Advertisement

ಎಟಿಎಂ ದರೋಡೆಗೆ ವಿಲನ್‌ ಸ್ಫೂರ್ತಿ

07:30 AM Mar 23, 2018 | Team Udayavani |

“ನೆಲದ ಮೇಲೆ ಕಾಲೇ ನಿಲ್ತಿಲ್ಲ …’ ಖುಷಿಯಿಂದ ಹೇಳಿಕೊಂಡರು ನಿರ್ದೇಶಕ ಅಮರ್‌. ಈ ಹಿಂದೆ ಅವರ ಕೆಲಸದ ಬಗ್ಗೆ ಯಶ್‌
ಎರಡು ನಿಮಿಷ ಮಾತಾಡಿದ್ದರಂತೆ. ಈಗ ಸುದೀಪ್‌ ಸಹ ಅವರ ಕೆಲಸದ ಬಗ್ಗೆ ಹೊಗಳಿದಾಗ ಸಹಜವಾಗಿಯೇ ಖುಷಿಯಾಗಿದ್ದರು ಅಮರ್‌. “ಇಬ್ಬರು ಸೂಪರ್‌ಸ್ಟಾರ್‌ಗಳು ಪ್ರಶಂಸೆ ಮಾಡಿದ್ದಾರೆ. ನೆಲದ ಮೇಲೆ ಕಾಲೇ ನಿಲ್ತಿಲ್ಲ. ಇಂತಹ ಮೆಚ್ಚುಗೆ ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಇನ್ನೇನ್‌ ಮಾತಾಡ್ಲಿ …’ ಎಂದು ಗೊಂದಲದಿಂದಲೇ ಕೇಳಿದರು ಅಮರ್‌. ಅಂದ ಹಾಗೆ, ಅವರು ಮಾತಾಡಿದ್ದು “ಅಟೆಂಪ್‌ಟ್‌ ಟು ಮರ್ಡರ್‌’ ಅಥವಾ “ಎಟಿಎಂ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ.

Advertisement

“ಅಟೆಂಪ್ಟ್ ಟು ಮರ್ಡರ್‌’ ಎಂಬ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದರು ಯಶ್‌. ಈ ಬಾರಿ ಟ್ರೇಲರ್‌ ಬಿಡುಗಡೆ ಮಾಡುವುದಕ್ಕೆ ಸುದೀಪ್‌ ಬಂದಿದ್ದರು. ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಿ, ಹೊರಡುವ ಮುನ್ನ, ಚಿತ್ರತಂಡದ ಬಗ್ಗೆ ನಾಲ್ಕು
ಮಾತುಗಳನ್ನಾಡಿದರು. “ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಚಿತ್ರಗಳು ನಿರ್ಮಾಣವಾಗುತ್ತಿದೆ. ಬಹಳ ಪ್ರತಿಭಾವಂತ ಮೇಕರ್‌ಗಳು
ಬರುತ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆಯ ಚಿತ್ರಗಳಾಗುತ್ತಿವೆ. ಒಟ್ಟಾರೆ ಚಿತ್ರರಂಗ ಬದಲಾಗುತ್ತಿದೆ. ಸ್ಪರ್ಧೆ ಇಲ್ಲದೆ ನಮಗೂ ಒಂಥರಾ ಬೋರಿಂಗ್‌ ಆಗಿದೆ. ಈಗ ಸ್ಫರ್ಧೆ ಹೆಚ್ಚುತ್ತಿರುವುದರಿಂದ, ಇದೊಂಥರಾ ಎಚ್ಚರಿಕೆಯ ಗಂಟೆ ಎಂದರೆ ತಪ್ಪಿಲ್ಲ. ಟ್ರೇಲರ್‌ ನೋಡಿದರೆ ವಿಭಿನ್ನ ಪ್ರಯತ್ನದ ತರಹ ಕಾಣಿಸುತ್ತಿದೆ. ನೋಡಿಕೊಂಡು ಬಿಡುಗಡೆ ಮಾಡಿ’ ಎಂದು ಹಾರೈಸಿದರು. ಸಾಮಾನ್ಯವಾಗಿ ಎಲ್ಲರೂ ಹೀರೋನನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದರೆ, ಇಲ್ಲಿ ವಿಲನ್‌ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಿದ್ದಾರೆ ಅಮರ್‌. “ಈ ಕಥೆ ಬರೆಯೋದಕ್ಕೆ ನನಗೆ ಸ್ಫೂತಿ ವಿಲನ್‌ ಪಾತ್ರ. ಆ ಪಾತ್ರವನ್ನು ಸೂರ್ಯ ಮಾಡಿದ್ದಾರೆ. ಪಾತ್ರಕ್ಕೆ ಉದ್ದ ಗಡ್ಗ ಬೇಕಿತ್ತು. ಅದೇ
ಕಾರಣಕ್ಕೆ ಅವರಿಗೆ ಒಂದು ವರ್ಷ ದಾಡಿ ಬಿಡೋಕೆ ಹೇಳಿದೆ.  

ಚಿತ್ರ ತಡವಾಗುತ್ತಿದ್ದಂತೆ, ಅವರಿಗೂ ಸಂಶಯ ಬಂತೇನೋ? “ನನ್ನನ್ನೇ ಹಾಕಿಕೊಂಡು ಚಿತ್ರ ಮಾಡ್ತೀರಾ …’ ಅಂತಲೂ ಕೇಳಿದರು. 
ಕೊನೆಗೆ ಚಿತ್ರ ಶುರುವಾಯಿತು. ಈ ಚಿತ್ರದಲ್ಲಿ ವಿಲನ್‌ಗೆಂದೇ ಇಂಟ್ರೊಡಕ್ಷನ್‌ ಹಾಡಿದೆ. ಅದೇ ಚಿತ್ರದ ಹೈಲೈಟು’ ಎಂದರು 
ಅಮರ್‌. “ಎಟಿಎಂ’ ಚಿತ್ರವನ್ನು ನಾರಾಯಣ್‌ ಎಂಬ ಹೊಸ ನಿರ್ಮಾಪಕರು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ವಿನಯ್‌, ಚಂದು, ಹೇಮಲತಾ, ಶೋಭಿತಾ, ಸೂರ್ಯ ಮುಂತಾದವರು ನಟಿಸಿದ್ದಾರೆ. ಅವರೆಲ್ಲರೂ ಚಿತ್ರದ ಬಗ್ಗೆ, ತಮ್ಮ ಪಾತ್ರಗಳ ಬಗ್ಗೆ 
ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next