ಹೊಸದಿಲ್ಲಿ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸಮುದ್ರ ಮಟ್ಟವೂ ಏರಿಕೆಯಾಗುತ್ತದೆ ಎಂಬ ಅಂಶವನ್ನು ಕೇಂದ್ರ ಸರಕಾರ ಶುಕ್ರವಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ. ಅದರಿಂದಾಗಿ ಕಾವೇರಿ ಮುಖಜ ಭೂಮಿ ಸೇರಿದಂತೆ ಪ್ರಮುಖ ನದಿಗಳ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಸಮುದ್ರದ ನೀರು ನುಗ್ಗಲಿದೆ ಎಂದು ಹೇಳಿದೆ.
1990ರಿಂದ 2100ರ ಅವಧಿಯಲ್ಲಿ ಸಮುದ್ರದ ಮಟ್ಟ 3.5 ರಿಂದ 34.6 ಇಂಚುವರೆಗೆ ವೃದ್ಧಿಸಲಿದೆ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಮಹೇಶ್ ಶರ್ಮಾ ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಪೈಕಿ ಗುಜರಾತ್‌ನ ಕಛ…, ಖಂಬಾಟ್ ಪ್ರದೇಶ ಮತ್ತು ಮುಂಬೈ ನಗರಕ್ಕೆ ಹೆಚ್ಚಿನ ಅಪಾಯ ಇದೆ ಎಂದಿದ್ದಾರೆ. ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶನ್ ಇನ್ಫರ್ಮೇಶನ್ ಸರ್ವಿಸಸ್ ಈ ಬಗ್ಗೆ ಅಧ್ಯಯನ ನಡೆಸಿದೆ. ಅದನ್ನು ವಿಶ್ವಸಂಸ್ಥೆಗೆ ಸಲ್ಲಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಸಮುದ್ರದ ಮಟ್ಟ ಹೆಚ್ಚಾಗುವುದರಿಂದ ಉಪ್ಪಿನಂಶ ಇರುವ ನೀರು ಕರಾವಳಿ ಪ್ರದೇಶದಲ್ಲಿನ ಅಂತರ್ಜಲದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಜತೆಗೆ ಜಮೀನಿಗೆ ನೀರು ನುಗ್ಗಲಿದೆ. ಕೊಂಕಣ ಪ್ರದೇಶದ ಕರಾವಳಿಯ ಆಯ್ದ ಭಾಗ, ದಕ್ಷಿಣ ಕೇರಳ, ಪಶ್ಚಿಮ ಕರಾವಳಿ ವ್ಯಾಪ್ತಿ ಯಲ್ಲಿ ಖಂಬಟ್, ಕಛ…, ಮುಂಬಯಿ, ಗಂಗಾ, ಕೃಷ್ಣಾ. ಗೋದಾವರಿ, ಕಾವೇರಿ, ಮಹಾ ನದಿ ಮುಖಜ ಭೂಮಿಗಳು ಹೆಚ್ಚು ಅಪಾಯಕ್ಕೆ ಗುರಿಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
73,516 ಕೋಟಿ ರೂ. ಸಂಗ್ರಹ: ಪೆಟ್ರೋಲ್ ಮೇಲೆ ಅಬಕಾರಿ ಸುಂಕ ವಿಧಿಸಿದ್ದರಿಂದ ಹಿಂದಿನ ವಿತ್ತೀಯ ವರ್ಷದಲ್ಲಿ ಕೇಂದ್ರ ಸರಕಾ ರಕ್ಕೆ 73, 516.8 ಕೋಟಿ ರೂ., ಡೀಸೆಲ್ ನಿಂದ 1.5 ಲಕ್ಷ ಕೋಟಿ ರೂ. ಸಂಗ್ರಹ ವಾಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಶಿವ ಪ್ರತಾಪ ಶುಕ್ಲಾ ಲೋಕಸಭೆಗೆ ತಿಳಿಸಿದ್ದಾರೆ.
ಸದನ ಬಾವಿಗೆ ನುಗ್ಗಿದರೆ ಸಸ್ಪೆಂಡ್: ಕಲಾಪದ ಅವಧಿಯಲ್ಲಿ ಲೋಕಸಭೆಯ ಬಾವಿಗೆ ನುಗ್ಗಿದ ಸದಸ್ಯರನ್ನು ಸ್ವಯಂ ಚಾಲಿತ ವಾಗಿ ಸಸ್ಪೆಂಡ್ ಮಾಡಬೇಕು ಎಂದು ನಿಯಮಗಳ ಸಮಿತಿ ಸ್ಪೀಕರ್‌ಗೆ ಶಿಫಾರಸು ಮಾಡಿದೆ. ಉದ್ದೇಶಪೂರ್ವಕ ವಾಗಿ ಕಲಾಪಕ್ಕೆ ಭಂಗ ತರುವವರಿಗೂ ಇದೇ ನಿಯಮ ಅನ್ವಯವಾಗಬೇಕು ಎಂದಿದೆ ಸಮಿತಿ.
27ಕ್ಕೆ ಕಲಾಪ: ಶುಕ್ರವಾರ ಕೂಡ ಲೋಕ ಸಭೆ, ರಾಜ್ಯಸಭೆಯಲ್ಲಿ ರಫೇಲ್, ಗೂಢ ಚರ್ಯೆ ವಿವಾದದ ಹಿನ್ನೆಲೆಯಲ್ಲಿ ಕಲಾಪ ನಡೆಯಲಿಲ್ಲ. ಹೀಗಾಗಿ, ಎರಡೂ ಸದನಗಳ ಕಲಾಪಗಳನ್ನು ಡಿ.27ಕ್ಕೆ ಮುಂದೂಡಲಾಗಿದೆ. ಡಿ.24, 25, 26ರಂದು ಕ್ರಿಸ್‌ಮಸ್ ನಿಮಿತ್ತ ಕಲಾಪ ನಡೆಸಲಾಗುತ್ತಿಲ್ಲ.