Advertisement

ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯೋಗಿ?

02:41 PM Mar 11, 2022 | Team Udayavani |

ಪ್ರಸಕ್ತ ಚುನಾವಣೆಯ ಫ‌ಲಿತಾಂಶವು ಯೋಗಿ ಆದಿತ್ಯನಾಥ್‌ ಅವರ “ದೆಹಲಿ ಪ್ರವೇಶ’ದ ಬಾಗಿಲನ್ನು ತೆರೆಯಲಿದೆಯೇ?

Advertisement

“2022ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಭೂತಪೂರ್ವ ಜಯ ಗಳಿಸಿದ್ದೇ ಆದಲ್ಲಿ ಯೋಗಿ ಆದಿತ್ಯನಾಥ್‌ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಉತ್ತರಾಧಿಕಾರಿಯ ಪಟ್ಟಕ್ಕೇರಲಿದ್ದಾರೆ’ ಎಂಬ ಮಾತುಗಳು ಚುನಾವಣೆಗೂ ಮುನ್ನವೇ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಈಗ ಈ ಗೆಲುವು ಯೋಗಿ ಅವರ “ಪ್ರಧಾನಿ ಹುದ್ದೆ’ಯ ಹಾದಿಯನ್ನು ಸಲೀಸು ಮಾಡಿದಂತಿದೆ.

2024ರ ವೇಳೆಗೆ ಪ್ರಧಾನಿ ಮೋದಿ ಅವರಿಗೆ 73 ವರ್ಷ ತುಂಬಲಿವೆ. ಬಿಜೆಪಿಯ ಇತಿಹಾಸವನ್ನು ನೋಡಿದರೆ, 75 ವರ್ಷ ದಾಟಿದ ನಾಯಕರಿಗೆ ಈವರೆಗೆ ಪ್ರಧಾನಿ ಹುದ್ದೆ ಸಿಕ್ಕಿಲ್ಲ. ಹೀಗಾಗಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೂ, ಪ್ರಧಾನಿ ಹುದ್ದೆಗೆ ಬೇರೊಬ್ಬ ನಾಯಕನನ್ನು ಪಕ್ಷ ಆಯ್ಕೆ ಮಾಡಬಹುದು ಎಂಬ ಗುಸು ಗುಸು ಕೇಳಿಬರುತ್ತಲೇ ಇದೆ.

ಪ್ರಧಾನಿ ಮೋದಿ ಅವರ ಬಲಗೈ ಬಂಟ, ಬಿಜೆಪಿಯ ಚಾಣಕ್ಯ ಎಂದು ಕರೆಸಿಕೊಳ್ಳುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೋದಿ ಬಳಿಕ “ಪ್ರಧಾನಿ’ ಸ್ಥಾನ ತುಂಬಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಟ್ರೆಂಡ್‌ ಬದಲಾಗುತ್ತಿದೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಯಶಸ್ವಿ ಆಡಳಿತ ನಡೆಸಿರುವ ಹಾಗೂ ಮತ್ತೊಮ್ಮೆ ಜನಾಭಿಪ್ರಾಯವನ್ನು ತಮ್ಮತ್ತ ಸೆಳೆದಿರುವ ಯೋಗಿ ಆದಿತ್ಯನಾಥ್‌ “ಮುಂದಿನ ಪಿಎಂ’ ಆಗಲಿ ಎಂಬ ಧ್ವನಿಗೆ ಈ ಫ‌ಲಿತಾಂಶ ಬಲ ನೀಡಿದೆ.

ಅಲ್ಲದೇ, ಅಮಿತ್‌ ಶಾ ಅವರಿಗೆ ಹೋಲಿಸಿದರೆ ಯೋಗಿಯವರ ವರ್ಚಸ್ಸು ದೇಶಾದ್ಯಂತ ಹೆಚ್ಚಳವಾಗುತ್ತಿದೆ.

Advertisement

ಉತ್ತರಪ್ರದೇಶದಲ್ಲಿ ಯೋಗಿ ಅವರು ಆಡಳಿತ-ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿದ್ದು ಮಾತ್ರವವಲ್ಲದೇ, “ಆಡಳಿತ-ಪರ’ವಾಗಿ ಹೊಸ ಅಲೆ ಎಬ್ಬಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಿಜೆಪಿಯ ನಂ.2 ನಾಯಕನಾಗಿ ಹೊರಹೊಮ್ಮಿದ್ದಾರೆ.

ಮೋದಿ-ಯೋಗಿ ಸಾಮ್ಯತೆ ಏನು?
ಹಿಂದುತ್ವದ ಜೊತೆಗೆ ಉತ್ತರಪ್ರದೇಶದಲ್ಲಾದ ಅಭಿವೃದ್ಧಿಯು ಯೋಗಿಗೆ ಪ್ಲಸ್‌ ಪಾಯಿಂಟ್‌. ಮೋದಿಯವರಂತೆಯೇ, ಯೋಗಿ ಕೂಡ ಬಲಿಷ್ಠ ರಾಜಕೀಯ ನಾಯಕ. ಅಂತೆಯೇ ಆಡಳಿತದಲ್ಲಿ ಗಟ್ಟಿಯಾದ ಹಿಡಿತವೂ ಇದೆ. ವೈಯಕ್ತಿಕ ವಿಚಾರಕ್ಕೆ ಬಂದರೆ, ಯೋಗಿ ಹಾಗೂ ಮೋದಿ ಇಬ್ಬರೂ ಕೌಟುಂಬಿಕ ಸಂಬಂಧಗಳಿಂದ ದೂರವಿರುವವರು. ಬಿಜೆಪಿಯಲ್ಲಿರುವ ಬೇರೆ ನಾಯಕರಿಗೆ ಹೋಲಿಸಿದರೆ ಜನರೊಂದಿಗಿನ ಸಂಪರ್ಕದಲ್ಲೂ ಯೋಗಿ ಸೈ ಎನಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಪೈಪೋಟಿ ನೀಡುವ ಸಾಮರ್ಥ್ಯ ಯೋಗಿಗೆ ಇದೆಯಾದರೂ, ಪಿಎಂ ಹುದ್ದೆಗೆ “ಅತ್ಯುತ್ತಮ ಆಯ್ಕೆ’ಯಾಗಿ ಹೊರಹೊಮ್ಮಬೇಕೆಂದರೆ ಅವರು ದೇಶವ್ಯಾಪಿಯಾಗಿ ತಮ್ಮ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಾದ, ವಾಕ್ಚಾತುರ್ಯವನ್ನು ವೃದ್ಧಿಸಿಕೊಳ್ಳಬೇಕಾದ ಅಗತ್ಯವಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ವಾದ.

Advertisement

Udayavani is now on Telegram. Click here to join our channel and stay updated with the latest news.

Next