ಮಸ್ಕಿ: ಪುರಸಭೆ ವತಿಯಿಂದ ಲಕ್ಷಾಂತರ ರೂ. ವ್ಯಯಿಸಿ ಖರೀದಿಸಿದ ಮೊಬೈಲ್ ಟಾಯ್ಲೆಟ್ (ಸಂಚಾರಿ ಶೌಚಾಲಯ)ಗಳು ಬಳಕೆ ಇಲ್ಲದೇ ಇಟ್ಟಲ್ಲಿಯೇ ಕೊಳೆಯುತ್ತಿವೆ. ಮಸ್ಕಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದ್ದರಿಂದ ತಾಲೂಕು ಕೇಂದ್ರಕ್ಕೆ ಬಂದು ಹೋಗುವ ಜನಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದೆ.
ಹೀಗಾಗಿ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ ಮಲ, ಮೂತ್ರ ವಿಸರ್ಜನೆಗೆ ಮೊಬೈಲ್ ಟಾಯ್ಲೆಟ್ ಗಳ ಅಳವಡಿಕೆ ಮಾಡಬೇಕೆನ್ನುವ ಬೇಡಿಕೆ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಪ್ರಕಾರವಾಗಿ ಪುರಸಭೆ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸುಮಾರು ಐದಾರು ಕಡೆಗಳಲ್ಲಿ ಸಂಚಾರಿ ಶೌಚಾಲಯಗಳ ಅಳವಡಿಕೆಗೆ ಯೋಜನೆ ರೂಪಿಸಿತ್ತು.
ಇದಕ್ಕಾಗಿ ಹಣ ಬಳಕೆಗೆ ಕ್ರಿಯಾಯೋಜನೆಗೂ ಅನುಮೋದನೆ ಪಡೆಯಲು ಆರ್ಥಿಕ ಅನುದಾನ ಮೀಸಲಿಡಲಾಗಿತ್ತು. ಈ ಪ್ರಕಾರ ಕಳೆದ ಕೆಲ ತಿಂಗಳ ಹಿಂದೆ ಮೊಬೈಲ್ ಶೌಚಾಲಯ ಖರೀದಿಸಲಾಗಿದೆ. ಆದರೆ ಇವುಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಕೆ ಮಾಡದೇ ಬಿಟ್ಟಿದ್ದರಿಂದ ಇಟ್ಟಲ್ಲಿಯೇ ಹಾಳಾಗುತ್ತಿವೆ.
ಇದನ್ನೂ ಓದಿ:ಸರ್ಕಾರದ ಆದೇಶಕ್ಕೆ ಆಕ್ರೋಶ
ಎಲ್ಲೆಲ್ಲಿ ಅಳವಡಿಕೆ?: ಮಸ್ಕಿ ಪಟ್ಟಣದಲ್ಲಿ ಹಳೇ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ, ಬಸವೇಶ್ವರ ಸರ್ಕಲ್, ಹೊಸ ಬಸ್ ನಿಲ್ದಾಣ ಸೇರಿ ಸಾರ್ವಜನಿಕರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಅಳವಡಿಸಲು 8 ಮೊಬೈಲ್ ಟಾಯ್ಲೆಟ್ ಖರೀದಿಸಲಾಗಿದೆ. ಪ್ರತಿ ಶೌಚಾಲಯದ ಬೆಲೆ 1 ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ಮೊಬೈಲ್ ಶೌಚಾಲಯ ಖರೀದಿಸಲಾಗಿದೆ. ಆದರೆ ಇವುಗಳನ್ನು ಉದ್ದೇಶಿತ ಪ್ರದೇಶಗಳಲ್ಲಿ ಇದುವರೆಗೂ ಅಳವಡಿಕೆ ಮಾಡಿಲ್ಲ.
ನಿರ್ಲಕ್ಷ: ಖರೀದಿಸಿದ ಒಟ್ಟು ಶೌಚಾಲಯದ ಡಬ್ಬಿಗಳನ್ನು ಪಟ್ಟಣದ ಹೃದಯ ಭಾಗದಲ್ಲಿರುವ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಪುರಸಭೆ ಕಟ್ಟಡದ ಆವರಣದಲ್ಲಿ ಬಿಸಾಡಲಾಗಿದೆ. ಪುರಸಭೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಪ್ರತ್ಯೇಕ ಎರಡು ಕಡೆ ಈ ಶೌಚಾಲಯಗಳನ್ನು ಗುಡ್ಡೆ ಹಾಕಲಾಗಿದೆ. ಪುರಸಭೆ ಅಧಿ ಕಾರಿಗಳು ಮತ್ತು ಆಡಳಿತ ಮಂಡಳಿ ನಿರಾಸಕ್ತಿ ಫಲವಾಗಿ ಲಕ್ಷಾಂತರ ರೂ. ವ್ಯಯಿಸಿ ಖರೀದಿಸಿದ ಈ ಶೌಚಾಲಯಗಳು ಬಳಕೆ ಇಲ್ಲದೇ ಕೊಳೆಯುವಂತಾಗಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ