Advertisement

ನಗರ ಯೋಜನ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್ ಇನ್ನೂ ಇಲ್ಲ!

07:27 PM Jan 22, 2022 | Team Udayavani |

ಕುಂದಾಪುರ: ಇಲ್ಲಿ ನಗರ ಯೋಜನ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 13 ವರ್ಷಗಳಾದರೂ ನಗರದ ಸಮಗ್ರ ನಕ್ಷೆ ಮಹಾಯೋಜನೆ ಮಾಸ್ಟರ್‌ ಪ್ಲ್ಯಾನ್ ಇನ್ನೂ ಅಂತಿಮವಾಗಿಲ್ಲ. ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕಟ್ಟಡ ಕಟ್ಟುವವರಿಗೆ ನಿರಾಕ್ಷೇಪಣ ಪತ್ರ, ಭೂ ಪರಿವರ್ತನೆಗೆ ಅನುಮತಿ ದೊರೆಯುತ್ತಿಲ್ಲ. ಇದರಿಂದ ಕುಂದಾಪುರ ಪುರಸಭೆ ವ್ಯಾಪ್ತಿ, ಹಂಗಳೂರು ಪಂಚಾಯತ್‌ ವ್ಯಾಪ್ತಿಯ ವರಿಗೆ ತೊಂದರೆಯಾಗಿದೆ.

Advertisement

ಮಾಸ್ಟರ್‌ ಪ್ಲ್ಯಾನ್
ಸ್ಥಳೀಯ ಯೋಜನ ಪ್ರದೇಶ ಘೋಷಣೆ ಗೊಂಡಿರುವ ಸಂಬಂಧಿಸಿದ ಸ್ಥಳೀಯ ಯೋಜನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಯಾಯ ಯೋಜನ ಪ್ರಾಧಿಕಾರಗಳ ಮಹಾ ಯೋಜನೆಯನ್ನು ತಯಾರಿಸಿ ಸರಕಾರದ ಅನುಮೋದನೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಯೋಜನ ಪ್ರದೇಶಗಳ ಸದಸ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಕುಂದಾಪುರದಿಂದ ಮಾಸ್ಟರ್‌ ಪ್ಲ್ಯಾನ್ ಸಲ್ಲಿಸಲಾಗಿದ್ದರೂ ಸರಕಾರದಿಂದ ಇನ್ನೂ ಅಂತಿಮ ಮೊಹರು ಬಿದ್ದಿಲ್ಲ.

ಏನೇನಿರುತ್ತದೆ?
ಮಾಸ್ಟರ್‌  ಪ್ಲ್ಯಾನ್ ನಲ್ಲಿ ಏನೇನಿರುತ್ತದೆ ಎಂದರೆ ನಗರದ ಸಮಗ್ರ ಮಾಹಿತಿ ಇರುತ್ತದೆ. ವಸತಿ, ವಾಣಿಜ್ಯ, ಕೈಗಾರಿಕೆ, ಆಟದ ಮೈದಾನ, ಸಾರ್ವಜನಿಕ, ಅರೆ ಸಾರ್ವಜನಿಕ, ಉದ್ಯಾನವನ, ಬಯಲು ಪ್ರದೇಶ, ಸಾರಿಗೆ ಸಂವಹನ, ಖಾಲಿ ಪ್ರದೇಶ, ಕೆರೆ, ಕೃಷಿ ಭೂಮಿ ಹೀಗೆ ಸಮಗ್ರ ಮಾಹಿತಿ ಇರುತ್ತದೆ. ಇದರ ಅನ್ವಯ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಲು, ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗುತ್ತದೆ.

ಸ್ಥಗಿತ ಸ್ಥಳೀಯ ಯೋಜನ ಪ್ರದೇಶ ಘೋಷಣೆ ಗೊಂಡು ಮಹಾಯೋಜನೆ ತಯಾರಿಸದೇ ಇರುವ ಪ್ರಗತಿಯಲ್ಲಿರುವ ಪ್ರದೇಶಗಳಲ್ಲಿ ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದನ್ನು ಸರಕಾರ 2 ವರ್ಷಗಳ ಹಿಂದೆ ನಿಲ್ಲಿಸಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನ ಕಾಯ್ದೆ 1961ರಡಿಯಲ್ಲಿ ರಾಜ್ಯದಲ್ಲಿ ಹಲವಾರು ಸ್ಥಳೀಯ ಯೋಜನ ಪ್ರದೇಶಗಳನ್ನು ಘೋಷಿಸಲಾಗಿದೆ. ಹೊಸದಾಗಿ ಸ್ಥಳೀಯ ಯೋಜನ ಪ್ರದೇಶಗಳನ್ನು ಆಗಿಂದಾಗ್ಗೆ ಘೋಷಿಸಲಾಗುತ್ತದೆ. ರಾಜ್ಯದಲ್ಲಿ ಸ್ಥಳೀಯ ಯೋಜನ ಪ್ರದೇಶ ಘೋಷಣೆಗೊಂಡು ಮಹಾಯೋಜನೆ ತಯಾರಿಸದೇ ಇರುವ ಪ್ರದೇಶಗಳಲ್ಲಿ ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ.

ಬಾಕಿ
ಸಾರ್ವಜನಿಕರಿಗೆ ಆಗುವ ಅನನು ಕೂಲತೆಯನ್ನು ತಡೆಯಲು ಆದ್ಯತೆ ಮೇಲೆ ಸ್ಥಳೀಯ ಯೋಜನ ಪ್ರದೇಶಗಳು ಮಹಾ ಯೋಜನೆ ತಯಾರಿಸಿ, ಯೋಜನ ಪ್ರಾಧಿಕಾರ ರಚನೆಯಾದ ವರ್ಷಗಳೊಳಗೆ ಮಹಾಯೋಜನೆಯನ್ನು ಸರಕಾರದ ಅನು ಮೋದನೆಗೆ ಸಲ್ಲಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ನಿಯಮ ಇದೆ. ಆದರೆ ಪಾಲನೆ ಮಾತ್ರ ಆಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಕೆಲವು ಪ್ರಾಧಿಕಾರಿಗಳು ಮಾಡುವುದಿಲ್ಲ, ಪ್ರಾಧಿಕಾರ ಮಾಡಿದ್ದನ್ನು ಸರಕಾರ ಸಕಾಲದಲ್ಲಿ ಅನುಮೋದಿಸುವುದಿಲ್ಲ ಎಂದಾಗಿದೆ.

Advertisement

ಯಾಕಾಗಿ?
ಮಹಾಯೋಜನೆ ತಯಾರಿಸದೆ ಇರುವ, ಪ್ರಗತಿಯಲ್ಲಿರುವ ಪ್ರದೇಶಗಳಿಗೆ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ಹೊಸ ಅಭಿವೃದ್ಧಿಗಳಿಗೆ ಅನುಮತಿ ತಡೆಯದೆ ಇದ್ದಲ್ಲಿ ಮಹಾಯೋಜನೆಯ ತಯಾರಿಗೆ ತೊಂದರೆಯಾಗುತ್ತದೆ. ಮಹಾಯೋಜನೆ ಅಂತಿಮ ಅನುಮೋದನೆಯಾಗುವವರೆಗೆ ಭೂ ಪರಿವರ್ತನೆಗೆ ನಿರಾಕ್ಷೇಪಣ ಪತ್ರ ನೀಡುವುದು ಸೂಕ್ತವಲ್ಲ ಎಂದು 15.7.2019ರಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೂರಾರು ಮಂದಿ ನಿರಾಕ್ಷೇಪಣ ಪತ್ರ ದೊರೆಯದೆ ಅರ್ಜಿ ಸಲ್ಲಿಸಿ ಬಾಕಿಯಾಗಿದ್ದಾರೆ.

ವಾರದೊಳಗೆ ಅನುಮತಿ
ಈ ಸಮಸ್ಯೆ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರು ಸರಕಾರದ ಗಮನ ಸೆಳೆದಿದ್ದು ನಿರಾಕ್ಷೇಪಣ ಪತ್ರ ನೀಡುವಂತೆ ವಾರದೊಳಗೆ ಸೂಚನೆ ಬರಲಿದೆ. ಮಹಾಯೋಜನೆ ಸರಕಾರಕ್ಕೆ ಕಳುಹಿಸಿದ್ದು ಅನುಮತಿ ದೊರೆತಿಲ್ಲ. ಹಾಗಿದ್ದರೂ ಎನ್‌ಒಸಿ ನೀಡಲು ತೊಂದರೆಯಾಗದಂತೆ ಮೌಖಿಕ ಆದೇಶ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.
-ವಿಜಯ್‌ ಎಸ್‌. ಪೂಜಾರಿ,
ಅಧ್ಯಕ್ಷರು, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next