Advertisement

ಬಾಗಲಕೋಟೆಯ ಹುಲಸಗೇರಿ ಹಳ್ಳಿ ಪೂರ್ತಿ ಡಿಜಿಟಲ್‌

03:45 AM Jan 12, 2017 | |

ಬಾಗಲಕೋಟೆ: ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಪ್ರಯತ್ನದ ಭಾಗವಾಗಿ ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಹುಲಸಗೇರಿ ಜ.12ರಿಂದ ಸಂಪೂರ್ಣ ಡಿಜಿಟಲ್‌ ಆಗುತ್ತಿದೆ. ಬಸ್‌ ವ್ಯವಸ್ಥೆ ಕಾಣದ ಹುಲಸಗೇರಿ ಗ್ರಾಮಸ್ಥರ ಸಹಕಾರ, ನಬಾರ್ಡ್‌ ನೆರವು ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಪ್ರಯತ್ನದ ಫಲವಾಗಿ ನಗದುರಹಿತ ವಹಿವಾಟಿನತ್ತ ಹೆಜ್ಜೆ ಹಾಕಿದೆ. 

Advertisement

ಈ ಊರಿನಲ್ಲಿ ಯಾವುದೇ ಬ್ಯಾಂಕ್‌ ಶಾಖೆಗಳಿಲ್ಲ. ಪಕ್ಕದ ಕಟಗೇರಿ, ಜಮ್ಮನಕಟ್ಟಿಯಲ್ಲಿ ಬ್ಯಾಂಕ್‌ಗಳಿವೆ. ಈ ಗ್ರಾಮವನ್ನು ದತ್ತು ಪಡೆದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಒಬ್ಬರು ಬಿಸಿ (ಬ್ಯಾಂಕಿಂಗ್‌ ಕರೆಸ್ಪಾಂಡೆಂಟ್‌) ಸಿಬ್ಬಂದಿ ನಿಯೋಜನೆ ಮಾಡಿದ್ದು, ಅವರಿಗೆ ಮೈಕ್ರೋ ಎಟಿಎಂ ಮತ್ತು ಪಿಒಎಸ್‌ ಯಂತ್ರ ನೀಡಿದೆ. ಗ್ರಾಮಸ್ಥರು ಬಿತ್ತನೆ ಬೀಜ, ರಸಗೊಬ್ಬರ, ಕಿರಾಣಿ ವಸ್ತುಗಳ ಖರೀದಿ ಮಾಡಿದಾಗೆಲ್ಲ ನೇರ ನಗದು ವರ್ಗಾವಣೆ ಮೂಲಕ ತಮ್ಮ ಖಾತೆಯಿಂದಲೇ ಹಣ ಪಾವತಿಸುತ್ತಾರೆ. ಒಂದು ವಾರದಿಂದ ಈ ಕಾರ್ಯ ಆರಂಭಗೊಂಡಿದ್ದು, ಜ. 12ರಿಂದ ಅಧಿಕೃತವಾಗಿ ಡಿಜಿಟಲ್‌ ಗ್ರಾಮವನ್ನಾಗಿ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಎಸ್‌. ರವೀಂದ್ರನ್‌ ಘೋಷಣೆ ಮಾಡಲಿದ್ದಾರೆ.

619 ಜನರಿಗಿದೆ ಬ್ಯಾಂಕ್‌ ಖಾತೆ: 
ಈ ಗ್ರಾಮದಲ್ಲಿ ಒಟ್ಟು 697 ಜನರು ವಾಸವಾಗಿದ್ದಾರೆ. ಅದರಲ್ಲಿ 619 ಜನರು ಬ್ಯಾಂಕ್‌ ಖಾತೆ ಹೊಂದಿದ್ದು, ಅವರಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಿಂದ ರೂಪೆ ಕಾರ್ಡ್‌ ವಿತರಿಸಲಾಗಿದೆ. ನಗದುರಹಿತ ವಹಿವಾಟಿಗೆ ಜನರು ತಕ್ಷಣ ಸ್ಪಂದಿಸಲು ಮೈಕ್ರೋ ಎಟಿಎಂಗಳನ್ನು ಬಳಸಲಾಗುತ್ತಿದೆ. ಗ್ರಾಮೀಣ ಬ್ಯಾಂಕ್‌ ಸಖೀ ಯೋಜನೆಯಡಿ ಮಹಿಳಾ ಸಿಬ್ಬಂದಿ ಹಣಕಾಸು ವ್ಯವಹಾರಕ್ಕೆ ನೆರವಾಗುತ್ತಾರೆ. ಮೈಕ್ರೋ ಎಟಿಎಂ (ಖಾತೆಗೆ ಆಧಾರ್‌ ಲಿಂಕ್‌ ಮಾಡಿದ್ದರೆ ಮಾತ್ರ) ಮೂಲಕ ಜನರು ನೀಡುವ ಹಣ ಅವರ ಅಕೌಂಟ್‌ಗೆ ಜಮೆ ಮಾಡುವುದು ಹಾಗೂ 2000 ರೂ. ಮಿತಿಯಲ್ಲಿ ವಿತ್‌ ಡ್ರಾ ಮಾಡಲು ಮಹಿಳಾ ಸಿಬ್ಬಂದಿ ಸಹಾಯ ಮಾಡುತ್ತಾರೆ.

ಉಚಿತ ಪಿಒಎಸ್‌ ಯಂತ್ರ
ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಯಾವ ಬ್ಯಾಂಕಿನ ಗ್ರಾಹಕರು ಪಿಒಎಸ್‌- ಮೈಕ್ರೋ ಎಟಿಎಂ ಮೂಲಕ ವ್ಯವಹಾರ ಮಾಡುತ್ತಾರೋ ಅವರಿಗೆ ಈಯಂತ್ರಗಳನ್ನು ನಬಾರ್ಡ್‌ನಿಂದ ಉಚಿತವಾಗಿ ನೀಡಲಾಗುತ್ತಿದೆ. ಹುಲಸಗೇರಿಯ ಎರಡು ಕಿರಾಣಿ ಅಂಗಡಿ, ಎರಡು ಹೊಟೇಲ್‌ಗ‌ಳ ವ್ಯವಹಾರಕ್ಕೆ ಪಿಒಎಸ್‌ ಯಂತ್ರ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಕಾರ್ಡ್‌ ಬಳಸಿ ವಸ್ತುಗಳ ಖರೀದಿ ಮಾಡಹುದು ಎನ್ನುತ್ತಾರೆ ನಬಾರ್ಡ್‌ ಎಜಿಎಂ ರಾಘವೇಂದ್ರ ದೂದಿಹಳ್ಳಿ. 

ನಗದುರಹಿತ ವ್ಯವಹಾರಕ್ಕೆ ಸಂಪೂರ್ಣ ಡಿಜಿಟಲೀಕರಣ ಅಗತ್ಯ. ಹೀಗಾಗಿ ಹುಲಸಗೇರಿಯ 697 ಜನರಿಗೂ ಬ್ಯಾಂಕ್‌ ಖಾತೆ ಮಾಡಲಾಗುತ್ತಿದೆ. 60ಕ್ಕೂ ಹೆಚ್ಚು ಖಾತೆದಾರರಿಗೆ ಮೊಬೈಲ್‌ ಆ್ಯಪ್‌ ಅಳವಡಿಸಲಾಗಿದೆ. ಡಿಜಿಟಲ್‌ ಗ್ರಾಮ ಯೋಜನೆ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ನಗದುರಹಿತ ವ್ಯವಹಾರವೂ ಆರಂಭಗೊಳ್ಳಲಿದೆ.
– ನಾರಾಯಣ ಯಾಜಿ, ಪ್ರಾದೇಶಿಕ ವ್ಯವಸ್ಥಾಪಕರು, ವಿಕಾಸ ಗ್ರಾಮೀಣ ಬ್ಯಾಂಕ್‌

Advertisement

ಏನೆಲ್ಲ ಬೆಳದೈತಿ ನೋಡ್ರಿ. ನಮ್ಮೂರಿಗಿ ವಾರಕ್ಕೊಮ್ಮೆ ದೊಡ್ಡ ಎಟಿಎಂ (ಸಂಚಾರಿ ಎಟಿಎಂ) ಬರೆ¤$çತಿ. ಅದರಾಗ 4,500 ರೊಕ್ಕಾ ತಕ್ಕೊಬಹುದು. ಮತ್ತ ಗ್ರಾಮೀಣ ಬ್ಯಾಂಕ್‌ನ ಒಬ್ಬ ಮಹಿಳೆ ಮೈಕ್ರೋ ಎಟಿಎಂ ಅಂತ ತರ್ತಾರ್‌. ಅದರಾಗ 2000 ರೂ. ತಗೋಬಹುದು. ನಾನು ವಾರದಿಂದ ರೊಕ್ಕಾ ಬೇಕಂದ್ರ ನಮ್ಮೂರಾಗ್‌ ಪಡ್ಯಾಕ್‌ ಹತ್ತೀನಿ.
-ಭೀಮಪ್ಪ ಗೋಠೆ, ಹುಲಸಗೇರಿ ಗ್ರಾಮಸ್ಥ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next