Advertisement
ಅಮ್ಮ , “ಪಕ್ಕದ ಮನೆ ಹುಡುಗ ಸಿ.ಎ. ಮಾಡ್ತಿದ್ದಾನೆ, ನೀನು ಅದನ್ನೇ ಮಾಡಬೇಕು’ ಅಂತ ಬೆಳಗ್ಗೆ-ಸಂಜೆ ಕಿವಿಯಲ್ಲಿ ತುಂಬುತ್ತಾಳೆ. ನಿಮ್ಮ ಓರಗೆಯ ಗೆಳತಿ, “ನಂಗೆ ಮೆಡಿಕಲ್ ಅಂದ್ರೆ ಅಲರ್ಜಿ, ಇಷ್ಟಾನೇ ಇಲ್ಲ. ನಾನು ಇಂಜಿನಿಯರಿಂಗ್ ಮಾಡ್ತೀನಿ’ ಅಂತಾಳೆ. ಇವೆಲ್ಲವನ್ನು ಕೇಳಿ, ಕೇಳಿ ನೀವು ನಿಮ್ಮ ಆಯ್ಕೆಯನ್ನೇ ಮರೆತುಬಿಡುತ್ತೀರಿ. ಅಪ್ಪ ತಂದ ಅಪ್ಲಿಕೇಶನ್‌ನ ಕಾಲೇಜಿನ ಮೆಟ್ಟಿಲು ತುಳಿಯುವುದಾ? ಅಮ್ಮನ ಆಸೆಯಂತೆ ನಡೆಯುವುದಾ? ಅವಳಾÂಕೆ ಮೆಡಿಕಲ್ ಬೇಡ ಅಂದು? ಛೇ! ತಲೆ ಕೆಟ್ಟು ಹೋಗುತ್ತಿದೆ, ಏನ್ ಮಾಡಬೇಕು ಅಂತಾನೇ ಗೊತ್ತಾಗ್ತಿಲ್ಲ ಅಂತ ಸೋತು ಬಿಡುತ್ತೀರಿ. ಆದರೆ, ಮನಸ್ಸಿನ ಮೂಲೆಯಲ್ಲಿ ನೀವೊಬ್ಬ ಅದ್ಭುತ ಫ್ಯಾಶನ್ ಡಿಸೈನರ್ ಆಗಬೇಕು ಅನ್ನುವ ನಿಮ್ಮ ಆಸೆ ಹೊರಗೆ ಬಾರದೇ ಸತ್ತು ಹೋಗುತ್ತದೆ.
Related Articles
Advertisement
ಕೇವಲ ಅಂಕಗಳ ಆಧಾರದ ಮೇಲೆ ನೀವ್ಯಾಕೆ ಮುಂದಿನ ದಾರಿ ಗುರುತಿಸಿ ಬಿಡುತ್ತೀರಿ! ಎಲ್ಲವನ್ನೂ ಮಗುವಿನ ಮೇಲೆಯೇ ಹೇರೋದು ಕೂಡ ತಪ್ಪು. “ನೀನೇನಾಗುತ್ತಿ?’ ಎಂದು ಕೇಳಿದರೆ ಅವರು ತಾನೆ ಏನು ಹೇಳಲು ಸಾಧ್ಯ? ನಾವು ಹಿಡಿದು, ಹಿಂಡಿ ಬುದ್ಧಿ ಹೇಳಿದರೆ ಸರಿ ಹೋಗುತ್ತೆ ಅನ್ನೋ ವಾದವಿದ್ದರೆ ಅದನ್ನು ಒಪ್ಪಿಕೊಳ್ಳುವುದು ತುಂಬ ಕಷ್ಟ. ನಿಜಕ್ಕೂ ಹೇಳಬೇಕು ಅಂದ್ರೆ 16-18 ಹರೆಯದಲ್ಲಿ ಮುಂದೆ ತಾನೇನೂ ಓದಬಲ್ಲೇ, ಕಲಿಯಬಲ್ಲೇ ಎಂಬ ಒಂದು ಚಿಕ್ಕ ಪ್ರಬುದ್ಧತೆ ಮಗುವಿಗೆ ಬಂದೇ ಇರುತ್ತದೆ. ಅವರ ಮುಂದೆ ಸಾವಿರ ಉದಾಹರಣೆಗಳಿವೆ. ತಮ್ಮ ಕಲಿಕೆಯ ಮಧ್ಯದಲ್ಲೂ ಕೂಡ ಸಾಕಷ್ಟು ಕಂಡುಕೊಂಡಿರುತ್ತಾರೆ. ನೀವು ಅವರ ಮುಂದೆ ಆಯ್ಕೆಗಳನ್ನು ಇಡಿ. ಅದರ ಬಗ್ಗೆ ವಿವರಿಸಿ. ಅವರ ಆಸಕ್ತಿಯನ್ನು ಆಲಿಸಿ. ಅದರ ಅವಕಾಶಗಳ ಬಗ್ಗೆ ತಿಳಿಸಿಕೊಡಿ. ನಂತರ ಇಬ್ಬರೂ ಒಪ್ಪಿತವಾದ ದಾರಿಯ ಕಡೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಿ. ಏಕೆಂದರೆ, ಓದಬೇಕಿರುವುದು ನಿಮ್ಮ ಮಗುವೇ ಹೊರತು ನೀವಲ್ಲ. ಕೇವಲ ಅಂಕ ಅವರ ಭವಿಷ್ಯ ನಿರ್ಧರಿಸುವುದು ಬೇಡ. ಏಕೆಂದರೆ, ಯಾವುದನ್ನೂ ಗಮನಿಸದೇ ನಮ್ಮ ಹಠಕ್ಕೆ ನಾವು ಬಿದ್ದೇವೆಂದಾದರೆ ಮಗುವಿನ ಸಮಯ, ವಯಸ್ಸು , ನಿಮ್ಮ ದುಡ್ಡು, ಶ್ರಮ, ಅವರ ಭವಿಷ್ಯ ಎಲ್ಲವೂ ಹಾಳಾಗುತ್ತದೆ. ಕೆಲವು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಇರುವುದಿಲ್ಲ, ವ್ಯವಹಾರವೊ, ಅಭಿನಯವೊ, ಸಂಗೀತವೊ, ಕೃಷಿಯೊ ಮುಂತಾದವುಗಳ ಕಡೆ ಹೆಚ್ಚು ಆಸ್ಥೆ ಇರುತ್ತದೆ. ಅದರಲ್ಲೇ ಮುಂದುವರೆಯಲು ಅವಕಾಶ ಮಾಡಿಕೊಡಿ. ಇಷ್ಟು ಹೊತ್ತಿಗೆ ನಿಮ್ಮ ಮಗು ಓದು-ಬರಹ, ಒಂದಿಷ್ಟು ಜ್ಞಾನ ಅದನ್ನು ಕಲಿಯಬೇಕಿತ್ತು ಅದನ್ನು ಕಲಿತಿದೆ, ಇನ್ನು ಮುಂದೆ ಕಲಿಯಬೇಕಿರುವುದು ಬದುಕು, ಅದನ್ನು ಸುಂದರಗೊಳಿಸಿಕೊಳ್ಳಲು ಮಗುವೇ ಇಷ್ಟಪಡುವಂತಹ ಒಂದು ಕೆಲಸ. ಅದನ್ನು ಅದು ಪಡೆದುಕೊಳ್ಳಲಿ. ಸಹಕರಿಸಿ. ಆಗ ಆ ಕೆಲಸವೂ ಕೂಡ ಒಬ್ಬ ನ್ಯಾಯಯುತವಾದ ಕೆಲಸಗಾರ ಪಡೆದ ಧನ್ಯತೆ ಪಡೆಯುತ್ತದೆ. ಆದ್ದರಿಂದ ಮಗುವು ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶ ಮಾಡಿಕೊಟ್ಟು, ಹಾರೈಸಿ. ಅಲ್ಲವೆ?
– ಸದಾಶಿವ ಸೊರಟೂರು