Advertisement

 ಹಿಂದೂ ಧರ್ಮ ಬೋಧನೆಯೇ ಜೀವಾಳವಾಗಲಿ: ವಲ್ಸನ್‌ ತಿಲ್ಲಂಗೇರಿ

01:00 AM Mar 14, 2019 | Team Udayavani |

ಕಾಸರಗೋಡು: ಭಾರ್ಗವ ಕೇರಳದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಹಿಂದುತ್ವವೇ ಭಾರತದ ಆತ್ಮ. ಇಲ್ಲಿನ ಮಣ್ಣಿನ ಕಣ ಕಣವೂ ಪವಿತ್ರ. ವಿಶ್ವಾಸವನ್ನು ವಿಚಾರವನ್ನಾಗಿ ಮಾಡಿ, ವಿಚಾರವನ್ನು ಆಚಾರವನ್ನಾಗಿ ಮಾಡಿ ಇದನ್ನು ಮುಂದಿನ ಪೀಳಿಗೆಗೆ ರವಾನಿಸಿ ಧರ್ಮ ಬೋಧೆಯೇ ನಮ್ಮ ಜೀವಾಳವಾಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇರಳ ಪ್ರಾಂತ್ಯ ವಿದ್ಯಾರ್ಥಿ ಪ್ರಮುಖ್‌ ವಲ್ಸನ್‌ ತಿಲ್ಲಂಗೇರಿ ಅವರು ಹೇಳಿದರು.

Advertisement

ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋ ಜಿಸಿದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.

ಶರೀರವೆಂಬುದು ನಶ್ವರ. ಹಾಗೆಯೇ ಕ್ಷೇತ್ರಗಳಿಗೂ ಶರೀರ ಸಂಕಲ್ಪವೆಂಬುದಿದೆ. ಶರೀರವಾಗಿ ಸಂಕಲ್ಪಿಸುವ ಕ್ಷೇತ್ರ ಚೈತನ್ಯಕ್ಕೆ ಜೀರ್ಣತೆ ಉಂಟಾಗುವಾಗ ಪ್ರತಿ 12 ವರ್ಷಗಳಿಗೊಮ್ಮೆ    ಅಷ್ಟಬಂಧ  ಲೇಪನವನ್ನು ಮಾಡಿ ಅದನ್ನು ಸರಿಯಾಗಿಸುವುದು. ಶಿಲೆಯನ್ನು ಶಿವನನ್ನಾಗಿ ಮಾಡುವುದೇ ಚೈತನ್ಯ ವೃದ್ಧಿಗಾಗಿ ಕೈಗೊಳ್ಳುವ ಧಾರ್ಮಿಕ, ವೈದಿಕ, ವೈಜ್ಞಾನಿಕ ಕಾರ್ಯವೇ ಅಷ್ಟಬಂಧ ಬ್ರಹ್ಮಕಲಶ. ಅಂದರೆ ಕ್ಷೇತ್ರಕ್ಕೆ ಜೀರ್ಣತೆಯಿಲ್ಲ. ಬದಲು ಕ್ಷೇತ್ರದಲ್ಲಿರುವ ಶರೀರವು ಜೀರ್ಣವಾದಾಗ ಇಂತಹ ಬ್ರಹ್ಮಕಲಶ ಅಗತ್ಯ. ಜೀರ್ಣೋದ್ಧಾರ ಕೆಲಸದಲ್ಲಿ ಭಾಗಿಯಾಗುವುದು ಅತ್ಯಂತ ಸೌಭಾಗ್ಯದ ಅವಕಾಶ. ಕೆಲವು ತಲೆಮಾರಿಗೆ ಈ ಭಾಗ್ಯ ಲಭಿಸಬೇಕೆಂದೇನಿಲ್ಲ ಎಂದರು.

“ಕುಟುಂಬ’ ಎಂಬುದಕ್ಕೆ ಶಿವನೇ ಮೂಲ ಕಾರಣ. ಜೀವನ ಮೌಲ್ಯದ ಪ್ರಾಥಮಿಕ ಪಾಠವನ್ನು ಕಲಿಯಲು ಕುಟುಂಬವೇ ಶಾಲೆ. ಇಲಿ, ಹಾವು, ಕಾಳ, ಸಿಂಹ-ಜತೆಗೂಡಿ ಇರುವ ಸಾಧ್ಯವಿದೆ ಎಂಬುದನ್ನು ಶಿವ ಕುಟುಂಬದಿಂದ ಕಾಣಬಹುದಾಗಿದೆ. ಪರಸ್ಪರ ಸ್ನೇಹಿಸಿ, ಒಗ್ಗೂಡಿ ವರ್ತಿಸಿ, ಒಂದೇ ಮನೆಯಲ್ಲಿ ಜತೆಗೂಡಿ ಇರಬೇಕು ಎಂಬುದನ್ನು ಶಿವ ಕುಟುಂಬ ಸೂಚಿಸುತ್ತದೆ. ಕುಟುಂಬ ಜತೆಗೂಡಿದಾಗ ಸಂತೋಷ ಉಂಟಾಗುತ್ತದೆ. ನಾವು ಸಂಘಟಿತರಾದರೆ ಸಂತೋಷವೂ, ಶಕ್ತಿಯೂ ಅಲ್ಲಿ ಆವಿರ್ಭವಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ್‌ ದಿನೇಶ್‌ ಮಡಪ್ಪುರ ಅಧ್ಯಕ್ಷತೆ ವಹಿಸಿದರು. ಪಿಲಿಕುಂಜೆಯ ಶ್ರೀ ಐವರ್‌ ಭಗವ‌ತಿ ಕ್ಷೇತ್ರದ  ಅಧ್ಯಕ್ಷ   ಕೃಷ್ಣನ್‌   ಕೂಡ್ಲು, ತೆರುವತ್‌ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಅಧ್ಯಕ್ಷ ಹರೀಶ್‌ ಕೋಟೆಕಣಿ, ಕಾಸರಗೋಡು ಕೋ-ಆಪರೇಟಿವ್‌ ಟೌನ್‌ ಬ್ಯಾಂಕ್‌ ಜನರಲ್‌ ಮ್ಯಾನೇಜರ್‌ ರಮೇಶ್‌ ಪಿ, ನಗರಸಭಾ ಸದಸ್ಯ ಅರುಣ್‌ ಕುಮಾರ್‌ ಶೆಟ್ಟಿ, ಶ್ರೀ ನಾರಾಯಣ ಗುರು ಮಂದಿರ ಅಧ್ಯಕ್ಷ ಚಂದ್ರಶೇಖರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಅನಿಲ್‌ ಬಿ. ನಾಯರ್‌ ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಂದ್ರನ್‌ ವಂದಿಸಿದರು. ಜತೆ ಕಾರ್ಯದರ್ಶಿ ಕೆ.ಎನ್‌. ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು.

ನಾಡಿಗೆ ಬೆಳಕು ನೀಡುವ ಕ್ಷೇತ್ರಗಳು
ಉತ್ತರ ಮಲಬಾರಿನ ಕಾಸರಗೋಡಿನಲ್ಲಿ ಚಾರಿತ್ರಿಕ ಹಿನ್ನೆಲೆಯುಳ್ಳ ಕಾರಣಿಕ ಕ್ಷೇತ್ರವೇ ಮಲ್ಲಿಕಾರ್ಜುನ ದೇವಸ್ಥಾನ. ಬಹುಶ‌ಃ ಕಾಸರಗೋಡಿನ ಪರ್ಯಾಯ ಹೆಸರಾಗಿ ಮಲ್ಲಿಕಾರ್ಜುನ ದೇವಸ್ಥಾನ ಎಂದು ಕರೆಯಬಹುದು. ಲೋಕ ಕ್ಷೇಮಕ್ಕಾಗಿ ನಮ್ಮ ಪೂರ್ವಜರು ನಿರ್ಮಿಸಿದ ಆಧ್ಯಾತ್ಮಿಕ ಕ್ಷೇತ್ರಗಳು ನಮ್ಮ ನಾಡಿಗೆ ಬೆಳಕನ್ನು ಈಯುವ ಕೇಂದ್ರಗಳಾಗಿವೆ ಎಂದು ವಲ್ಸನ್‌ ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next