Advertisement

ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರ ಪೂರ್ಣ

09:16 PM Nov 11, 2019 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ವಿವರವಾಗಿ ಪರಾಮರ್ಶೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಯವರು ವಿಳಂಬ ಮಾಡದೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಯೋಜನೆಗೆ ಅಗತ್ಯವಿರುವ ವಿದ್ಯುತ್‌ ಸಂಪರ್ಕವನ್ನು ಸಹ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಮಗಾರಿ ಸಂಪೂರ್ಣಗೊಳಿಸಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಹತ್ವದ್ದಾಗಿದೆ. ಇದರಿಂದ ಜಿಲ್ಲೆಯ ಅನೇಕ ಕೆರೆಗಳಿಗೆ ನೀರು ತುಂಬಲಿದೆ. ಹೀಗಾದಾಗ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಕುಡಿಯುವ ನೀರು ಹಾಗೂ ಕೃಷಿಗೆ ಬಹಳ ಅನುಕೂಲಕರವಾಗಲಿದೆ. ಹಾಗಾಗಿ ಈ ಯೋಜನೆಯ ಬಗ್ಗೆ ತೀವ್ರ ನಿಗಾ ವಹಿಸಿ, ಕಾಮಗಾರಿಯನ್ನು ತ್ವರಿತವಾಗಿ ಸಂಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಕೃಷಿ ಇಲಾಖೆಯ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಸಗೊಬ್ಬರಗಳು ರೈತರಿಗೆ ಅಗತ್ಯ ಸಮಯದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆ ಉಂಟಾಗಬಾರದು. ಜತೆಗೆ ಜಿಲ್ಲೆಯ ಎಲ್ಲಾ ಬೆಳೆಗಳ ಸಂಪೂರ್ಣ ಸಮೀಕ್ಷೆಯನ್ನು ಮಾಡಿ, ವಾರದ ಒಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಅರ್ಹ ರೈತರಿಗೆ ಯೋಜನೆ ತಲುಪಲಿ: ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಪ್ರಯೋಜನ ಅರ್ಹ ರೈತರೆಲ್ಲರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಕ್ರಿಯೆಯನ್ನು ಸಮಪರ್ಕವಾಗಿ ನಿರ್ವಹಿಸಬೇಕು. ಯಾರೂ ಕೂಡ ಯೋಜನೆಯಿಂದ ಹೊರಗೆ ಉಳಿದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Advertisement

ಆರೋಗ್ಯ ಸೌಲಭ್ಯದಿಂದ ವಂಚಿತರಾಗದಿರಿ: ಆರೋಗ್ಯ ಇಲಾಖೆಯ ಯೋಜನೆಗಳ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಯವರು, ಬಿಪಿಎಲ್‌ ಕಾರ್ಡ್‌ದಾರರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅನುಕೂಲ ಒದಗಿಸುವ ಆರೋಗ್ಯ ಕಾರ್ಡ್‌ ಯೋಜನೆ ಪ್ರಮುಖವಾದುದು. ಹಾಗಾಗಿ ಫ‌ಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ ವಿತರಣೆ ತ್ವರಿತಗತಿಯಲ್ಲಿ ಆಗಬೇಕು. ಯಾವೊಬ್ಬ ವ್ಯಕ್ತಿಯೂ ಆರೋಗ್ಯ ಸೌಲಭ್ಯದಿಂದ ವಂಚಿತರಾಗಬಾರದು. ಜಿಲ್ಲೆಯಲ್ಲಿ ಆರೋಗ್ಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವ್ಯವಸ್ಥೆ ಪರಿಶೀಲಿಸುವ ಕೆಲಸ ಆಗಲಿ: ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವ ಕೆಲಸ ಆಗಬೇಕು. ಅಲ್ಲಿನ ಆಹಾರ ಗುಣಮಟ್ಟ, ಸ್ವಚ್ಛತೆ, ಇತರ ಸವಲತ್ತುಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಮಕ್ಕಳಲ್ಲಿ ಶಾಲೆಗೆ ಬಾರದಿರುವ ಪ್ರಮಾಣವನ್ನು ಪರಿಶೀಲಿಸಬೇಕು.

ಇಂತ ಪ್ರದೇಶಗಳಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಕರಣಗಳಿವೆ. ಹಾಗಾಗಿ ಶಾಲೆಯಿಂದ ಹೊರಗುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳಲ್ಲಿ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಿ, ವಸತಿ ನಿಲಯಗಳಿಗೆ ಕರೆತಂದು ವಿದ್ಯಾಭ್ಯಾಸ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಕೆಲ ಭಾಗಗಳಲ್ಲಿ ಪ್ರವಾಹದಿಂದ ಉಂಟಾದ ಸಮಸ್ಯೆಗಳಿಗೆ ಕೈಗೊಳ್ಳಲಾಗಿರುವ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಉತ್ತಮ ವಾತಾವರಣವಿದೆ. ಈ ಎರಡೂ ವಿಭಾಗಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ರೈತರನ್ನು ಪ್ರೇರೇಪಿಸಬೇಕು. ಇದರಿಂದ ಈ ಕ್ಷೇತ್ರದಲ್ಲಿ ಜಿಲ್ಲೆಯೂ ಪ್ರಗತಿ ಸಾಧಿಸಿದಂತಾಗಲಿದೆ.
-ರಾಜೇಂದರ್‌ ಕುಮಾರ್‌ ಕಟಾರಿಯಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next