Advertisement

ಅಕ್ರಮ ಕಟ್ಟಡದಲ್ಲಿ ಟವರ್‌, ಪಾಲಿಕೆಗೆ ಇಕ್ಕಟ್ಟು

12:24 PM Aug 22, 2018 | |

ಬೆಂಗಳೂರು: ನಗರದಲ್ಲಿ ಅಳವಡಿಕೆಯಾಗಿರುವ ಮೊಬೈಲ್‌ ಟವರ್‌ಗಳನ್ನು ಕ್ರಮಬದ್ಧಗೊಳಿಸುವ ಭರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಿಯಮಬಾಹಿರವಾಗಿ ತಲೆಯೆತ್ತಿರುವ ಸಾವಿರಾರು ಕಟ್ಟಡಗಳನ್ನೂ “ಅಧಿಕೃತ’ಗೊಳಿಸುವ ಇಕ್ಕಟ್ಟಿಗೆ ಸಿಲುಕಿದೆ.

Advertisement

ನಗರದಾದ್ಯಂತ ವಿವಿಧ ಮೊಬೈಲ್‌ ಕಂಪನಿಗಳು ಅಳವಡಿಸಿರುವ ಟವರ್‌ಗಳನ್ನು ಕ್ರಮಬದ್ಧಗೊಳಿಸುವ ಕಾರ್ಯಕ್ಕೆ ಈಗ ಕಾನೂನಿನ ತೊಡಕು ಎದುರಾಗಿದೆ. ಅನಧಿಕೃತವಾಗಿರುವ ಟವರ್‌ಗಳನ್ನು ಅಧಿಕೃತಗೊಳಿಸಿದರೆ, ಅವುಗಳ ಕೆಳಗಿರುವ ಅನಧಿಕೃತ ಕಟ್ಟಡಗಳಿಗೂ ಪರೋಕ್ಷವಾಗಿ “ಸಕ್ರಮದ ಸರ್ಟಿಫಿಕೇಟ್‌’ ಸಿಗಲಿದೆ. ಇದೇ ಕಾರಣಕ್ಕೆ ವಿವಿಧ ಹಂತಗಳಲ್ಲಿ ಒತ್ತಡಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಒಟ್ಟಾರೆ 6,766 ಮೊಬೈಲ್‌ ಟವರ್‌ಗಳು ಅಳವಡಿಕೆ ಆಗಿವೆ. ಈ ಎಲ್ಲ ಟವರ್‌ಗಳನ್ನು ಕ್ರಮಬದ್ಧಗೊಳಿಸುವ ಮುನ್ನ “ಕರ್ನಾಟಕ ಇನ್‌ಸ್ಟಾಲೇಷನ್‌ ಆಫ್ ನ್ಯೂ ಟೆಲಿಕಮ್ಯುನಿಕೇಷನ್‌ ಇನ್‌ಫ್ರಾಸ್ಟ್ರಕ್ಚರ್‌ ಟವರ್‌ ರೆಗ್ಯುಲೇಷನ್‌-2015′ ಕರಡು ಪ್ರಕಾರ ಕಡ್ಡಾಯವಾಗಿ ಸ್ವಾಧೀನಾನುಭವ ಪಮಾಣಪತ್ರ (ಒಸಿ) ಹೊಂದಿರಬೇಕು.

ಆದರೆ, ಟವರ್‌ ತಲೆಯೆತ್ತಿರುವ ಕಟ್ಟಡಗಳಲ್ಲಿ ಬಹುಪಾಲು ನಕ್ಷೆಗೆ ವಿರುದ್ಧವಾಗಿ ನಿರ್ಮಾಣಗೊಂಡಿದ್ದು, ಇದೇ ಕಾರಣಕ್ಕೆ ಒಸಿ ಪಡೆದುಕೊಂಡಿಲ್ಲ. ಹೀಗಿರುವಾಗ, ನಿಯಮಬಾಹಿರ ಕಟ್ಟಡಗಳ ಮೇಲಿರುವ ಟವರ್‌ಗಳಿಗೆ ಒಸಿ ಕೊಟ್ಟರೆ, ಪರೋಕ್ಷವಾಗಿ ಕಟ್ಟಡಗಳಿಗೂ “ಅಧಿಕೃತ ಮುದ್ರೆ’ ಒತ್ತಿದಂತೆ ಆಗಲಿದೆ.

ನಿಯಮ ಉಲ್ಲಂಘನೆ: ನಗರದಲ್ಲಿರುವ 6,766 ಟವರ್‌ಗಳ ಪೈಕಿ ಶೇ. 20ರಷ್ಟು ಮಾತ್ರ ನೆಲದಲ್ಲಿ ಅಳವಡಿಕೆ ಆಗಿವೆ. ಉಳಿದ 80ರಷ್ಟು ಟವರ್‌ಗಳು ಕಟ್ಟಡಗಳ ಮೇಲಿದ್ದು, ವಿಚಿತ್ರವೆಂದರೆ ಆ ಎಲ್ಲ ಕಟ್ಟಡಗಳೂ ನಿಯಮಬಾಹಿರವಾಗಿಯೇ ತಲೆಯೆತ್ತಿವೆ. ಅಲ್ಲದೆ, ನಿಯಮಾವಳಿ ಪ್ರಕಾರ ನೂರು ಮೀಟರ್‌ ದೂರದಲ್ಲಿ ಯಾವುದೇ ಶಾಲಾ-ಕಾಲೇಜುಗಳು, ಸ್ಮಾರಕಗಳು, ಧಾರ್ಮಿಕ ಕೇಂದ್ರಗಳು ಇರಬಾರದು.

Advertisement

ಆದರೆ, ಇದಾವುದೂ ಪಾಲನೆ ಆಗಿಲ್ಲ ಎಂದು ಪಾಲಿಕೆ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಅಷ್ಟೇ ಅಲ್ಲ, ಒಸಿ ಹೊಂದಿರದ ಕಟ್ಟಡದಲ್ಲಿ ಸ್ಥಾಪಿಸಿರುವ ಈ ಟವರ್‌ಗಳ ನೋಂದಣಿ ಮಾಡುವುದರಿಂದ ಕಾನೂನಾತ್ಮಕ ಅಡಚಣೆಗಳೂ ಎದುರಾಗಲಿವೆ. ಇದನ್ನು ಆಧರಿಸಿ ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಆಯಾ ಕಟ್ಟಡಗಳ ಮಾಲಿಕರು ನ್ಯಾಯಾಲಯದ ಮೊರೆಹೋಗುವ ಸಾಧ್ಯತೆಯೂ ಇದೆ.

ಶುಲ್ಕದಲ್ಲೂ ಗೊಂದಲ: ಮತ್ತೂಂದೆಡೆ ಟವರ್‌ಗಳನ್ನು ಕ್ರಮಬದ್ಧಗೊಳಿಸಲು ನೋಂದಣಿ ಮತ್ತು ನವೀಕರಣ ಶುಲ್ಕದಲ್ಲೂ ಬಿಬಿಎಂಪಿ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಈ ಹಿಂದೆ ಅಂದರೆ 2017ರ ಆಗಸ್ಟ್‌ನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯು ಟವರ್‌ಗಳ ನೋಂದಣಿ ಶುಲ್ಕವನ್ನು 50 ಸಾವಿರ ರೂ. ನಿಗದಿಪಡಿಸಿ, ಪಾಲಿಕೆಯಲ್ಲಿ ಅನುಮೋದನೆ ನೀಡಲಾಗಿತ್ತು.

ಆದರೆ, ತದನಂತರದಲ್ಲಿ 2018-19ರ ಪಾಲಿಕೆಯ ಬಜೆಟ್‌ ಕುರಿತ ಸಭೆಯಲ್ಲಿ ಬೇರೆ ಬೇರೆ ನಗರಗಳಲ್ಲಿ ಟವರ್‌ ಅಳವಡಿಕೆ ಶುಲ್ಕ ಸಾಕಷ್ಟು ಹೆಚ್ಚಿದೆ. ಅದರಂತೆ ನಗರದಲ್ಲೂ ಒಎಫ್ಸಿ ಮತ್ತು ಟವರ್‌ಗಳ ಅಳವಡಿಕೆಯ ಶುಲ್ಕವನ್ನು ಪುನರ್‌ ನಿಗದಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದು,

ಈಗ ಅದು 2.5ಲಕ್ಷ ರೂ. ನೋಂದಣಿ ಮತ್ತು 20ಸಾವಿರ ರೂ. ವಿಧಿಸಲು ಅನುಮೋದನೆ ನೀಡುವಂತೆ ಮತ್ತೆ ಪಾಲಿಕೆ ಸಭೆಯ ಮುಂದಿಡಲಾಗಿದೆ. ಈ ಮಧ್ಯೆ ಆರ್‌ಒಡಬು ಪ್ರಕಾರ ತಮಗೆ 10 ಸಾವಿರ ರೂ.ಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ ಎಂದು ಕಂಪನಿಗಳು ವಾದ ಮುಂದಿಡುತ್ತಿವೆ. ಇದೆಲ್ಲದರಿಂದ ಟವರ್‌ಗಳನ್ನು ಕ್ರಮಬದ್ಧಗೊಳಿಸುವ ಪ್ರಕ್ರಿಯೆ ಕಗ್ಗಟ್ಟಾಂಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. 

ಟವರ್‌ಗೂ ಜಿಐಎಸ್‌!: ಪಾಲಿಕೆ ವ್ಯಾಪ್ತಿಯ ಆಸ್ತಿಗಳಂತೆಯೇ ಮೊಬೈಲ್‌ ಟವರ್‌ಗಳನ್ನು ಕೂಡ ಜಿಐಎಸ್‌ ಜಾಲಕ್ಕೆ ಒಳಪಡಿಸಲು ಬಿಬಿಎಂಪಿ ಉದ್ದೇಶಿಸಿದೆ. ಇದರಿಂದ ಕುಳಿತಲ್ಲಿಂದಲೇ ಅಧಿಕೃತ ಟವರ್‌ಗಳ ಮಾಹಿತಿ ಸಿಗಲಿದೆ. ಕೇಂದ್ರದ “ತರಂಗ್‌ ಸಂಚಾರ’ ಅಂತರ್ಜಾಲದಲ್ಲಿ ಎಲ್ಲ ಟವರ್‌ಗಳ ಮಾಹಿತಿ ಲಭ್ಯ ಇರುತ್ತದೆ.

ಅದರೊಂದಿಗೆ ಪಾಲಿಕೆ ಸಂಯೋಜನೆ ಮಾಡಿಕೊಂಡಿದೆ. ಯಾವುದೇ ಟವರ್‌ ಅನ್ನು ಕ್ರಮಬದ್ಧಗೊಳಿಸಲು ಅರ್ಜಿ ಸಲ್ಲಿಸಿದರೆ, ತಕ್ಷಣ ಇಂಟರ್‌ನೆಟ್‌ ಮೂಲಕ ಆ ಉದ್ದೇಶಿತ ಟವರ್‌ ಅನ್ನು ವೀಕ್ಷಿಸಬಹುದು. ಅರ್ಜಿದಾರರು ಸಲ್ಲಿಸಿದ ಮಾಹಿತಿಗೂ ಮತ್ತು ವಾಸ್ತವವಾಗಿ ಇರುವ ಟವರ್‌ನ ಅಕ್ಷಾಂಶ ಮತ್ತು ರೇಖಾಂಶಗಳನ್ನು ತಾಳೆಹಾಕಿ ನೋಡಬಹುದು ಎನ್ನುತ್ತಾರೆ ಅಧಿಕಾರಿಗಳು. 

ಆದರೆ, ಇದಕ್ಕೂ ಮುನ್ನ ಟೆಲಿಕಾಂ ಟವರ್‌ಗೆ ಸಂಬಂಧಿಸಿದ ಕರಡಿನಲ್ಲಿ ವಿಧಿಸಿದಂತೆ ಮಾಲಿಕತ್ವದ ದಾಖಲೆ, ಸ್ಯಾಂಕ್ಷನ್‌x ಪ್ಲಾನ್‌, ಸ್ವಾಧೀನಾನುಭವ ಪತ್ರ, ಲೀಸ್‌ ಡೀಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಇದರಲ್ಲಿ ಅಪ್‌ಲೋಡ್‌ ಮಾಡಬೇಕು. ಕೆರೆ, ನಾಲೆಗಳಲ್ಲಿ ಸ್ಥಾಪನೆ ಆಗಿರದ, ಸೆಟ್‌ಬ್ಯಾಕ್‌ ಬಿಟ್ಟಿರುವ, ರೈಲ್ವೆ ಸ್ವತ್ತುಗಳಿಂದ 30 ಮೀ. ದೂರದಲ್ಲಿರುವುದು ಸೇರಿದಂತೆ ಎಲ್ಲ ನಿಯಮಗಳನ್ನು ಅನುಸರಿಸಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ಸಕ್ರಮಕ್ಕೆ ಮುಂದಾಗಲಿದ್ದಾರೆ.

ಒಸಿ ಇಲ್ಲದಿದ್ದರೆ ಸಮಸ್ಯೆ ಏನು?: ನಕ್ಷೆಗೆ ವಿರುದ್ಧವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ. ಉದಾಹರಣೆಗೆ ಎರಡು ಅಂತಸ್ತಿಗೆ ನಕ್ಷೆ ರೂಪಿಸಿ, ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿರಬಹುದು. ಅಂತಹ ಕಟ್ಟಡಗಳಿಗೆ ಒಸಿ ನೀಡಿರುವುದಿಲ್ಲ. ಆದರೆ ಅದರ ಮೇಲೆ ನಿರ್ಮಿಸಿದ ಟವರ್‌ಗೆ ಒಸಿ ಕೊಟ್ಟರೆ, ಕಟ್ಟಡದಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಅಂತಹ ಕಟ್ಟಡಕ್ಕೆ ಅನುಮತಿ ನೀಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು. ಇದೇ ಕಾರಣಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 

ಸಕ್ರಮಕ್ಕೆ ವಿಶೇಷ ಸಮಿತಿ: ಈ ಮಧ್ಯೆ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಸಕ್ರಮಗೊಳಿಸಲಿಕ್ಕೂ ಸರ್ಕಾರ ವಿಶೇಷ ಸಮಿತಿ ರಚಿಸಿದೆ. ಇದು ಇನ್ನೂ ಪರಿಶೀಲನಾ ಹಂತದಲ್ಲಿದೆ. ಒಂದು ವೇಳೆ ಈ ಸಮಿತಿ ಸಕ್ರಮಗೊಳಿಸಲು ನಿರ್ಧರಿಸಿದರೂ, ಎಲ್ಲವೂ ಅದರ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಸಂಬಂಧ ಹಲವು ನಿರ್ಬಂಧಗಳನ್ನೂ ವಿಧಿಸುವ ಸಾಧ್ಯತೆ ಇದೆ. ಆಗಲೂ ಕೆಲವು ಟವರ್‌ಗಳಿಗೆ ಅನುಮೋದನೆ ಸಿಗುವುದು ಅನುಮಾನ ಎಂದು ನಗರಾಭಿವೃದ್ಧಿ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸುತ್ತಾರೆ.  

ಟವರ್‌ಗಳ ಸಂಖ್ಯೆ
ಸಂಸ್ಥೆ    ಸ್ವಯಂ ಘೋಷಿತ ಟವರ್‌ಗಳು

-ಅಮೆರಿಕನ್‌ ಟವರ್‌ ಕಂಪನಿ (ಎಟಿಸಿ)    1,920
-ಇಂಡಸ್‌ ಟವರ್    2,904
-ಟವರ್‌ ವಿಜನ್‌    448
-ರಿಲಾಯನ್ಸ್‌ ಜಿಯೊ ಇನ್ಫೋಕಾಮ್‌ ಲಿ.,    873
-ರಿಲಾಯನ್ಸ್‌ ಇನ್ಫಾ  621
-ಒಟ್ಟು    6,766

ಟವರ್‌ಗಳನ್ನು ಕ್ರಮಬದ್ಧಗೊಳಿಸಲು ಕಾನೂನಾತ್ಮಕ ಸಮಸ್ಯೆ ಇದೆ. ಹಾಗಂತ, ಟವರ್‌ಗಳನ್ನು ಯಾವುದೇ ಶುಲ್ಕವಿಲ್ಲದೆ, ಉಚಿತವಾಗ ಅಳವಡಿಸಿಕೊಂಡು ದುಡ್ಡು ಮಾಡಲು ಬಿಡಲಾಗದು. ಅದು ಸರಿಯೂ ಅಲ್ಲ. ಆದ್ದರಿಂದ ಮೊದಲು ಶುಲ್ಕ ವಿಧಿಸಿ, ಆಯಾ ಕಂಪನಿಗಳಿಂದ ವಸೂಲು ಮಾಡಲಾಗುವುದು. ಇದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. 
-ಎಂ. ಮಹದೇವ, ಅಧ್ಯಕ್ಷರು, ತೆರಿಗೆ ಮತ್ತು ಆರ್ಥಿಕ ಸಮಿತಿ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next