ಕಾಪು: ಕಾಪು ತಾ| ಕೇಂದ್ರದಿಂದ ಅನತಿ ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಎಡ ಮತ್ತು ಬಲ ಭಾಗದ ಭೂಪ್ರದೇಶವನ್ನು ಹೊಂದಿರುವ ಮತ್ತು ಪಿನಾಕಿನಿ ಹೊಳೆಯ ಉತ್ತರದ ಭಾಗದ ಪ್ರದೇಶವೇ ಪಾಂಗಾಳ.
ಇನ್ನಂಜೆ ಗ್ರಾ.ಪಂ.ನ ಪಶ್ಚಿಮ ದಿಕ್ಕಿನಲ್ಲಿರುವ ಗಾಂಧಿ ನಗರ, ಸರಸ್ವತಿ ನಗರ, ಸದಾಡಿ, ಮೇಲ್ಪಾಂಗಳ, ಪಾಂಗಾಳ, ಆರ್ಯಾಡಿ, ಪಾಂಗಾಳಗುಡ್ಡೆ, ದಡ್ಡಿ, ಕುದ್ರು, ತುಂಗೆರೆಬೈಲು, ಉರ್ಪುಂಜ ಮೊದಲಾದ ಸಣ್ಣ ಸಣ್ಣ ಪ್ರದೇಶಗಳು ಸೇರಿಕೊಂಡದ್ದೇ ಪಾಂಗಾಳವೆಂಬ ಕಂದಾಯ ಗ್ರಾಮ. ಪಾಂಗಾಳ, ಸದಾಡಿ, ಆರ್ಯಾಡಿ ಗ್ರಾಮ ಸೇರಿಸಿ ಬ್ರಿಟಿಷರು 1865 ರಲ್ಲೇ ಈ ಕಂದಾಯ ಗ್ರಾಮ ರಚಿಸಿದ್ದರಂತೆ. ಆರ್ಯಾಡಿ ಶ್ರೀ ಜನಾರ್ದನ ದೇವಸ್ಥಾನ, ಎರಡು ಆದಿ ಆಲಡೆ ಕ್ಷೇತ್ರಗಳು ಮತ್ತು ಮಂಡೇಡಿಯಲ್ಲಿ ಒಂದು ಆಲಡೆ ಕ್ಷೇತ್ರವಿದೆ.
ಗ್ರಾಮದ ವಿಸ್ತೀರ್ಣ 906.54 ಎಕ್ರೆ. ಸುಮಾರು 490 ಕುಟುಂಬಗಳಿದ್ದು, ಜನಸಂಖ್ಯೆ 1995. ಗುಡ್ಡೆ, ಆರ್ಯಾಡಿ ಸಹಿತ ಸುತ್ತಲಿನ ಪ್ರದೇಶಗಳ ಕುಟುಂಬಗಳು ಭತ್ತದ ಕೃಷಿ, ಮಟ್ಟುಗುಳ್ಳ ಬೆಳೆಯುತ್ತಿದ್ದರೆ, ಮೀನು ಗಾರಿಕೆ, ಮೂರ್ತೆದಾರಿಕೆ ಸಹಿತ ವಿವಿಧ ಉದ್ಯೋಗಗಳೂ ಗ್ರಾಮಸ್ಥರನ್ನು ಕೈ ಹಿಡಿದಿವೆ. ಅಂಗನವಾಡಿ ಕೇಂದ್ರ, ಕಿ. ಪ್ರಾ.ಶಾಲೆ, ಹಿ. ಪ್ರಾ. ಶಾಲೆ ಮತ್ತು ಪ್ರೌಢಶಾಲೆಗಳು ಗ್ರಾಮದಲ್ಲಿವೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣಕ್ಕೆ ಇನ್ನಂಜೆ, ಕಾಪು, ಕಟಪಾಡಿ ಸಹಿತ ವಿವಿಧ ನಗರ ಪ್ರದೇಶಗಳನ್ನೇ ಅವಲಂಬಿಸಬೇಕಿದೆ.
ಕುಡಿಯುವ ನೀರಿಗೆ ಪರದಾಟ ತಪ್ಪಿಲ್ಲ
ಮರ್ಕೋಡಿಯಿಂದ ಆರಂಭಗೊಳ್ಳುವ ಪಿನಾಕಿನಿ ಹೊಳೆ ಪಾಂಗಾಳದ ಮೂಲಕವೇ ಹಾದು ಪಾಪನಾಶಿನಿಯ ಜತೆಗೂಡಿ ಸಮುದ್ರಕ್ಕೆ ಸೇರುತ್ತದೆ. ಗ್ರಾಮದಲ್ಲೇ ಹೊಳೆ ಹರಿಯುತ್ತಿ ದ್ದರೂ ಗಾಂಧಿ ನಗರ, ಸರಸ್ವತಿ ನಗರ, ಸದಾಡಿ ಪರಿಸರದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರಿಂಗ್ ರೋಡ್‌ನಂತೆ ಹೊಳೆ ನೀರು ಹರಿದು ಹೋಗುವ ಪಾಂಗಾಳ ಗುಡ್ಡೆ, ಆರ್ಯಾಡಿ, ದಡ್ಡಿ, ಕುದ್ರು, ತುಂಗೆರೆ ಬೈಲು, ಉರ್ಪುಂಜ ಪ್ರದೇಶದ ಜನರು ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಇವೆಲ್ಲವೂ ಬಗೆಹರಿಯಲಿ
ಸರಸ್ವತಿ ನಗರ, ಗಾಂಧಿ ನಗರ, ಆರ್ಯಾಡಿ, ಪಾಂಗಾಳ ಗುಡ್ಡೆ ಸಹಿತ ವಿವಿಧ ಪ್ರದೇಶಗಳ ಜನರು ಇನ್ನಂಜೆಯಲ್ಲಿರುವ ಗ್ರಾ. ಪಂ. ಕಚೇರಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಖಾಸಗಿ ವ್ಯವಸ್ಥೆಯೇ ಗತಿ. ಇನ್ನಂಜೆ ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ. ಪಾಂಗಾಳ ಮತ್ತು ಕೋಟೆ ಗ್ರಾಮದ ಗಡಿಯಲ್ಲಿರುವ ದಡ್ಡಿ ರಸ್ತೆಗೆ ಡಾಮರು ಆಗಬೇಕಿದೆ. ತುಂಗೆರೆ ಬೈಲು ಪ್ರದೇಶದ ಜನತೆ ಕಿರು ಸೇತುವೆ ದುರಸ್ತಿಗಾಗಿ ಶಬರಿಯಂತೆ ಕಾಯುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಪಾಂಗಾಳ ಗುಡ್ಡೆ, ಆರ್ಯಾಡಿ, ಸದಾಡಿಯಲ್ಲಿ ಸರಕಾರಿ ಬಾವಿ ನಿರ್ಮಾಣವಾಗಬೇಕಿದೆ. ಹೊಳೆ ತೀರದ ಜನರು ಬೇಸಗೆಯಲ್ಲಿ ಉಪ್ಪು ನೀರಿನಿಂದ ಬಳಲುತ್ತಿದ್ದು, ಬಗೆಹರಿಯಬೇಕಿದೆ. ಪಾಂಗಾಳ ಸೇತುವೆ ಯಿಂದ ಮಟ್ಟು ಸೇತುವೆವರೆಗೆ ಹೊಳೆಯಲ್ಲಿ ತುಂಬಿರುವ ಹೂಳನ್ನು ಸ್ಥಳೀಯಾಡಳಿತ, ಜಿಲ್ಲಾಡಳಿತ ತುರ್ತಾಗಿ ತೆರವುಗೊಳಿಸಬೇಕಿದೆ.
ಸ್ವಾತಂತ್ರ್ಯ ಹೋರಾಟದ ಕಿಚ್ಚು
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಂಗಾಳ ಗ್ರಾಮದ ಕೊಡುಗೆ ಅಪಾರ. ಇಲ್ಲಿನ ಪಾಂಗಾಳ ನಾಯಕ್ ಮನೆತನವು ಸ್ವಾತಂತ್ರ್ಯ ಹೋರಾಟ ನಿರತ ಕುಟುಂಬವೆಂದೇ ಪರಿಗಣಿಸಲ್ಪಟ್ಟಿದೆ. ಉಪೇಂದ್ರ ಶ್ರೀನಿವಾಸ ನಾಯಕ್, ಸುರೇಂದ್ರ ನಾಯಕ್, ದಾಮೋದರ ನಾಯಕ್, ವೇದವ್ಯಾಸ ನಾಯಕ್, ಪಾಂಗಾಳ ಮಂಜುನಾಥ ನಾಯಕ್, ಪಾಂಗಾಳ ಲಕ್ಷ್ಮೀ ನಾರಾಯಣ ನಾಯಕ್, ಅಂಬಾ ಬಾಯಿ ನಾಯಕ್, ಮನೋರಮಾ ಬಾಯಿ ನಾಯಕ್, ನಿರುಪಮಾ ನಾಯಕ್ ಸೇರಿದಂತೆ ಹಲವು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ನಾಯಕ್ ಕುಟುಂಬದ ಎಂಟು ಮಂದಿ ಜೈಲುವಾಸವನ್ನೂ ಅನುಭವಿಸಿದ್ದರು. ಪಾಂಗಾಳ ವಿಠಲ ಶೆಣೈ ಸೇರಿದಂತೆ ಇನ್ನೂ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು.
ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರು ಬಾಲ್ಯದಲ್ಲಿ ಪಾಂಗಾಳದ ಬಲಿಪ ನಾನಯ ಮತ್ತು ತುಲಿಪ ನಾನಯ ಎಂಬವರ ಬಳಿ ಅಂಗಸಾಧನೆಗೆ„ದಿದ್ದರು. ಇವರು ಕಲಿತ ಗರಡಿಯನ್ನು ನಾನಯ ಕುಟುಂಬಿಕರು ಜೀರ್ಣೋದ್ಧಾರಗೊಳಿಸಿದ್ದು, ಈಜು ವಿದ್ಯೆ ಸಹಿತ ಅಂಗ ಸಾಧನಗೈದ ಕಟ್ಟಿಕೆರೆ ದುರಸ್ತಿಗೆ ಕಾಯುತ್ತಿದೆ. ಹೆದ್ದಾರಿ ಬದಿಯಲ್ಲಿರುವ ಇಲ್ಲಿ ಹಲವು ಅಪಘಾತ ಸಂಭವಿಸಿದೆ.ಹಾಗಾಗಿ ಇದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಸ್ಥಳವನ್ನಾಗಿಸಿ ರೂಪಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
ಪಿನಾಕಿನಿ ಹೊಳೆಗೆ ಸೇತುವೆ
ಪಿನಾಕಿನಿ ಹೊಳೆಯು ಬ್ರಿಟಿಷರ ಕಾಲ ದಿಂದಲೂ ಪ್ರಸಿದ್ಧಿಯಲ್ಲಿತ್ತು. ಹೊಳೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಪ್ರದೇಶವು ಬ್ರಿಟಿಷ್ ಆಡಳಿತದಲ್ಲಿ ಮಿನಿ ಬಂದರಾಗಿತ್ತು. ಬ್ರಿಟಿಷರು ಅರಬ್ಬೀ ಸಮುದ್ರದ ಮೂಲಕ ಸಾಮಾನು, ಸರಂಜಾಮು ತಂದು ಇಲ್ಲಿಂದಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆ ಸೇತುವೆ ಯನ್ನು ರಾ. ಹೆ. 66ರ ಚತುಷ್ಪಥ ಯೋಜ ನೆಯ ಕಾಮಗಾರಿಗೆ ತೆರವುಗೊಳಿಸಲಾಗಿದೆ.
ಪ್ರಾ. ಆ. ಕೇಂದ್ರ ಅಗತ್ಯ: ಪಾಂಗಾಳ ಸುತ್ತಮುತ್ತಲ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪಂಚಾಯತ್ ಗಮನಕ್ಕೂ ಬಂದಿದೆ. ಸದಾಡಿಯಲ್ಲಿ ಬಾವಿ ನಿರ್ಮಿಸಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ಶಾಸಕರು, ಸಚಿವರಿಗೆ ಮನವಿ ಮಾಡಲಾಗಿದೆ. –
ಮಲ್ಲಿಕಾ ಆಚಾರ್ಯ, ಅಧ್ಯಕ್ಷರು, ಇನ್ನಂಜೆ ಗ್ರಾಮ ಪಂಚಾಯತ್
ಸರ್ವೀಸ್ ರಸ್ತೆ ಇಲ್ಲ: ರಾ. ಹೆ. 66ರ ಪಾಂಗಾಳದಲ್ಲಿ ಸರ್ವೀಸ್ ರಸ್ತೆ ಇಲ್ಲ. ಹೆದ್ದಾರಿ ರಸ್ತೆಯಲ್ಲಿ ನೀರು ನಿಂತು ಪಾದಚಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಇಲ್ಲಿನ ಕಟ್ಟಿ ಕೆರೆ ದುರಸ್ತಿಗೂ ಯೋಜನೆ ಕೈಗೆತ್ತಿಕೊಳ್ಳಬೇಕಿದೆ. –
ಸುಬ್ಬ ರಾವ್, ಪಾಂಗಾಳ
-ರಾಕೇಶ್ ಕುಂಜೂರು