ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲ್ಬೆರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ.
ತಂಗಾಳಿ ಬೀಸುತ್ತಿದೆ ಎಂದರೆ, ಪ್ರಕೃತಿ ಮಳೆಯನ್ನು ಬರ ಮಾಡಿಕೊಳ್ಳಲು ತಯಾರಿ ನಡೆಸಿದೆ ಅಂತ ಅರ್ಥ. ನನ್ನ ಮನದಲ್ಲಿ ತಂಗಾಳಿ ಸುಳಿದಾಡುತ್ತಿದ್ದರೆ, ಅವನು ಬಂದೇ ಬರುವ ಅನ್ನೋ ಖಾತರಿ. ಅವನು ನನ್ನತ್ತ ಹೆಜ್ಜೆ ಹಾಕಿದರೆ, ಮನಸ್ಸಿನಲ್ಲಿ ಸಾವಿರ ಚಿಟ್ಟೆಗಳ ಆಗಮನ. ಅವನು ನನ್ನೆದುರು ಹಾದು ಹೋದರೆ, ಭಾವದ ಅಲೆಗಳ ತಕಧಿಮಿತ. ಯಾಕಿರಬಹುದು? ನಮ್ಮಿಬ್ಬರಿಗೂ ಗೊತ್ತಿಲ್ಲ! ಆದರೆ ಈ ಭಾವವ ಬೊಗಸೆಯಲ್ಲಿಟ್ಟ ನಮ್ಮ ಕಾಲೇಜ್ ಕ್ಯಾಂಪಸ್‌ಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಕ್ಯಾಂಪಸ್ ಎಂಬ ದೋಣಿಯೇ ನಮ್ಮನ್ನು ಎದುರುಬದುರು ನಿಲ್ಲಿಸಿದ್ದು. ಅದೇ ಕ್ಯಾಪಂಸ್‌ನಿಂದಲೇ ನಮ್ಮ ಪಯಣ ಶುರುವಾಗಿದ್ದು.
ಈ ಪಯಣದಲ್ಲಿ ಬರೀ ಸುಖಗಳಿಗೆ, ನಲಿವುಗಳಿಗೆ ಮಾತ್ರ ಅವಕಾಶವಿತ್ತು. ಬೇರೆಲ್ಲವೂ ಇಲ್ಲಿ ನಗಣ್ಯ. ನಾವೆಂದೂ ಬೇರೆಯವರನ್ನು ಅನುಕರಿಸಲು ಹೊರಟವರಲ್ಲ. ಬೇರೆಯವರಂತೆ ಕೈ ಕೈ ಹಿಡಿದು ನಡೆಯಲಿಲ್ಲ, ಒನ್ ಬೈ ಟು ಕಾಫಿ ಕುಡಿಯಲಿಲ್ಲ, ಐಸ್ ಕ್ರೀಂ ಪಾರ್ಲರ್‌ಗೆ ನುಗ್ಗಿದವರಲ್ಲ. ಒಬ್ಬರಿಗೊಬ್ಬರು ದುಬಾರಿ ಉಡುಗೊರೆ ಕೊಡಲಿಲ್ಲ. ನಮ್ಮ ಪ್ರೀತಿ ತೋರಿಕೆಯದ್ದಾಗಿರಲಿಲ್ಲ. ಅದು ಹಸಿರು ತುಂಬಿದ ಮರದ ಮರೆಯಲ್ಲಿರುವ ಕಾಣದ ಕೋಗಿಲೆಯ ದನಿಯಂಥದ್ದು.
ಅವನು ನನಗೋಸ್ಕರ ಕೊಡುತ್ತಿದ್ದ ಉಡುಗೊರೆ ಯಾವುದು ಗೊತ್ತಾ? ನಾನು ಬೇಜಾರಿನಲ್ಲಿದ್ದಾಗ ನನಗೇ ಗೊತ್ತಿಲ್ಲದಂತೆ ನನ್ನಿಷ್ಟದ ನೈಲ್ ಪಾಲಿಶ್ ಅವನ ಕೈಯಲ್ಲಿರುತ್ತಿತ್ತು. ಅದನ್ನು ಅವನೇ ನನ್ನ ಕಾಲುಗುರಿಗೆ ಹಚ್ಚಬೇಕು. ಹಾಗಂತ ಅವನೇ ಆಸೆ ಪಡುತ್ತಿದ್ದ. ಹೀಗೆ ಪ್ರೀತಿ ಸುರಿದು ಕೊಟ್ಟ ಅವನು, ಆಡಲು ಕಲಿತ ಕಂದ ದಾರಿ ತಪ್ಪಿ ಕಳೆದು ಹೋಗುವಂತೆ ನನ್ನಿಂದ ಮರೆಯಾದ! ಅವನು ಯಾಕಾಗಿ ನನ್ನ ದಾರಿಯಿಂದ ಪಟ್ ಅಂತ ಕಾಲು ಕಿತ್ತನೋ ಗೊತ್ತಿಲ್ಲ. ಈ ಕಣ್ಣುಗಳು ಅವನನ್ನು ಕ್ಷಣ ಕ್ಷಣಕ್ಕೂ ಹುಡುಕಿ ಸೋತಿವೆ. ಬಿಸಿಲಿನೊಡಗೂಡಿ ಬಂದ ಮಳೆಯಲ್ಲಿ ಮೂಡಿದ ಕಾಮನಬಿಲ್ಲಿನಂತೆ, ಕಂಡೂ ಕಾಣದಂತೆ ಮರೆಯಾದ.
ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲೆºರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ. ಆ ಬಣ್ಣಗಳು ಅವನಿಗೆ ಮಾತ್ರ ಸ್ವಂತ; ನನ್ನ ಕಾಲೆºರಳುಗಳು ಕೂಡ!
ಸೌಮ್ಯ ಸಿ. ದೇವಾಂಗದ