Advertisement

ಮೂರು ವರ್ಷ ಇಳಿದ ಫ‌ಲಿತಾಂಶ ಈ ಸಲ ಏರುವ ನಿರೀಕ್ಷೆ

10:50 AM Feb 16, 2018 | |

ಸುಳ್ಯ : ಕಳೆದ ಮೂರು ವರ್ಷಗಳ ಅಂಕಿ- ಅಂಶ ಗಮನಿಸಿದರೆ, ತಾಲೂಕಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಕುಸಿತದತ್ತ ಮುಖ ಮಾಡಿದೆ. ಅದಕ್ಕೆ ರಾಜ್ಯದ ಒಟ್ಟು ಫಲಿತಾಂಶ ಕುಸಿತದ ಒಂದಂಶ ಕಾರಣವೆಂದು ವಿಶ್ಲೇಷಿಸಲಾಗಿತ್ತು. ಈ ಬಾರಿ ಫಲಿತಾಂಶ ಸುಧಾರಣೆಗೆ ಪೂರಕವೆಂಬಂತೆ ಹತ್ತಾರು ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.

Advertisement

ತಾಲೂಕಿನ 38 ಪ್ರೌಢಶಾಲೆಗಳ 1,995 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 15 ಸರಕಾರಿ, 7 ಅನುದಾರನ ರಹಿತ, 7 ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿದ್ದಾರೆ. 1,036 ಬಾಲಕಿಯರು ಮತ್ತು 959 ಬಾಲಕರು ಇದ್ದಾರೆ. ತಾಲೂಕಿನ ಸುಳ್ಯ ಪ್ರೌಢಶಾಲೆ, ಗಾಂಧಿನಗರ ಪ್ರೌಢಶಾಲೆ, ಸೈಂಟ್‌ ಜೋಸೆಫ್‌ ಪ್ರೌಢಶಾಲೆ, ಸುಬ್ರಹ್ಮಣ್ಯ, ಬೆಳ್ಳಾರೆ, ಅರಂತೋಡು ಪ್ರೌಢಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ.

ಫಲಿತಾಂಶ ಕುಸಿತ
ಮೂರು ವರ್ಷಗಳ ಅವಧಿಯಲ್ಲಿ ಫಲಿತಾಂಶದ ಪ್ರಮಾಣ ತಾಲೂಕಿನಲ್ಲಿ ಕುಸಿತ ಕಂಡಿದೆ. 2005ರಲ್ಲಿ ಶೇ. 89.25,
2016ರಲ್ಲಿ ಶೇ. 85.56 ಹಾಗೂ 2017ರಲ್ಲಿ ಶೇ. 81.84 ಫಲಿತಾಂಶ ದಾಖಲಾಗಿದೆ. ಅಂದರೆ ಪ್ರತಿವರ್ಷ ಶೇ. 4ರಷ್ಟು ಫಲಿತಾಂಶ ಪ್ರಮಾಣ ಇಳಿಕೆಯತ್ತ ಮುಖ ಮಾಡಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬಹುತೇಕ ಇಂತಹುದೇ ಚಿತ್ರಣ ಕಾಣಸಿಗುತ್ತದೆ.

ವೃದ್ಧಿಗೆ ಪೂರಕ ಕ್ರಮ
ವಿಶ್ವಾಸ ಕಿರಣ ಕಾರ್ಯಕ್ರಮದ ಅಡಿಯಲ್ಲಿ ತಾಲೂಕಿನ ನುರಿತ ಶಿಕ್ಷಕರಿಂದ ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳಲ್ಲಿ 25 ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಬೋಧನ ಕ್ರಮ
ಅಳವಡಿಸಲಾಗಿತ್ತು. ಗುತ್ತಿಗಾರು, ಬೆಳ್ಳಾರೆ, ಸುಳ್ಯದಲ್ಲಿ ಈ ತರಗತಿ ನಡೆದಿದೆ. ಇದನ್ನು ಎಲ್ಲ ಶಾಲೆಗಳಲ್ಲಿ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹಿರಿಯ ಶಿಕ್ಷಕರ ಎರಡು ತಂಡ ರಚಿಸಿ, ಫಲಿತಾಂಶ ಹಿನ್ನಡೆ ಇರುವ ಶಾಲೆಗಳಿಗೆ ಭೇಟ ನೀಡಿ ಅಲ್ಲಿನ ಶಿಕ್ಷಕರ ಪಾಠ
ಕ್ರಮ ವೀಕ್ಷಣೆ ಮಾಡಲಾಗಿದೆ. ಅವರಿಗೆ ಮಾರ್ಗದರ್ಶನ ನೀಡುವುದಾಗಿದೆ. ಶಿಕ್ಷಣ ಇಲಾಖೆ-ಜಿ.ಪಂ. ಜಂಟಿಯಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ ಪರೀಕ್ಷಾ ಭಯ ಹೋಗಾಡಿಸಲು ಮತ್ತು ಪರೀಕ್ಷೆ ಎದುರಿಸಲು ಸದೃಢರಾಗಲು ರೂಪಿಸಿದ ಕಾಯಕ್ರಮದ ನೇರ ಪ್ರಸಾರವನ್ನು ಆಯಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ವೀಕ್ಷಿಸಿದ್ದಾರೆ.

Advertisement

ದತ್ತು ಯೋಜನೆ
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಯೊಂದಿಗೆ ಸೇರಿಸಿ ಅಧ್ಯಯನ
ಚಟುವಟಿಕೆಯನ್ನು ಅವರಿಬ್ಬರೂ ನಡೆಸುವುದು. ಅದೇ ರೀತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರೇ ದತ್ತು
ತೆಗೆದುಕೊಂಡು ವಿಶೇಷ ನಿಗಾ ಇಡುವುದು – ಇವೆಲ್ಲ ಪ್ರಕ್ರಿಯೆಗಳನ್ನು ತರಗತಿ ಅವಧಿಯಲ್ಲಿಯೇ ನಡೆಸಲಾಗಿದೆ.

ಪರಿಹಾರ ಬೋಧನೆ
ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳ ಅಂಕವನ್ನು ಗಮನಿಸಿಕೊಂಡು, ಅದನ್ನು ಆಧಾರವಾಗಿಟ್ಟು ಆಯಾ ಶಾಲೆಗಳಲ್ಲಿ ಪರಿಹಾರ ಬೋಧನ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳಿಗೆ ಡಯೆಟ್‌ನಿಂದ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ ವಹಿಸಲಾಗಿದೆ. ನಾಲ್ಕು ಹಾಸ್ಟೆಲ್‌ಗ‌ಳ ಪೈಕಿ 3ಕ್ಕೆ ಭೇಟಿ ನೀಡಿದ್ದು, ಅಲ್ಲಿ ಪರೀಕ್ಷಾ ಚಟುವಟಿಕೆಗೆ ಸಂಬಂಧಿಸಿ ತಯಾರಿ ಕುರಿತು ಸಿಬಂದಿಗೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗಿದೆ. 

ಉಳಿದಂತೆ ಕ್ವಿಜ್‌, ಗುಂಪು ಅಧ್ಯಯನ, ವಿಶೇಷ ತರಗತಿ, ಒಂದು ಶಾಲೆಯ ಶಿಕ್ಷಕರು, ಇನ್ನೊಂದು ಶಾಲೆಯಲ್ಲಿ ಪಾಠ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷ ಕಡಿಮೆ ಫಲಿತಾಂಶ ದಾಖಲಿಸಿದ 6 ಶಾಲೆಗಳಿಗೆ ಶಿಕ್ಷಣಾಧಿಕಾರಿ ನೇತೃತ್ವದ ತಂಡ ತೆರಳಿ ಮಾರ್ಗದರ್ಶನ ನೀಡಿದೆ. ಇನ್ನು 6 ಶಾಲೆಗಳಿಗೆ ಡಿಡಿಪಿಐ, ಡಯಟ್‌ ಶಿಕ್ಷಕರು ಭೇಟಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.

ಪೋಷಕರ ಸಭೆ 
ವಿವಿಧ ಹಂತದ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪೋಷ ಕರು ಪ್ರೋತ್ಸಾಹ ನೀಡುವ
ನಿಟ್ಟಿನಲ್ಲಿ ಅರಂತೋಡು, ಸುಳ್ಯ, ಪಂಜ, ಬೆಳ್ಳಾರೆ, ಗುತ್ತಿಗಾರಿನಲ್ಲಿ ಪೋಷಕರ ಸಭೆ ನಡೆಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕಳೆದ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಪೋಷಕರನ್ನು ಕರೆಯಿಸಿ, ಅವರು
ತನ್ನ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

ಉತ್ತೇಜನ ನೀಡಲಾಗಿದೆ
ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಗರಿಷ್ಠ ಪ್ರಮಾಣದಲ್ಲಿ ತೇರ್ಗಡೆಗೊಳಿಸುವ ನಿಟ್ಟಿನಲ್ಲಿ ಬೇಕಾದ ಪೂರಕ ಚಟುವಟಿಕೆಗೆ ಆದ್ಯತೆ ನೀಡಲಾಗಿದೆ. ಆಯಾ ಶಾಲೆಗಳಿಗೆ ಭೇಟ ನೀಡಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗಿದೆ. ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಿದ್ದೇವೆ.
– ಬಿ.ಎಸ್‌. ಕೆಂಪಲಿಂಗಪ್ಪ
ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ 

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next