Advertisement

ಕೊಟ್ಟ ಮಾತು-ದಿಟ್ಟ ಸಾಧನೆ: ಸಾಧನಾ ಸಮಾವೇಶ ಇಂದು

01:13 PM Jun 03, 2017 | |

ಮೈಸೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೈಸೂರು ವಿಭಾಗಮಟ್ಟದ ಕೊಟ್ಟ ಮಾತು-ದಿಟ್ಟ ಸಾಧನೆ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ 11ಗಂಟೆಗೆ ಚಾಲನೆ ನೀಡಲಿದ್ದಾರೆ.

Advertisement

ಮೈಸೂರು ವಿಭಾಗದ ಎಂಟು ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಸಮಾವೇಶಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಮೂರು ದಿನಗಳ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿರುವ ವಸ್ತುಪ್ರದರ್ಶನಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆ ಸರ್ಕಾರದ ಸಾಧನೆಗಳನ್ನು ಬಿಂಬಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದಕ್ಕಾಗಿ ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕ ಎಂಬ ಚಿಂತನೆಯೊಂದಿಗೆ ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದ್ದು, ಆ ಮೂಲಕ ಸರ್ಕಾರದ 4 ವರ್ಷದ ಆಡಳಿತದ ಬಗ್ಗೆ ಜನರಿಗೆ ಪರಿಣಾಮಕಾರಿಗೆ ಮಾಹಿತಿ ನೀಡಲಾಗುವುದು ಎಂದರು.

30ಕ್ಕೂ ಹೆಚ್ಚು ಮಳಿಗೆ:  ಸವಲತ್ತು ವಿತರಣಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ವಸ್ತುಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ 20 ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಸರಬರಾಜು,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಯುವಜನ ಸೇವಾ ಮತ್ತು ಕ್ರೀಡೆ, ಮೈಸೂರು ಮಹಾನಗರ ಪಾಲಿಕೆ, ಪೊಲೀಸ್‌, ಲೋಕೋಪಯೋಗಿ, ಸಾರ್ವಜನಿಕ ಶಿಕ್ಷಣ ಸೇರಿದಂತೆ ಇನ್ನಿತರ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು,

Advertisement

ಪ್ರತಿ ಇಲಾಖೆಗಳಲ್ಲಿನ ಕಾರ್ಯಕ್ರಮ, ಯೋಜನೆ ಹಾಗೂ ಜನರಿಗೆ ನೀಡಲಾಗುವ ಸವಲತ್ತುಗಳ ಬಗ್ಗೆ ಮಳಿಗೆಗಳಲ್ಲಿ ಮಾಹಿತಿ ನೀಡಲಾಗುವುದು. ಇದರೊಂದಿಗೆ ಮೈಸೂರು ವಿಭಾಗಮಟ್ಟದ 8 ಜಿಲ್ಲೆಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಳಿಗೆಗಳ ಜತೆಗೆ 10 ಆಹಾರ ಮಳಿಗೆಗಳನ್ನು ತೆರೆಯಲಾಗಿದೆ.

ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಜಿಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಂದಿನಿ ಚಂದ್ರಶೇಖರ್‌,

ಜಿಲ್ಲಾಧಿಕಾರಿ ಡಿ.ರಂದೀಪ್‌, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯರಾವ್‌, ಪಾಲಿಕೆ ಆಯುಕ್ತ ಜಿ.ಜಗದೀಶ್‌, ಮುಡಾ ಆಯುಕ್ತ ಡಾ.ಮಹೇಶ್‌, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರಾಧ್ಯಕ್ಷ ಆರ್‌.ಮೂರ್ತಿ ಇನ್ನಿತರರು ಹಾಜರಿದ್ದರು.

ಬಿಗಿ ಪೊಲೀಸ್‌ ಭದ್ರತೆ: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೊಟ್ಟ ಮಾತು-ದಿಟ್ಟ ಸಾಧನೆ ಸೌಲಭ್ಯ ವಿತರಣಾ ಕಾರ್ಯಕ್ರಮಕ್ಕೆ ಭಾರೀ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ರಾಜ್ಯ ಸರ್ಕಾರದ ಸಾಧನೆ ಬಿಂಬಿಸುವ ಸಮಾವೇಶದಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸುವ ಹಿನ್ನಲೆ ನೂರಾರು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ.

ಅದರಂತೆ 3 ಎಸ್ಪಿ, 6 ಡಿಸಿಪಿ ದರ್ಜೆ ಅಧಿಕಾರಿಗಳು, 25 ಇನ್ಸ್‌ಪೆಕ್ಟರ್‌, 40 ಸಬ್‌ ಇನ್ಸ್‌ಪೆಕ್ಟರ್‌, 60 ಎಎಸ್‌ಐ, 500 ಮುಖ್ಯಪೇದೆಗಳು/ಪೇದೆಗಳು, 30 ಮಹಿಳಾ ಸಿಬ್ಬಂದಿ, 200 ಹೋಂಗಾರ್ಡ್‌, 6 ಕೆಎಸ್‌ಆರ್‌ಪಿ, ಮೌಂಟೆಡ್‌ ಪೊಲೀಸ್‌, ಅಶ್ವರೋಹಿ ದಳ, 5 ವಿಧ್ವಂಸಕ ಕೃತ್ಯ ತಡೆ ತಂಡ, ಜಿಲ್ಲಾವಾರು ಕ್ರೆಂ ಸಿಬ್ಬಂದಿ ಜತೆಗೆ ಸ್ಥಳದಲ್ಲೇ ಪೊಲೀಸ್‌ ಚೌಕಿಗಳನ್ನು ಸಹ ತೆರೆಯಲಾಗಿದೆ ಎಂದು ಕಾನೂನು ಸುವ್ಯಸ್ಥೆ ವಿಭಾಗದ ಡಿಸಿಪಿ ಡಾ.ಎಚ್‌.ಟಿ.ಶೇಖರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next