Advertisement

ಪ್ರಯಾಸದ ಗೆಲುವು; ಆತ್ಮಾವಲೋಕನ ಒಲವು!

06:00 PM Dec 16, 2021 | Team Udayavani |

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಎರಡು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್‌. ಪೂಜಾರ ಕೇವಲ 17 ಮತಗಳ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಮತಗಳ ಅಂತರ ಎಷ್ಟೇ ಇದ್ದರೂ, ಗೆಲುವು ಗೆಲುವೇ. ಆದರೆ, ದೇಶ-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪ್ರಬಲ ಪಕ್ಷದ ಅಭ್ಯರ್ಥಿಯ ಪ್ರಯಾಸದ ಗೆಲುವು ಕುರಿತು ಗಂಭೀರ ಆತ್ಮಾವಲೋಕನ ನಡೆಯಲೇಬೇಕು ಎಂಬುದು ನಿಷ್ಠಾವಂತ ಕಾರ್ಯಕರ್ತರ ಆಶಯ.

Advertisement

ಅವಳಿ ಜಿಲ್ಲೆಯ 15 ವಿಧಾನಸಭೆ ಮತಕ್ಷೇತ್ರಗಳು, ಎರಡು ಲೋಕಸಭೆ ಕ್ಷೇತ್ರಗಳ ಪೈಕಿ ಇಬ್ಬರು ಸಂಸದರು, 9 ಜನ ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಅಲ್ಲದೇ ಎರಡೂ ಜಿಲ್ಲೆಯ ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂಗಳಲ್ಲಿ ಬಹುತೇಕ ಬಿಜೆಪಿ ಬೆಂಬಲಿತರಿದ್ದಾರೆ. ಈ ಎಲ್ಲ ಕಾರಣಗಳಿಗಾಗಿಯೇ ಬಿಜೆಪಿ ಗೆಲುವು ಸುಲಭ ಎಂಬ ಲೆಕ್ಕಾಚಾರವಿತ್ತು. ಬಹುತೇಕ ಬಿಜೆಪಿ ನಾಯಕರೂ ನಮ್ಮ ಅಭ್ಯರ್ಥಿ 4 ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಮ್ಮತದ ಅಭ್ಯರ್ಥಿಯಾಗಿದ್ರು: ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾದ ತಕ್ಷಣ ಎರಡು ಸ್ಥಾನಗಳಿಗೂ ಬಿಜೆಪಿ ಗೆಲ್ಲಬಹುದು ಎಂಬ ಮಾತು ಕೇಳಿ ಬಂದಿತ್ತು. ದೇಶ-ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಎರಡೂ ಸ್ಥಾನ ನಾವು ಗೆಲ್ಲುತ್ತೇವೆ ಎಂದು ಹಲವರು ಹೇಳಿಕೊಂಡಿದ್ದರು. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬಲಾಬಲದ ಲೆಕ್ಕಾಚಾರ ಮಾಡಿ, ಒಂದೇ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿತ್ತು. ಎರಡೂ ಜಿಲ್ಲೆಯಲ್ಲಿ
ಸುಮಾರು 16 ಜನ ಪಕ್ಷದ ಟಿಕೆಟ್‌ ಕೇಳಿದ್ದರಾದರೂ, ಅಂತಿಮವಾಗಿ ಎರಡೂ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಿ.ಎಚ್‌. ಪೂಜಾರ ಅವರನ್ನು ಆಯ್ಕೆ ಮಾಡಲಾಯಿತು.

ಆಗ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಅಥವಾ ಅಪಸ್ವರ ಬಂದಿರಲಿಲ್ಲ. ಅವರು ಒಮ್ಮತದ ಅಭ್ಯರ್ಥಿಯಾಗಿದ್ದಾರೆ ಎಂದು ಘೋಷಣೆ ಮಾಡಲಾಯಿತು.

ಲೆಕ್ಕ ತಪ್ಪಿದ್ದೆಲ್ಲಿ?: ಎರಡೂ ಜಿಲ್ಲೆಯಲ್ಲಿ ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಬೆಂಬಲಿತ ಜನಪ್ರತಿನಿಧಿಗಳಿದ್ದರೂ ಪ್ರಸ್ತುತ ಚುನಾವಣೆಯಲ್ಲಿ ಕೇವಲ 17 ಮತಗಳ ಅಂತರದಿಂದ ಗೆಲುವು ಸಾಧಿಸಬೇಕಾಯಿತು. ಇನ್ನೂ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಕ್ಷದ ಅಭ್ಯರ್ಥಿ ಗೆಲುವು ಕಠಿಣವಾಗುತ್ತಿತ್ತು. 2ನೇ ಪ್ರಾಶಸ್ತ್ಯದ ಮತ ಎಣಿಕೆ ವೇಳೆ ಬಿಜೆಪಿಯ ಪ್ರಮುಖರ ಎದೆಯಲ್ಲಿ ಢವ ಢವ ಶುರುವಾಗಿತ್ತು. 2ನೇ ಪ್ರಾಶಸ್ತ್ಯದ ಮತಗಳಲ್ಲೂ ಪಕ್ಷೇತರ ಅಭ್ಯರ್ಥಿ ಹೆಚ್ಚು ಪಡೆದಿದ್ದರು.

Advertisement

ಆದರೆ, ಪ್ರಥಮ ಮತ್ತು ಗೆದ್ದ ಅಭ್ಯರ್ಥಿ ಮತ ಪತ್ರದಲ್ಲಿ 2ನೇ ಪ್ರಾಶಸ್ತ್ಯದ ಮತಗಳ ಮೌಲ್ಯದಲ್ಲಿ ಪಿ.ಎಚ್‌. ಪೂಜಾರ ಅವರು ಮುಂದೆ ಬಂದರು. ಹೀಗಾಗಿ ಅವರ ಗೆಲುವು ಖಚಿತವಾಯಿತು. ಆದರೆ, ಪಕ್ಷದ ಬಲವಿದ್ದರೂ ಅತ್ಯಂತ ಕಡಿಮೆ ಮತಗಳ ಅಂತದ ಗೆಲುವಿಗೆ ಕಾರಣವೇನು?, ಸ್ವ ಪಕ್ಷದಲ್ಲೇ ವಿರೋಧಿಗಳ ಗುಂಪು ಇದೆಯಾ?. ಸಚಿವರು, ಶಾಸಕರು, ಮಾಜಿ ಶಾಸಕರು ಒಗ್ಗಟ್ಟಿನ ಪ್ರಚಾರ ನಡೆಸಿದರೂ ಈ ಪ್ರಯಾಸದ ಗೆಲುವಿನ ಹಿಂದಿನ ರಹಸ್ಯವೇನು? ಎಂಬುದರ ಕುರಿತು ಪಕ್ಷದಲ್ಲಿ ಈಗ ಚಿಂತನೆ-ಆತ್ಮಾವಲೋಕನ ನಡೆಯಬೇಕಿದೆ.

ಕಡಿಮೆ ಮತಗಳ ಗೆಲುವಿಗೆ ಜಾತಿ ಮತ್ತು ಹಣ ಬಲವೇ ಕಾರಣ. ಎರಡೂ ಜಿಲ್ಲೆಯ ನಮ್ಮ ಪಕ್ಷದ ಕಾರ್ಯಕರ್ತರು, ಪ್ರಮುಖರು ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೂ ಈ ಕುರಿತು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ನಡೆಯಲಿದೆ.
ಪಿ.ಎಚ್‌. ಪೂಜಾರ,
ವಿಧಾನ ಪರಿಷತ್‌ ನೂತನ ಸದಸ್ಯ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next