ಕಾರ್ಕಳ: ಶಿಕ್ಷಕರಿಗೆ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಹೇಳಿಕೊಡುವ ಜವಾಬ್ದಾರಿ ಮಾತ್ರ ಇರುವುದಲ್ಲ. ಶ್ರೇಷ್ಠ ಪ್ರಜೆಯನ್ನು ಸಮಾಜಕ್ಕೆ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರಿಗೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಅನೇಕ ವಿಚಾರಗಳನ್ನು ತಿಳಿದುಕೊಂಡು ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್ ಹೇಳಿದರು.
ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಸೆ. 5ರಂದು ಎಸ್‌ವಿಟಿ ಶಿಕ್ಷಣ ಸಂಸ್ಥೆಗಳ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶ ಸರ್ವಶ್ರೇಷ್ಠ ರಾಷ್ಟ್ರವಾಗ ಬೇಕಾದರೆ ಸುಶಿಕ್ಷಿತ ಪ್ರಜೆಗಳು ಸಮಾಜ ದಲ್ಲಿರಬೇಕು. ಅಂತಹ ಪ್ರಜೆಗಳನ್ನು ನಮ್ಮ ಶಿಕ್ಷಕರು ರೂಪಿಸುತ್ತಾರೆ. ತಮ್ಮ ಶಿಷ್ಯಂದಿರು ಯಾವತ್ತು ನಮ್ಮ ಗುರುಗಳೇದಂದು ಪೂಜಿಸುತ್ತಾರೆಯೇ ಆಗ ಆ ಶಿಕ್ಷಕರು ಶ್ರೇಷ್ಠ ಶಿಕ್ಷಕರೆನಿಸಿಕೊಳ್ಳುತ್ತಾರೆ ಎಂದರು.
ಸರ್ವಪಳ್ಳಿ ರಾಏಚಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾ ಯಿತು. ನಿವೃತ್ತ ಶಿಕ್ಷಕರು ಹಾಗೂ ಸಾಧಕ ಶಿಕ್ಷಕರನ್ನು ಸಮ್ಮಾನಿಸಲಾಯಿತು. ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ ಕೆ.ಬಿ., ಜಿ.ಪಂ. ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ ಇನ್ನಾ, ಜ್ಯೋತಿ ಹರೀಶ್ ಹಾಗೂ ಎಸ್‌ವಿಟಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಪಿ. ಶೆಣೈ, ಸುರೇಂದ್ರ ಹೆಗ್ಡೆ, ಭಾಸ್ಕರ ಟಿ, ಹರೀಶ್ ನಾಯಕ್, ಸಿದ್ದಪ್ಪ ಉಪಸ್ಥಿತರಿದ್ದರು.