Advertisement

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತರ ಹೆಸರು ಗೌಪ್ಯವಾಗಿಡಿ

12:10 PM Aug 31, 2018 | Team Udayavani |

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ವೈಯಕ್ತಿಕ ವಿವರಗಳನ್ನು ಮಾಧ್ಯಮಗಳು ಗೌಪ್ಯವಾಗಿಡಬೇಕು ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಉತ್ತೇಜನ್‌ ಹಾಗೂ ಎನ್‌ಫೋಲ್ಡ್‌ ಫೌಂಡೇಷನ್‌ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವರದಿಗಳ ಬಗ್ಗೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸುಪ್ರೀಂ ಕೋರ್ಟ್‌ ಆದೇಶದಂತೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಪೋಕ್ಸೋà ಕಾಯ್ದೆ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೆಸರು ಹಾಗೂ ಆಕೆಯ ಗುರುತು ಪತ್ತೆಯಾಗುವಂತಹ ಯಾವುದೇ ಮಾಹಿತಿ ನೀಡಬಾರದು ಎಂದರು.

ದೃಶ್ಯ ಮಾಧ್ಯಮಗಳು ಟಿಆರ್‌ಪಿಗಾಗಿ ಪ್ರಕರಣಗಳನ್ನು ವೈಭವೀಕರಿಸುತ್ತಿರುವ ಜತೆಗೆ ಸಂತ್ರಸ್ತೆಯ ಮನೆ ಅಥವಾ ಶಾಲೆ, ಸ್ಥಳ ಹಾಗೂ ಇತರೆ ವಿವರಗಳನ್ನು ಪ್ರಸಾರ ಮಾಡುತ್ತವೆ. ಈ ರೀತಿ ಮಾಡುವುದರಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರ ಗೌರವಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಮಾಧ್ಯಮಗಳು ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದು ಎಚ್ಚರಿಕೆಯಿಂದ ವರದಿ ಮಾಡಬೇಕು ಎಂದು ತಿಳಿಸಿದರು.

ಕೆಲ ವಿಕೃತ ಮನಸ್ಸಿನ ವ್ಯಕ್ತಿಗಳು ನಡು ರಸ್ತೆಯಲ್ಲಿ ಅಪಘಾತ ಸಂಭವಿಸಿದರೂ ಮಾನವೀಯತೆ ಮರೆತು ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ ಇದು ತಪ್ಪು. ಇದರ ಬದಲು ಸಂತ್ರಸ್ತರ ನೆರವಿಗೆ ಮಾಧ್ಯಮಗಳು ಮುಂದಾಗಬೇಕು.ಅಪರಾಧಿಗಳ ಬಗ್ಗೆ ಮಾಹಿತಿ ತೋರಿಸಬೇಕೆ ಹೊರತು ಶೋಷಿತರ ವೈಯಕ್ತಿಕ ವಿವರ ನೀಡುವುದು ಸರಿಯಲ್ಲ ಎಂದರು. 

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಪೋಕ್ಸೋà ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಮಾಡುವ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವನ್ನು ಸುದ್ದಿಯಾಗಿಸುವ ಧಾವಂತದಲ್ಲಿ ಸಂತ್ರಸ್ತ ವೈಯಕ್ತಿಕ ಘನತೆಗೆ ಚ್ಯುತಿ ತರಬಾರದು ಎಂದು ಹೇಳಿದರು.

Advertisement

36,022 ಪೋಕ್ಸೋ ಪ್ರಕರಣ: ಎನ್‌ಫೋಲ್ಡ್ ಪ್ರತಿಷ್ಠಾನದ ಮುಖ್ಯಸ್ಥೆ ಖುಷಿ ಕುಶಾಲಪ್ಪ ಮಾತನಾಡಿ, 2016ರಲ್ಲಿ ದೇಶದಲ್ಲಿ 36,022 ಮಕ್ಕಳ ಮೇಲಿನ ಪೋಕ್ಸೋà ಪ್ರಕರಣಗಳು ದಾಖಲಾಗಿವೆ. ಇದು ಶೇ.3ರಷ್ಟು ಮಾತ್ರ. ಮರ್ಯಾದೆ ಅಂಜಿ ಕೆಲವರು ಠಾಣೆಗೆ ಬರುವುದಿಲ್ಲ. ಶೇ.50ರಷ್ಟು ಪರಿಚಯಸ್ಥರಿಂದಲೇ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. 50ರಷ್ಟು ಸಂಬಂಧಿಕರಿಂದ ನಡೆಯುತ್ತಿದೆ.

ಹೀಗಾಗಿ ದೌರ್ಜನ್ಯ ನಡೆದಾಗ ಯಾವುದೇ ಅಂಜಿಕೆ ಇಲ್ಲದೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಎಂದರು. ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ, ಪತ್ರಕರ್ತ ಮಣಿ, ಸ್ವಯಂ ಸೇವಾ ಸಂಸ್ಥೆಯ ಚೈತನ್ಯ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next