ಸುಬ್ರಹ್ಮಣ್ಯ: ಪುಷ್ಪಗಿರಿಗೆ ಭಾನುವಾರ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ ಸಂತೋಷ್ (25) ಮಂಗಳವಾರ ಸುರಕ್ಷಿತವಾಗಿ ಪತ್ತೆಯಾಗಿದ್ದು, ಮೂರು ದಿನಗಳಿಂದ ನೆಲೆಸಿದ್ದ ಆತಂಕಕ್ಕೆ ತೆರೆ ಬಿದ್ದಿದೆ. ಮಂಗಳವಾರ ಮಧ್ಯಾಹ್ನ ಸುಬ್ರಹ್ಮಣ್ಯ ಸಮೀಪದ ಕಲ್ಲುಗುಡ್ಡೆ ತಲುಪಿದ ಸಂತೋಷ್‌ಗೆ ಕುಕ್ಕೆ ದೇಗುಲದ ದೈವ ನರ್ತಕ ಪುರುಷೋತ್ತಮ ಎದುರಾಗಿದ್ದು, ಅವರಲ್ಲಿ ತನ್ನನ್ನು ಬಸ್ ನಿಲ್ದಾಣಕ್ಕೆ ಬಿಡುವಂತೆ ಕೇಳಿದ್ದ.
ನಾಪತ್ತೆಯಾಗಿದ್ದ ವ್ಯಕ್ತಿ ಈತನೇ ಎನ್ನುವುದು ಪುರುಷೋತ್ತಮ ಅವರಿಗೆ ಮನದಟ್ಟಾಗಿದ್ದರಿಂದ ಸ್ಥಳೀಯ ಮನೆಯಲ್ಲಿ ಆಹಾರ ನೀಡಿ ಉಪಚರಿಸಿ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಕರೆ ತಂದರು. ಠಾಣೆಯಲ್ಲಿಯೂ ಫಲಾಹಾರ ನೀಡಲಾಯಿತು. ಬಳಿಕ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದರು. ಕಾಲಿಗೆ ತಿಗಣೆ ಕಚ್ಚಿ ಗಾಯಗಳಾಗಿದ್ದು ಬಿಟ್ಟರೆ ಇನ್ನೇನೂ ಸಮಸ್ಯೆ ಆಗಿರಲಿಲ್ಲ.
ಸಂತೋಷನ ಸ್ನೇಹಿತರು ಸೋಮವಾರ ಸುಬ್ರಹ್ಮಣ್ಯ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸುಬ್ರಹ್ಮಣ್ಯಕ್ಕೆ ಆಗಮಿಸಿ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡರು. 6 ತಂಡಗಳು ಕಾಡಿಗೆ ತೆರಳಿದ್ದವು.
ತಂಡದಲ್ಲಿ ಸಂಪ್ಯ, ಸುಳ್ಯ, ಬೆಳ್ಳಾರೆ, ಪುತ್ತೂರು ನಗರ, ಸೋಮವಾರಪೇಟೆ ಠಾಣೆಗಳ 50ಕ್ಕೂ ಅಧಿ ಕ ಪೊಲೀಸರು, ಮಡಿಕೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಮಲೆಕುಡಿಯರು, ಸುಬ್ರಹ್ಮಣ್ಯ ಗ್ರಾ.ಪಂ., ಸಂಘ-ಸಂಸ್ಥೆಗಳ ಸದಸ್ಯರು, ವಾಹನ ಚಾಲಕ-ಮಾಲಿಕರು, ಯುವಬ್ರಿಗೇಡ್ ತಂಡ ಹಾಗೂ ನಾಗರಿಕರು ಭಾಗವಹಿಸಿದ್ದರು. ಆದರೆ ಸಂತೋಷ್ ಪತ್ತೆಯಾಗಿರಲಿಲ್ಲ.
ಎರಡು ದಿನಗಳ ಬಳಿಕ ತಾವಾಗಿಯೇ ದಾರಿಯನ್ನು ಅರಸುತ್ತ ನಗರ ಸೇರಿದ್ದಾರೆ. ಸಂತೋಷ್ ಅವರು ಬೆಂಗಳೂರಿನ ಬಿಬಿಎಂಪಿಯ ಗುತ್ತಿಗೆದಾರ ಆಂಜನಮೂರ್ತಿ ಅವರ ಪುತ್ರರಾಗಿದ್ದು, ಗಾಯತ್ರಿ ನಗರದ ನಿವಾಸಿಯಾಗಿದ್ದಾರೆ. 12 ಮಂದಿಯ ತಂಡದೊಂದಿಗೆ ಚಾರಣಕ್ಕೆ ತೆರಳಿದ್ದ ಸಂದರ್ಭ ನಾಪತ್ತೆಯಾಗಿದ್ದರು.
ನೆರವಾಯಿತು ಪೈಪ್‌ಲೈನ್: ಸಂತೋಷ್ ದಾರಿಗಾಣದೆ ಎರಡು ದಿನ ದಟ್ಟ ಅರಣ್ಯದೊಳಗೆ ಕಳೆದಿದ್ದರು. ಹಗಲು ದಾರಿಯನ್ನು ಅರಸುತ್ತ ಅಲೆದಾಡಿದ್ದು, ಬಾಯಾರಿದಾಗ ಅರಣ್ಯದ ನೀರನ್ನೇ ಕುಡಿದಿದ್ದರು. ಎತ್ತರದ ಬಂಡೆಯ ಮೇಲೆ ರಾತ್ರಿಯಿಡಿ ಜಾಗರಣೆ ಮಾಡಿದ್ದರು. ದಟ್ಟಾರಣ್ಯದಲ್ಲಿ ಅಲೆಯುತ್ತಿದ್ದವನಿಗೆ ಕೊನೆಗೆ ದಾರಿ ತೋರಿದ್ದು ನೀರಿನ ಪೈಪ್‌ಲೈನ್. ಕುಕ್ಕೆ ಕ್ಷೇತ್ರಕ್ಕೆ 4 ಕಿ.ಮೀ.ದೂರದ ಕಾಡಿನಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜಾಗುತ್ತದೆ. ಪೈಪ್‌ಗ್ಳನ್ನು ಕಂಡ ಸಂತೋಷ್, ಇಲ್ಲೆಲ್ಲೋ ಜನವಸತಿಯಿದೆ ಎಂದುಕೊಂಡು ಬಂದು ಕಲ್ಲುಗುಡ್ಡೆ ತಲುಪಿದರು. ಬಳಿಕ ಅವರನ್ನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಸ್ನೇಹಿತರ ಜತೆ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ದೇವರ ಅನುಗ್ರಹದಿಂದ ಬದುಕಿ ಬಂದೆ. ನನಗಾಗಿ ಪೊಲೀಸರು, ಅರಣ್ಯ ಇಲಾಖೆಯವರು, ಸ್ಥಳೀಯರು ತುಂಬಾ ಶ್ರಮಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು.
-ಸಂತೋಷ್, ನಾಪತ್ತೆಯಾಗಿದ್ದ ಉದ್ಯೋಗಿ