Advertisement

ನೀರಿನ ಬರ –ಶಾಲೆ, ಹೊಟೇಲುಗಳಿಗೆ ಬರೆ…!

04:10 PM Apr 01, 2017 | |

ಉಡುಪಿ: ನಗರ ಮತ್ತು ಗ್ರಾಮಾಂತರದಲ್ಲಿ ತಲೆ ಎತ್ತಿದ ನೀರಿನ ಬರ ಶಾಲೆ ಮತ್ತು ಹೊಟೇಲುಗಳ ಮೇಲೆ ಪರಿಣಾಮ ಬೀರುತ್ತಿದೆ. 

Advertisement

ಶಾಲೆಗಳಲ್ಲಿ ಈಗ ವರ್ಷಾಂತ್ಯದ ಸಮಯ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದು ಎಸೆಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದೆ. ಬಹುತೇಕ ಶಾಲೆಗಳ ಬಾವಿಯ ನೀರು ಬತ್ತಿದೆ. ಸ್ಥಳೀಯ ಸಂಸ್ಥೆಗಳ ಕೊಳವೆ ಸಂಪರ್ಕವಿದ್ದರೂ ನೀರು ಪೂರೈಕೆ ಆಗುತ್ತಿಲ್ಲ. ಉಡುಪಿ ನಗರದಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಸಿ ನೀರು ಪೂರೈಕೆಯಾಗದ ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಆದರೆ ಈ ನಿಯಮ ನಳ್ಳಿ ಸಂಪರ್ಕವಿರುವ ಹೊಟೇಲುಗಳು, ಶಾಲೆಗಳಿಗೆ ಅನ್ವಯವಾಗುತ್ತಿಲ್ಲ. ಹೀಗಾಗಿ ಇವರು ನೀರಿಗಾಗಿ ಬೇರೆ ಮೂಲಗಳನ್ನು ಹುಡುಕಬೇಕಾಗಿದೆ. 

ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಎ. 10 ರವರೆಗೆ ಕಾರ್ಯನಿರ್ವಹಿಸಬೇಕು. ಬಹುತೇಕ ಎಲ್ಲಾ ಶಾಲೆಗಳ ಬಾವಿಗಳು ಖಾಲಿಯಾಗಿವೆ. ಅವುಗಳೀಗ ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಬಿತವಾಗಿವೆ. ಈ ಶಾಲೆಗಳು ಒಂದೋ ಸರಕಾರಿ ಅಥವಾ ಅನುದಾನಿತ ಶಾಲೆಗಳಾದ ಕಾರಣ ಮನಬಂದಂತೆ ಖರ್ಚು ಮಾಡಿ ನೀರು ಖರೀದಿಸುವ ಆರ್ಥಿಕ ಸಿರಿವಂತಿಕೆ ಇಲ್ಲ. ಸ್ಥಳೀಯ ಸಂಸ್ಥೆಗಳು ಕೊಡುವ ನೀರನ್ನು ಸ್ವಲ್ಪ ಸ್ವಲ್ಪ ಬಳಸಿ ಶಾಲೆಗಳು ದಿನದೂಡುತ್ತಿವೆ. “ಎ. 10ರವರೆಗೆ ಶಾಲೆಗಳನ್ನು ನಡೆಸುವುದು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕುಮಾರ್‌ ಶೆಟ್ಟಿಯವರು. 

ಇದೇ ರೀತಿ ಉಷ್ಣಾಂಶ ಮುಂದುವರಿದರೆ ನಗರ ಪ್ರದೇಶದ ಸಣ್ಣ ಸಣ್ಣ ಹೊಟೇಲುಗಳು ಇನ್ನು ಕೆಲವೇ ದಿನಗಳಲ್ಲಿ ಬಾಗಿಲು ಹಾಕುತ್ತವೆ. ಇವರು ಸ್ಥಳೀಯ ಸಂಸ್ಥೆಗಳ ನಳ್ಳಿ ಹೊಂದಿದ್ದರೂ ಸಹಜವಾಗಿ ನೀರು ಪೂರೈಕೆಯಾಗದಿದ್ದರೆ ಟ್ಯಾಂಕರ್‌ ನೀರು ಪೂರೈಕೆ ಆಗುತ್ತಿಲ್ಲ. ಇವರು ಹಣ ಕೊಟ್ಟು ನೀರು ತರಿಸಿಕೊಂಡು ವ್ಯಾಪಾರ ಮಾಡಿದರೆ ಲಾಭವಾಗುವುದಿಲ್ಲ. ಸಣ್ಣ ಸಣ್ಣ ಹೊಟೇಲುಗಳು ಅಕ್ಕಪಕ್ಕದವರಲ್ಲಿ ನೀರು ಕೇಳಿ ಬಾಗಿಲು ತೆರೆಯುತ್ತಿದ್ದಾರೆ. ಇದು ಬಹಳ ದಿನ ನಡೆಯುವುದು ಕಷ್ಟ. ಸಣ್ಣ ಸಣ್ಣ ಹೊಟೇಲುಗಳು ಬಾಗಿಲು ಹಾಕಿದರೆ ಹೊಟೇಲುಗಳ ಮಾಲಕರು, ನೌಕರರಿಗೆ ಮಾತ್ರ ನಷ್ಟವಲ್ಲ. ದುಬಾರಿ ಬೆಲೆ ತೆತ್ತು ದೊಡ್ಡ ದೊಡ್ಡ ಹೊಟೇಲ್‌ಗ‌ಳಿಗೆ ಹೋಗುವುದೂ ಗ್ರಾಹಕರಿಗೆ ಕಷ್ಟವಾಗುತ್ತದೆ. 

ಗ್ರಾ.ಪಂ. ಅವಲಂಬಿತ ಶಾಲೆಗಳು
ಆಲೂರಿನಂತಹ ಗ್ರಾಮಾಂತರ ಶಾಲೆಗಳಲ್ಲಿ ಗ್ರಾಮ ಪಂಚಾಯತ್‌ನವರು ನೀರು ಪೂರೈಸದಿದ್ದರೆ ಮಕ್ಕಳಿಗೆ ಮಧ್ಯಾಹ್ನ ಊಟ ಹಾಕುವುದು ಸಾಧ್ಯವಿಲ್ಲ. ಕುಡಿಯುವ ನೀರನ್ನು ಮನೆಯಿಂದ ತರಲು ಮಕ್ಕಳಿಗೆ ಹೇಳುತ್ತಿದ್ದೇವೆ. ಶೌಚಾಲಯಕ್ಕೆ ನೀರು ಇಲ್ಲ. ನಿತ್ಯವೂ ಗ್ರಾಮ ಪಂಚಾಯತ್‌ನವರಿಗೆ ಮನವಿ ಮಾಡಿ ದಿನದೂಡುತ್ತಿದ್ದೇವೆ.

– ಶಶಿಧರ ಶೆಟ್ಟಿ, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷರು. 

Advertisement

ನೀರಿನ ಮಟ್ಟ  ಮತ್ತಷ್ಟೂ ಕುಸಿತ
ಸ್ವರ್ಣ ನದಿಯ ಬಜೆ ಅಣೆಕಟ್ಟಿ ನಲ್ಲಿ  ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಕಳೆದ ಶುಕ್ರವಾರ ನೀರಿನ ಮಟ್ಟ 3.28 ಮೀ. ಗೆ ಕುಸಿದಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 4.44 ಮೀ. ಇತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 1. 16 ಮೀ. ನಷ್ಟು ನೀರಿನ ಮಟ್ಟ ಕಡಿಮೆ ಇದೆ. ಇದರಿಂದ ಉಡುಪಿ ನಗರಕ್ಕೆ ನೀರು ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next