Advertisement

ಬಹುತೆರಿಗೆ ವ್ಯವಸ್ಥೆ ರದ್ಧತಿಗೆ ಟ್ಯಾಕ್ಸಿ ಸಂಘ ಒತ್ತಾಯ

11:48 AM Sep 15, 2017 | Team Udayavani |

ಬೆಂಗಳೂರು: ಪ್ರವಾಸಿ ವಾಹನಗಳಿಗೆ ಸಂಬಂಧಿಸಿದಂತೆ ವಾಹನ ಮಾಲೀಕರ ಮೇಲೆ ಜಿಎಸ್‌ಟಿ ಅಡಿ ಅನಗತ್ಯ ತೆರಿಗೆ ಹೊರೆ ವಿಧಿಸಲಾಗುತ್ತಿದೆ. ಈ ಸಮಸ್ಯೆ ನಿವಾರಿಸದಿದ್ದಲ್ಲಿ ಪ್ರವಾಸಿ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಂಘಟನೆಗಳು ನಿರ್ಧರಿಸಿವೆ. 

Advertisement

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ “ಬೆಂಗಳೂರು ಟೂರಿಸ್ಟ್‌ ಟ್ಯಾಕ್ಸಿ ಓನರ್ಸ್‌ ಅಸೋಸಿಯೇಷನ್‌’ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ, “ಅನಗತ್ಯ ತೆರಿಗೆ ಹೊರೆ ಸಮಸ್ಯೆ ಬಗೆಹರಿಸುವಂತೆ ಜಿಎಸ್‌ಟಿ ಮಂಡಳಿ ಸೇರಿದಂತೆ ಕೇಂದ್ರ ಸರ್ಕಾರಕ್ಕೆ ಇದುವರೆಗೆ ಮೂರು ಬಾರಿ ಪತ್ರ ಬರೆದಿದ್ದೇವೆ. ಆದರೂ ಕ್ರಮ ಕೈಗೊಂಡಿಲ್ಲ. ಇದೀಗ ನಾಲ್ಕನೇ ಪತ್ರ ಬರೆಯಲಾಗಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುತ್ತೇವೆ,’ ಎಂದು ಹೇಳಿದ್ದಾರೆ.

ಜಿಎಸ್‌ಟಿಯಡಿ ಒಂದೇ ಸೇವೆಗೆ ಬಹು ತೆರಿಗೆ ವಿಧಿಸುವಂತಿಲ್ಲ. ಆದರೆ, ಪ್ರವಾಸಿ ವಾಹನಗಳ ಸೇವೆಗೆ ಸಂಬಂಧಿಸಿದಂತೆ ಒಂದೇ ಸೇವೆಗೆ ಒಂದಕ್ಕಿಂತ ಹೆಚ್ಚು ಬಾರಿ ತೆರಿಗೆ ವಿಧಿಸುವ ನಿಯಮ ಪ್ರಸ್ತುತ ಜಿಎಸ್‌ಟಿ ನಿಯಮಾವಳಿಯಲ್ಲಿದೆ. ಆದ್ದರಿಂದ ಈ ಬಹು ತೆರಿಗೆ (ಮಲ್ಟಿಪಲ್‌ ಟ್ಯಾಕ್ಸ್‌) ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಸಂಘಟನೆಗಳು ಆಗ್ರಹಿಸಿವೆ. 

ಏನಿದು ಸಮಸ್ಯೆ?: ಪ್ರಸ್ತುತ ಜಾರಿಯಲ್ಲಿರುವ ಜಿಎಸ್‌ಟಿ ಅಡಿ ಟ್ಯಾಕ್ಸಿ ಉದ್ಯಮಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಸೂಕ್ತವಾಗಿದೆಯಾದರೂ ಪ್ರತಿ ಹಂತದಲ್ಲೂ ತೆರಿಗೆ ಪಾವತಿಸಬೇಕಾಗಿರುವುದರಿಂದ ಒಟ್ಟಾರೆ ಸೇವಾ ತೆರಿಗೆ ಪ್ರಮಾಣ ಶೇ. 10 ಅಥವಾ ಶೇ. 15 ದಾಟುತ್ತದೆ.

ಉದಾಹರಣೆಗೆ ದೊಡ್ಡ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸಿಗಳನ್ನು ಒದಗಿಸುವಂತೆ ಟ್ಯಾಕ್ಸಿ ಸಂಸ್ಥೆಗಳಿಗೆ ಬೇಡಿಕೆ ಇಟ್ಟಾಗ ಅವರು ತಮ್ಮಲ್ಲಿರುವ ವಾಹನಗಳ ಜತೆಗೆ ಬೇರೆ ಏಜನ್ಸಿಗಳಿಂದ ಹೆಚ್ಚುವರಿ ವಾಹನಗಳನ್ನು ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಟ್ಯಾಕ್ಸಿ ಸಂಸ್ಥೆಗಳು ಬೇರೆ ಏಜನ್ಸಿಗಳಿಂದ ಪಡೆದ ವಾಹನಗಳಿಗೆ ಶೇ. 10ರಷ್ಟು ಸೇವಾ ತೆರಿಗೆ (ಟ್ಯಾಕ್ಸಿ ಸಂಸ್ಥೆಗಳದ್ದು ಶೇ. 5 ಮತ್ತು ಏಜನ್ಸಿಗಳದ್ದು ಶೇ. 5) ಪಾವತಿಸಬೇಕಾಗುತ್ತದೆ.

Advertisement

ಇನ್ನು ಕೆಲವು ಸಂದರ್ಭದಲ್ಲಿ ಏಜನ್ಸಿಯವರು ತಮ್ಮಲ್ಲಿ ಟ್ಯಾಕ್ಸಿ ಸಂಸ್ಥೆಗಳು ಕೇಳಿದಷ್ಟು ವಾಹನಗಳು ಲಭ್ಯವಿಲ್ಲದೇ ಇದ್ದಾಗ ನೋಂದಾಯಿತರಲ್ಲದ ಚಾಲಕ ಕಂ ಮಾಲೀಕರಿಂದ ವಾಹನ ಪಡೆದು ಕಳುಹಿಸುತ್ತಾರೆ. ಅದಕ್ಕೂ ಶೇ. 5ರಷ್ಟು ತೆರಿಗೆ ಪಾವತಿಸಬೇಕಾಗಿದ್ದು, ಆಗ ಒಟ್ಟು ಜಿಎಸ್‌ಟಿ ಪ್ರಮಾಣ ಶೇ. 15ರಷ್ಟಾಗುತ್ತದೆ.

ಜಿಎಸ್‌ಟಿ ಕಾಯ್ದೆಯ ಪ್ರಕಾರ ಒಂದು ಸೇವೆಗೆ ಒಂದಕ್ಕಿಂತ ಹೆಚ್ಚು ತೆರಿಗೆ ವಿಧಿಸಲು ಅವಕಾಶವಿಲ್ಲ. ಆದರೆ, ಇಲ್ಲಿ ಒಂದೇ ಸೇವೆಗೆ ಎರಡು ಅಥವಾ ಮೂರು ತೆರಿಗೆ ಪಾವತಿಸಬೇಕಾಗುತ್ತದೆ. ಇದು ವಾಹನ ಮಾಲೀಕರು ಮಾತ್ರವಲ್ಲದೆ, ಅವುಗಳನ್ನು ಬಾಡಿಗೆಗೆ ಪಡೆಯುವವರಿಗೂ ಹೊರೆಯಾಗುತ್ತದೆ.

ಆದ್ದರಿಂದ ಟ್ಯಾಕ್ಸಿ ಸಂಸ್ಥೆಗಳಿಂದ ವಾಹನ ಪಡೆದವರು ಅಂದರೆ ಕೊನೆಯ ಬಳಕೆದಾರರು ಮಾತ್ರ ಶೇ. 5ರಷ್ಟು ತೆರಿಗೆ ಪಾವತಿಸುವಂತೆ ನಿಯಮಾವಳಿ ತಿದ್ದುಪಡಿ ಮಾಡಬೇಕು. ಇಲ್ಲವಾದರೆ ಈ ಹಿಂದೆ ಸೇವಾ ತೆರಿಗೆ ಪದ್ಧತಿ ಜಾರಿಯಲ್ಲಿದ್ದಾಗ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಇದ್ದ ತೆರಿಗೆ ಹಿಂಪಾವತಿಗೆ ಅವಕಾಶ ಕೊಡಬೇಕು ಎಂದು ಬೆಂಗಳೂರು ಟೂರಿಸ್ಟ್‌ ಟ್ಯಾಕ್ಸಿ ಓನರ್ಸ್‌ ಅಸೋಸಿಯೇಷನ್‌ ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದೆ.

ಈಗಾಗಲೇ ಟ್ಯಾಕ್ಸಿ ಉದ್ಯಮವನ್ನು ಆರ್ಥಿಕವಾಗಿ ಸದೃಢವಲ್ಲದ ಅಸಂಘಟಿತ ಉದ್ಯಮ ಎಂದು ಪರಿಗಣಿಸಲಾಗಿದೆ. ಹಾಗಾಗಿ ಬ್ಯಾಂಕ್‌ಗಳಲ್ಲಿ ಸಾಲ ನೀಡುವಾಗ ನಮಗೆ ಶೇ. 1ರಷ್ಟು ಹೆಚ್ಚುವರಿ ತೆರಿಗೆ ಪಡೆಯುತ್ತಾರೆ. ಅಲ್ಲದೆ, ಜಿಎಸ್‌ಟಿ ಬಳಿಕ ಈ ಕ್ಷೇತ್ರಕ್ಕೆ ಸಿಗುತ್ತಿದ್ದ ಸಬ್ಸಿಡಿ ಕೂಡ ರದ್ದಾಗಿದೆ. ಅದ್ದರಿಂದ ಟ್ಯಾಕ್ಸಿ ಉದ್ಯಮಕ್ಕೆ ಇರುವ ಬಹುತೆರಿಗೆ ಪದ್ಧತಿ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮುಷ್ಕರ, ಧರಣಿ ಮತ್ತಿತರೆ ಹೋರಾಟ ನಡೆಸಲಾಗುವುದು. ಜತೆಗೆ ಕಾನೂನಾತ್ಮಕ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next