಿರುವ ಕದ್ರಿಯ ಜಿಂಕೆ ಪಾರ್ಕ್‌ ಖ್ಯಾತಿಯ ಹಳೆ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಜೀವ್‌ ಗಾಂಧಿ ಸಂಗೀತ ಕಾರಂಜಿ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡು ಕೆಲವು ತಿಂಗಳು ಕಳೆದಿದ್ದರೂ ಇನ್ನೂ ಉದ್ಘಾಟನೆಯ ಯೋಗ ಕೂಡಿ ಬಂದಿಲ್ಲ. ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್‌ ಕೊನೆಯಲ್ಲಿ ಇದನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ.

Advertisement

ಎಲ್ಲ ಅಂದುಕೊಂಡಂತೆ ಆಗಿದ್ದರೆ ಐದು ತಿಂಗಳ ಹಿಂದೆಯೇ ಸಂಗೀತ ಕಾರಂಜಿ ಉದ್ಘಾಟನೆಯಾಗಬೇಕಿತ್ತು. ಕಾಮಗಾರಿ ಪೂರ್ಣಗೊಂಡಿದ್ದರೂ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವಿಳಂಬ ನೀತಿಯೇ ಉದ್ಘಾಟನೆ ವಿಳಂಬವಾಗಲು ಕಾರಣ.

ಕಾರಂಜಿಯ ಕಾಮಗಾರಿ ಪ್ರಾರಂಭವಾಗಿದ್ದು ಒಂದೂವರೆ ವರ್ಷದ ಹಿಂದೆ. ಇದಕ್ಕೆ ಸುಮಾರು 5 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಕಳೆದ ಎಪ್ರಿಲ್‌ ಗೆ ಕಾಮಗಾರಿ ಪೂರ್ಣಗೊಂಡಿತ್ತು. ಶಾಸಕರು, ಮೇಯರ್‌, ಮುಡಾ ಆಯುಕ್ತರ ವೀಕ್ಷಣೆಗಾಗಿ ಸುಮಾರು 30 ನಿಮಿಷಗಳ ಪ್ರಾಯೋಗಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಳಿಕವೂ ಎರಡು ದಿನ ಪ್ರಾಯೋಗಿಕ ಪ್ರದರ್ಶನ ನಡೆದಿತ್ತು.

ಉದ್ಘಾಟನೆಗೆ ಒತ್ತಡ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಉರ್ವ ಮಾರುಕಟ್ಟೆ, ಕದ್ರಿ ಪುಟಾಣಿ ರೈಲು ಯೋಜನೆ ಸಹಿತ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳ ಜತೆಯಲ್ಲಿ ಕದ್ರಿ ಕಾರಂಜಿಯನ್ನೂ ಸಾರ್ವಜನಿಕರಿಗೆ ಮುಕ್ತವಾಗಿಸಲು ಇಲಾಖೆ ಯೋಜನೆ ಸಿದ್ಧಪಡಿಸಿತ್ತು. ಆದರೆ ಇಲಾಖೆಯೇ ಹೇಳುವ ಪ್ರಕಾರ, ಉರ್ವ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬೇಕು. ಹೀಗಿದ್ದಾಗ ರಾಜೀವ್‌ ಗಾಂಧಿ ಸಂಗೀತ ಕಾರಂಜಿಯನ್ನು ಸಾರ್ವಜನಿಕ ವೀಕ್ಷಣೆಗೆ ಒಪ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಡ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲೇ ಉದ್ಘಾಟನೆಗೆ ಚಿಂತಿಸಲಾಗುತ್ತಿದೆ.

ಕರಾವಳಿ ಸಂಸ್ಕೃತಿ ಅನಾವರಣ
ರಾಜೀವ್‌ ಗಾಂಧಿ ಸಂಗೀತ ಕಾರಂಜಿಯ ಮೂಲಕ ಕರಾವಳಿ ಸಂಸ್ಕೃತಿಯ ಅನಾವರಣವಾಗಲಿದೆ. ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಸಹಿತ ಸಂಸ್ಕೃತಿಯನ್ನು ಸಾದರಪಡಿಸುವ ಯೋಜನೆ ರೂಪಿಸಲಾಗಿದೆ.

Advertisement

ಉದ್ಘಾಟನೆಗೆ ಅಡ್ಡಿಯಿಲ್ಲ
ಸಂಗೀತ ಕಾರಂಜಿ ಕಾಮಗಾರಿ ಪೂರ್ಣಗೊಂಡಿದೆ. ಕೆಲವು ತಿಂಗಳ ಹಿಂದೆಯೇ ಉದ್ಘಾಟನೆಯಾಗಬೇಕಿತ್ತು. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ಯೋಚಿಸುತ್ತಿದ್ದೆವು. ಸದ್ಯ ಸಿಎಂ ಡೇಟ್‌ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಆಗಮಿಸದಿದ್ದರೂ, ರಾಜ್ಯ ಸಚಿವರ ಸಮ್ಮುಖದಲ್ಲಿ ಡಿಸೆಂಬರ್‌ನಲ್ಲಿಯೇ ಉದ್ಘಾಟನೆ ನೆರವೇರಿಸುತ್ತೇವೆ. ಪ್ರತಿ ದಿನ ಸಂಜೆ 6ರಿಂದ 8ರ ವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುತ್ತೇವೆ.
ಸುರೇಶ್‌ ಬಲ್ಲಾಳ್‌, ಮಂಗಳೂರು
  ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

   ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next