Advertisement

ರಾಗ ಎಂಬ ರಂಜನೆ ಮತ್ತು ಅನುಭವದ ಹಿಂದಿನ ಯಾತನೆ

07:30 AM Mar 11, 2018 | |

ನಾವೊಂದು ಸಂಗೀತ ಕಛೇರಿಗೆ ಹೋಗಿದ್ದೇವೆ ಎಂದಿಟ್ಟುಕೊಳ್ಳೋಣ. ಆ ಕಛೇರಿಯು ಹಿಂದೂಸ್ತಾನಿ ಸಂಗೀತದ ಗಾಯನದ ಅಥವಾ ವಾದನದ ಕಛೇರಿಯಾಗಿದ್ದರೆ ಮತ್ತು ಅದು ಸಾಯಂಕಾಲದ ಕಛೇರಿಯಾಗಿ ಗಾಯನಕ್ಕೆ ಕುಳಿತವರು ನಮ್ಮ ಕಾಲದ ಶ್ರೇಷ್ಠ ಕಲಾವಿದರಾಗಿದ್ದರೆ ಸಂಗೀತದ ಸೀರಿಯಸ್‌ ಕೇಳುಗರಾಗಿದ್ದರೆ ನಾವು ಏನೇನನ್ನೆಲ್ಲ ಹಂಬಲಿಸುತ್ತೇವೆ ಎಂಬುದು ಸೀರಿಯಸ್‌ ಕೇಳುಗರ ವರ್ಗಕ್ಕೆ ಗೊತ್ತಿರುತ್ತದೆ. ಕಲಾವಿದರು ಇಂಥಾದ್ದೇ ರಾಗವನ್ನು ಹಾಡಲಿ ಅಥವಾ ನುಡಿಸಲಿ ಎಂಬುದರಿಂದ ಶುರುವಾಗುವ ನಮ್ಮ ಹಂಬಲಗಳ ಸರಪಳಿಯು ರಾಗದ ಆಲಾಪವು ಇಷ್ಟೇ ವಿಸ್ತಾರದ್ದಾಗಿರಲಿ, ವಿಲಂಬಿತವನ್ನು ಹೆಚ್ಚು ಕಾಲ ಹಾಡಿ ದ್ರುತ್‌ ಚೀಜ್‌ನ್ನು ವೇಗವಾಗಿ ಮುಗಿಸಿ ಆದಷ್ಟು ಬೇಗ ಭಜನ್‌ ಅಥವಾ ವಚನಗಳನ್ನು ಹಾಡಲಿ ಹೀಗೆ ನಮ್ಮ ಹಂಬಲದ ಸರಪಳಿಯು ಹೊಸ ಉಂಗುರಗಳನ್ನು ಬೆಸೆದುಕೊಳ್ಳುತ್ತ ಹೋಗತ್ತದೆ.

Advertisement

ಈ ಎಲ್ಲ ನಮ್ಮ ಸಂಗೀತಸಂಬಂಧೀ ಮನೋವಾಂಛೆಗಳ ಹಿಂದೆ ನಿಜವಾಗಿ ನಾವು ನಮ್ಮ ಅಂದಿನ ಅಥವಾ ಹಿಂದಿನ ದಿನಗಳ ಮನೋಸ್ಥಿತಿಯ ತಳಪಾಯವಿರುತ್ತದೆ ಎಂಬುದನ್ನು ನಾವು ನಿಜವಾಗಿ ಗಮನಿಸಿರುವುದಿಲ್ಲ ಅಥವಾ ಕಛೇರಿಯ ಆ ಸಂದರ್ಭ ಮತ್ತು ನಮ್ಮ ಜೀವನದಲ್ಲಿ ನಿಜವಾಗಿ ಆಗುತ್ತಿರುವ ಎಲ್ಲ ಬೆಳವಣಿಗೆಗಳೂ ಸಂಗೀತಪ್ರೇಮಿಗಳಾದ ನಮ್ಮ ರಾಗಾಕಾಂಕ್ಷೆಯ ಮೇಲೆ ಸತತವಾಗಿ ಪ್ರಭಾವವನ್ನು ಬೀರುತ್ತಿರುತ್ತದೆ ಎಂಬುದನ್ನೂ ನಾವು ಅವಗಾಹಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ನಮಗೆ ಬೇಕಾಗಿರುವುದು ಬದುಕಿನ ರಾಗಗಳಿಗೆ ನೇರವಾಗಿ ನೆರವಾಗುವಂಥ ಮನಸ್ಸಿನ ರಾಗಗಳ ಉದ್ದೀಪನ ಅಥವಾ ಸಮಾಧಾನ. ರಾಗವು ರಂಜಕವಂತೂ ಹೌದು. ಈ ರಂಜಕತೆ ಎಂದರೆ ನಮ್ಮನ್ನು ಖುಷಿಯಿಂದ ಕುಣಿಯುವಂತೆ ಮಾಡುವಂಥ ಸ್ವಭಾವವುಳ್ಳದ್ದು ಎಂದಷ್ಟೆ ಅಲ್ಲ. ರಂಜನಾತ್‌ ರಾಗಃ  ಎಂಬ ಶಬ್ದದ ವುತ್ಪತ್ತಿಯು ರಾಗ ಮತ್ತದರ ಪ್ರಭಾವವನ್ನು ಸಮಗ್ರವಾಗಿ ಹೇಳುವುದಾದರೂ ರಾಗವೆನ್ನುವಂಥದ್ದು ನಮ್ಮ ಮನೋಮಂಡಲವನ್ನು ನೇರವಾಗಿ, ಜೊತೆಗೆ ಅನಿರ್ದಿಷ್ಟವಾಗಿ ಸಂತಸಭಾವ ಬೀರುತ್ತ ಹೋಗುವಂಥದ್ದು. ಹಾಗಾಗಿ, ನಮ್ಮಲ್ಲಿ ಇಂದು ಸಂಜೆ ಪೂರಿಯಾ ಧನಶ್ರೀ ರಾಗವನ್ನು ಕೇಳುವ ಆಸೆ ಹುಟ್ಟಿದರೆ ನಾಳೆ ಅಂಥಾದ್ದೇ ಪರಿಸ್ಥಿತಿಯಲ್ಲಿ, ಅದೇ ಸಂಜೆಯ ಅದೇ ಏಕಾಂತದಲ್ಲಿ, ಅದೇ ಬಾಲ್ಕನಿಯ ಕಟ್ಟೆಯ ಮೇಲೆ ಹದವಾಗಿ ಹಬೆಯಾಡುವ ಅದೇ ಚಹಾದ ಕಪ್ಪಿನ ಸಾನ್ನಿಧ್ಯದಲ್ಲಿ ನಮಗೆ ಮಾರ್ವಾ ರಾಗವನ್ನು ಕೇಳುವ ಹಂಬಲವು ಹುಟ್ಟಬಹುದು. ಮತ್ತು ಮಾರನೆಯ ದಿನ ಜಗತ್ತಿನ ಈ ಎಲ್ಲ ಆಗುಹೋಗುಗಳಿಗಿಂತ ಸಂಪೂರ್ಣ ಭಿನ್ನ ಮತ್ತು ವ್ಯತಿರಿಕ್ತವಾದಂಥ ಸ್ಥಿತಿಯಲ್ಲಿ, ಉದಾಹರಣೆಗೆ ಜಗತ್ತಿನ ಅತೀ ಕೆಟ್ಟ ಟ್ರಾಫಿಕ್‌ನಲ್ಲಿ ಬೈಕು ಓಡಿಸುವಾಗ ಭೈರವಿಯು ಬಂದು ಕಾಡಬಹುದು! ಇದು ಕೇಳುಗ ಮತ್ತು ಕಲಾವಿದರಿಬ್ಬರೂ ಒಳಗೊಳ್ಳುವ ಮನಸ್ಸಿನ ರಾಗ ಮತ್ತು ಸಂಗೀತದ ರಾಗಗಳು ಒಟ್ಟಿಗೇ ಮೇಳೈಸುವ ರಾಗಪ್ರಕ್ರಿಯೆ. 

ಕೇಳುಗರಾದ ನಮಗೆ ಇಂಥ ಹಂಬಲಗಳು ಸಾಮಾನ್ಯ ಮತ್ತು ಅಗತ್ಯವಾಗಿ ಇರಬೇಕಾದಂಥದ್ದು. ಹಾಗೆ ಇದ್ದರೇ ಕೇಳುಗ ತನ್ನೊಳಗೆ ಕಲಾವಿದನನ್ನು ಸಾಕಿ ಬೆಳೆಸೆವುದು ಮತ್ತು ಆ ಮೂಲಕ ಪ್ರತಿಯೊಬ್ಬ ಸೀರಿಯಸ್‌ ಕೇಳುಗನೊಳಗೊಬ್ಬ ಅಸಾಧಾರಣ ಕಲಾವಿದನೊಬ್ಬನಿರುತ್ತಾನೆ. ಅತ್ಯಂತ ಅಪೇಕ್ಷಣೀಯವಾದ ಮತ್ತು ಸ್ವಾಗತಾರ್ಹವಾದ ಬೆಳವಣಿಗೆಯದು.  

ಇಷ್ಟಾಗಿ ನಾವು ಆ ಸಂಜೆಯ ಕಲಾವಿದರನ್ನು ನಮ್ಮ ಸ್ಥಾನದಲ್ಲಿ ಕುಳ್ಳಿರಿಸಿ ಕಲಾವಿದರ ಮನಃಸ್ಥಿತಿಯು ಅಂದು ಹೇಗಿರಬಹುದೆಂದೇನಾದರೂ ಆಲೋಚಿಸುತ್ತೇವೆಯಾ? ಅವರ ದಿನ ಹೇಗಿದ್ದಿರಬಹುದು, ಇಂದು ಬಹುತೇಕ ಕಲಾವಿದರು ಊರಿನಿಂದ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣದ ಆಯಾಸ ಏನಾದರೂ ಅವರನ್ನು ಬಾಧಿಸುತ್ತಿರಬಹುದಾ? ಅವರ ವೈಯಕ್ತಿಕ ಸ್ಥಿತಿ ಹೇಗಿದ್ದಿರಬಹುದು ಮತ್ತು ಇಂಥ ಎಲ್ಲ ಸಂದರ್ಭಗಳೂ ಅವರ ಇಂದಿನ ಹಾಡುಗಾರಿಕೆಯ ಮೇಲೆ ಅಥವಾ ವಾದನದ ಮೇಲೆ, ಅವರು ಕಾರ್ಯಕ್ರಮಕ್ಕೆ ಆಯ್ದುಕೊಳ್ಳುವ ರಾಗದ ಮೇಲೆ ಯಾವುದಾದರೂ ರೀತಿಯ ಪ್ರಭಾವವನ್ನು ಸೃಷ್ಟಿಸಿರಬಹುದಾ? 

ಖ್ಯಾತ ಸಿತಾರ್‌ ವಾದಕರಾದ ಉಸ್ತಾದ್‌ ಶುಜಾತ್‌ ಖಾನರು ತಮ್ಮ ಯಾವುದೋ ಸಂದರ್ಶನವೊಂದರಲ್ಲಿ ಹೇಳಿದ ಮಾತೊಂದು ಹೀಗಿದೆ : “”ಕಲಾವಿದರ ಬದುಕು ತೈಲವರ್ಣಚಿತ್ರಗಳಂತೆ. ಹತ್ತಿರದಿಂದ ನೋಡಲು ಹೋದರೆ ಚಿತ್ರದ ಉಬ್ಬುತಗ್ಗುಗಳು, ಓರೆಕೋರೆಗಳು ಕಾಣಬಹುದು. ಹಾಗಾಗಿ, ಆಯಿಲ್‌ ಪೇಯಿಂಟನ್ನು ದೂರದಿಂದ ನೋಡುವುದೇ ಉತ್ತಮ!” ಈ ಮಾತು ಕಲಾವಿದರ ಸಂಸಾರದಲ್ಲಿ ಮುಕ್ಕಾಲು ಭಾಗ ಸತ್ಯ ಎಂದೇ ಹೇಳಬಹುದು. 

Advertisement

ಮತ್ತೂಬ್ಬ ಖ್ಯಾತ ಸಿತಾರ್‌ ವಾದಕರಾದ ಪಂಡಿತ್‌ ಬುಧಾದಿತ್ಯ ಮುಖರ್ಜಿಯವರ ಇತ್ತೀಚಿನ ಸಂದರ್ಶನದಲ್ಲಿ ಅವರು ಹೀಗೆ ಹೇಳುತ್ತ ಹೋಗುತ್ತಾರೆ : “”ನನ್ನ ಎರಡೂ ಕೈಗಳ ಚಲನೆಯ ವೇಗ, ಮೀಂಡಿನ ಶುದ್ಧತೆಗಳ ಬಗ್ಗೆ ಬಹಳ ಜನ ತಾರೀಫಿನ ಮಾತುಗಳನ್ನಾಡುತ್ತಾರೆ. ವಾಸ್ತವದಲ್ಲಿ ಅದು ಸಂಗೀತವಲ್ಲ. ನನ್ನ ಮನೋಸ್ಥಿತಿಗೆ ಹೊಂದುವಂಥ ಸರಿಯಾದ ಸಿತಾರ್‌ನ ಅನ್ವೇಷಣೆಯಲ್ಲಿ ಮತ್ತು ಆ ಅನ್ವೇಷಣೆಯ ಹಾದಿಯಲ್ಲಿ ನನಗೆ ಬೇಕಾದ ನಾದವನ್ನು ಹೊಮ್ಮಿಸಲು ನಾನು ಪಟ್ಟ ವಿಫ‌ಲ ಪ್ರಯತ್ನಗಳ ಫ‌ಲಿತಾಂಶ ಆ ಸ್ವರ ಶುದ್ಧತೆ. ಯಾಕೆಂದರೆ, ನನಗೆ ಬೇಕಾದಂಥ ನಾದವನ್ನು ನನ್ನ ಸಿತಾರಿನಲ್ಲಿ ಹೊಮ್ಮಿಸಲು ಅಸಾಧ್ಯವಾಗುತ್ತಿದ್ದುದರಿಂದ ಆ ಸಿಟ್ಟಿನ ರಭಸದಲ್ಲಿ ಅಲಂಕಾರಗಳನ್ನು ತೀಡುತ್ತ ತೀಡುತ್ತ ನನ್ನ ಕೈಯ ವೇಗ, ಬೆರಳುಗಳ ತೀಕ್ಷ್ಣ¡ತೆ ಮತ್ತು ಪ್ರಖರತೆ ತೀವ್ರವಾಗುತ್ತ ಹೋಯಿತು!”

ಕಲಾವಿದನಾಗುವುದು ನಿಜಕ್ಕೂ ಬಹಳ ದೊಡª ಪ್ರಕ್ರಿಯೆ. ಆ ಪ್ರಕ್ರಿಯೆ ಹಿಂದಿನ ಭಾವತೀವ್ರತೆ ಮತ್ತು ಶ್ರದ್ಧೆಯನ್ನು ನಿರಂತರ ಕಾಪಾಡಿಕೊಂಡು ಹೋಗಬೇಕಾಗುವ ನೋವು ನಾಲ್ಕಕ್ಷರಗಳಲ್ಲಿ ನಿಜಕ್ಕೂ ಬರೆದು ಮುಗಿಸುವಂಥದ್ದಲ್ಲ. ಮೇಲಿಂದ ಕಲಾವಿದನಾದ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸಲು ಬೇಕಾದ ವೇದಿಕೆಗಳ, ಸರಿಯಾದ ಹಿನ್ನೆಲೆ ಮತ್ತು ಘರಾನೆಗಳ ಕೃಪೆಯಿಲ್ಲದೆ ಹೋದರೆ ಸಂದರ್ಭಕ್ಕೆ ಕಾಯುವ ಸಾವಧಾನ ಮತ್ತು ನೋವು, ವೇದಿಕೆ ಸಿಕ್ಕಾಗ ತಮ್ಮೆಲ್ಲ ಬಗೆಯ ಮಾನಸಿಕ ತೊಯ್ದಾಟಗಳನ್ನು ವಿಪರೀತ ಮನಃಸ್ಥಿತಿಯನ್ನು ಕಾಪಾಡಿಕೊಂಡು ಹಾಡಬೇಕಾದ ಅನಿವಾರ್ಯತೆ. ಹೀಗೆ ನಮ್ಮೆದುರು ವೇದಿಕೆಯಲ್ಲಿ ಕುಳಿತ ಕಲಾವಿದರ ಆ ಕಛೇರಿಯ ಬಣ್ಣದ ವಾತಾವರಣದ ಹಿಂದಿನ ಯಾತನಾಪ್ರವಾಸ ಬಹಳ ದೀರ್ಘ‌ ಮತ್ತು ದಿನಗಟ್ಟಲೆ ಕುಳಿತು ಆಲೋಚಿಸಬೇಕಾದಂಥದ್ದು !

ಇವೆಲ್ಲದರ ಕೊನೆಗೆ ನಾವು ಕಛೇರಿಯ ಅಂತ್ಯದಲ್ಲಿ ಆ ಕಲಾವಿದರ ಭೈರವಿಯನ್ನು ಕೇಳಿ ನಾವು ಕಣ್ಣೀರಾಗಿ ಮನೆ ತಲುಪುತ್ತೇವೆ ಎಂಬಲ್ಲಿಗೆ, ಆನಂದ ಮತ್ತು ಆನಂದದ ಹಿಂದಿನ ನೋವು ನಮ್ಮ ಭಾವನದಿಯಲ್ಲಿ ಬೇಡದಿದ್ದರೂ ಉಕ್ಕುತ್ತದೆ. 

ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next