ಬೆಳಗಾವಿ: ಪೌರ ಕಾರ್ಮಿಕನೊಬ್ಬನಿಗೆ ನಾಲ್ಕು ತಿಂಗಳಿನಿಂದ ವೇತನವಿಲ್ಲ. ಹೆಂಡತಿ ಹಸಿ ಬಾಣಂತಿ. ಒಂದೂವರೆ ತಿಂಗಳ ಮಗುವಿಗೆ ತೀವ್ರ ಅನಾರೋಗ್ಯ. ಚಿಕಿತ್ಸೆಗೆ ಹಣವಿಲ್ಲದೇ ದಿಕ್ಕು ತೋಚದಾದಾಗ ಹೆಂಡತಿ ತಾಳಿಯನ್ನೇ ಅಡವಿಟ್ಟಿದ್ದಾನೆ. ಇಷ್ಟಾದರೂ ಮಗು ಮೃತಪಟ್ಟಿದೆ!.
ನಗರದ ವಡಂಗಾವನ ಮಲಪ್ರಭಾ ನಗರ ನಿವಾಸಿ, ಮಹಾನಗರ ಪಾಲಿಕೆಯಲ್ಲಿ ಆರು ವರ್ಷದಿಂದ ಗುತ್ತಿಗೆ ಪೌರ ಕಾರ್ಮಿಕನಾಗಿ ದುಡಿಯುತ್ತಿರುವ ಭೀಮಾ ಗೊಲ್ಲರ ಕುಟುಂಬದ ಕಥೆ ಇದು. ಭೀಮಾ ಹಾಗೂ ಪೂಜಾ ಗೊಲ್ಲರಗೆ ಮೂವರು ಮಕ್ಕಳು. ಮೊದಲನೇ ಮಗ ದುರ್ಗೇಶ ಒಂದನೇ ತರಗತಿ ಓದುತ್ತಿದ್ದಾನೆ. ಎರಡನೇ ಮಗಳು ಅಲಿಯಾ ಮೂರು ವರ್ಷದವಳಿದ್ದು, ಮೂರನೇ ಮಗ ಒಂದೂವರೆ ತಿಂಗಳ ಅವಿನಾಶ.
ಜ.26ರಂದು ಅವಿನಾಶ ವಿಪರೀತ ಜ್ವರದಿಂದ ಬಳಲುತ್ತಿದ್ದ. ಜ.27ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆ ವೆಚ್ಚ ಹೆಚ್ಚಾಗುತ್ತಿದ್ದಂತೆ ಕಂಗಾಲಾದ ಗೊಲ್ಲರ ಕುಟುಂಬಕ್ಕೆ ದಿಕ್ಕೇ ತೋಚದಾಯಿತು. ಮೊದಲೇ ಹಣ ಇಲ್ಲದೇ ಸಂಕಷ್ಟ ಇತ್ತು. ಪತ್ನಿ ಪೂಜಾ ಗೊಲ್ಲರ ಅವರ ಮಾಂಗಲ್ಯ ಅಡವಿಟ್ಟು 10 ಸಾವಿರ ತಂದು ಆಸ್ಪತ್ರೆಗೆ ತುಂಬಿದ್ದಾರೆ. ಬೇರೆ ಕಡೆ ಸಾಲ ಮಾಡಿ ಮತ್ತೆ 5 ಸಾವಿರ ತುಂಬಿದ್ದಾರೆ. ಜತೆಗೆ ಔಷಧಿ ಹಾಗೂ ರಕ್ತದ ಖರ್ಚು ಬೇರೆ. ಇಷ್ಟೆಲ್ಲ ಖರ್ಚು ಮಾಡಿದರೂ ಮಗು ಮಾತ್ರ ಬದುಕುಳಿಯಲಿಲ್ಲ. ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ವಿಧಿಯ ಎದುರು ಬಡ ದಂಪತಿ ಶರಣಾಗಿದ್ದಾರೆ.
ಸರ್ಕಾರಕ್ಕೆ ಕಾಣುತ್ತಿಲ್ಲವೇ?: ವೇತನ ಕೊಡದೆ ಸತಾಯಿಸುತ್ತಿರುವ ಸರ್ಕಾರದಿಂದಲೇ ತಮಗೆ ಈ ದುರ್ಗತಿ ಬಂದಿದೆ. ಮುಂದೆ ಇನ್ನೂ ಸಂಕಷ್ಟದ ದಿನಗಳು ಎದುರಾಗಲಿವೆ. ವೇತನ ಸರಿಯಾಗಿ ಬಂದಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ಭೀಮಾ ಗೊಲ್ಲರ ಕಣ್ಣೀರು ಸುರಿಸುತ್ತಾರೆ. ಭೀಮಾ ಗೊಲ್ಲರಗೆ ಪ್ರತಿ ತಿಂಗಳು 12 ಸಾವಿರ ರೂ.ವೇತನ. ಇದರಲ್ಲಿಯೇ ಮನೆಯ ಜವಾಬ್ದಾರಿ, ಮೂವರು ಮಕ್ಕಳ ಪಾಲನೆ ಮಾಡಬೇಕು. ಅದರಲ್ಲೇ ಜೀವನ ನಡೆಸುವುದು ಕಷ್ಟವಿರುವಾಗ ನಾಲ್ಕು ತಿಂಗಳಿನಿಂದ ವೇತನವೇ ಸಿಗದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ.
ವೇತನಕ್ಕಾಗಿ ಆಗ್ರಹಿಸಿ ಗುತ್ತಿಗೆ ಪೌರ ಕಾರ್ಮಿಕರು ಸರ್ಕಾರ ಹಾಗೂ ಮಹಾನಗರ ಪಾಲಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜ.9 ಹಾಗೂ 10 ರಂದು ಕೆಲಸ ನಿಲ್ಲಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಎರಡೇ ದಿನದಲ್ಲಿ ಒಂದು ತಿಂಗಳ ವೇತನವನ್ನು ಖಾತೆಗೆ ಜಮಾ ಮಾಡಲಾಗುವುದು ಎನ್ನುವ ಅಧಿಕಾರಿಗಳ ಭರವಸೆ ನಂಬಿ ಪ್ರತಿಭಟನೆ ಹಿಂಪಡೆದಿದ್ದ ಪೌರ ಕಾರ್ಮಿಕರಿಗೆ ಇನ್ನೂವರೆಗೆ ಒಂದು ಪೈಸೆ ಕೂಡ ಕೈಗೆ ದಕ್ಕಿಲ್ಲ. ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗೂ ಜನವರಿ ಮುಗಿಯಲು ಬಂದರೂ ಇನ್ನೂ ವೇತನ ಜಮಾ ಆಗಿಲ್ಲ.
ಪತಿಯೇ ಕುಟುಂಬಕ್ಕೆ ಆಸರೆ. ಅವರು ದುಡಿದು ತಂದಾಗಲೇ ಮನೆಯ ಒಲೆ ಉರಿಯುತ್ತದೆ. 4 ತಿಂಗಳಿಂದ ವೇತನ ಆಗದಿದ್ದಕ್ಕೆನನ್ನ ಮಾಂಗಲ್ಯ ಅಡವಿಟ್ಟಿದ್ದೇನೆ. ಆದರೂ ಮಗು ಬದುಕುಳಿಯಲಿಲ್ಲ.
– ಪೂಜಾ ಗೊಲ್ಲರ, ಮಗುವಿನ ತಾಯಿ
ನಾಲ್ಕು ತಿಂಗಳ ಪಗಾರ ಬಾರದಕ್ಕೆ ನನ್ನ ಕುಟುಂಬ ಸಂಕಷ್ಟದಲ್ಲಿದೆ.ಮಗು ವಿಪರೀತ ಜ್ವರದಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ದಾಖಲಿಸಿದಾಗ ಬಿಲ್ ಹೆಚ್ಚಾಯಿತು. ಹೀಗಾಗಿ ಅನಿವಾರ್ಯವಾಗಿ ಹೆಂಡತಿಯ ಮಾಂಗಲ್ಯ ಅಡ ಇಡಲಾಯಿತು. ಈಗ ಕಿವಿಯೋಲೆಯನ್ನೂ ಅಡ ಇಡುವ ಸ್ಥಿತಿ ಬಂದಿದೆ.
– ಭೀಮಾ ಗೊಲ್ಲರ, ಮಗುವಿನ ತಂದೆ
ಮಹಾನಗರ ಪಾಲಿಕೆಯಲ್ಲಿ 1099 ಗುತ್ತಿಗೆ ಪೌರ ಕಾರ್ಮಿಕರಿದ್ದು,ಪ್ರತಿ ತಿಂಗಳು 2.50 ಕೋಟಿ ರೂ.ವೇತನ ನೀಡಬೇಕಾಗುತ್ತದೆ.
ಅಕ್ಟೋಬರ್‌ನಿಂದ ಕಾರ್ಮಿಕರಿಗೆ ವೇತನ ಪಾವತಿಸಿಲ್ಲ. ತೆರಿಗೆ ಹಣ ಅಷ್ಟೊಂದು ಜಮಾ ಆಗದಿದ್ದಕ್ಕೆ ಸಮಸ್ಯೆ ಆಗಿದೆ. ರಾಜ್ಯದ ಎಲ್ಲ ಕಡೆಯೂ ಈ ಸಮಸ್ಯೆ ಇದೆ. ಇನ್ನೆರಡು ದಿನದಲ್ಲಿ 1 ತಿಂಗಳ ವೇತನ ಪಾವತಿಸಲಾಗುವುದು.
– ಉದಯಕುಮಾರ, ಪಾಲಿಕೆ ಅಧಿಕಾರಿ