ಆಳಂದ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನಿತರ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಬೆಳಮಗಿ ಗ್ರಾಪಂ ಎದುರು ಸದಸ್ಯೆ ಪಾರ್ವತಿ ಅಂಬರಾಯ ಕೈಗೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 42ನೇ ದಿನಕ್ಕೆ ಕಾಲಿಟ್ಟಿದೆ.
ಸಿಡಿಪಿಒ ವಿರುದ್ಧ ಲೋಕಾಯುಕ್ತರಿಗೆ ದೂರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಧರಣಿ ನಿರತರು, ಬೇಡಿಕೆಗೆ ಈಡೇರದ ಹಿನ್ನೆಲೆಯಲ್ಲಿ ಜೂನ್ 1ರಿಂದಲೇ ಧರಣಿ ನಿರತ ಪಾರ್ವತಿ ಅವರು ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದರಾದರೂ ಗ್ರಾಮಸ್ಥರ ಒತ್ತಾಯದ ಮೆರೆಗೆ ಉಪವಾಸ ಮುಂದೂಡಿ ಕೇವಲ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದು, ಇದುವರೆಗೂ ಸಂಬಂಧಿತ ಮೇಲಧಿಕಾರಿಗಳು ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಿಡಿಪಿಒ ಅಮಾನತುಗೊಳಿಸಬೇಕು ಹಾಗೂ ದಲಿತ ಬಡಾವಣೆಯಲ್ಲಿ ಕೆಟ್ಟುನಿಂತ ಶುದ್ಧ ನೀರಿನ ಘಟಕ ದುರಸ್ತಿಗೊಳಿಸಿ ನೀರು ಒದಗಿಸಬೇಕು ಎಂಬ ಹಲವು ಬೇಡಿಕೆಗೆ ಒತ್ತಾಯಿಸಿ 42 ದಿನಗಳಿಂದಲೂ ನಡೆಸಿದ ಧರಣಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.
ಗ್ರಾಮದ ದಲಿತ ಬಡಾವಣೆಯ ಶುದ್ಧ ನೀರಿನ ಘಟಕ ದುರಸ್ತಿಗೊಳಿಸಬೇಕು ಎಂದು ಹೇಳಿದರೂ ಪ್ರಯೋಜನವಾಗಿಲ್ಲ. ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯದ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು ಸಿಡಿಪಿಒ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಸಿಡಿಪಿಒ ಅವರು ಅಂಗನವಾಡಿ ಮೂಲಕ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳನ್ನು ವಿತರಿಸುವಲ್ಲಿ ವಿಫಲವಾಗಿದ್ದರ ವಿರುದ್ಧ ಅವರನ್ನು ಅಮಾನತುಗೊಳಿಸುವಂತೆ ಹಾಗೂ ಗ್ರಾಮದ ದಲಿತ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರು ಕೊಡಲಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೇ ಮುಂದಿನ ನಡೆ ಪ್ರಕಟಿಸ ಲಾಗುವುದು ಎಂದು ಹೇಳಿದರು.