ಹುಣಸೂರು: ಕೆ.ಆರ್.ನಗರ ಮುಖ್ಯರಸ್ತೆಯ ಬಿಳಿಗೆರೆಯಲ್ಲಿ ಬಿಳಿಗೆರೆ ಅನ್ವೇಷಣಾ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಪ್ರತಿಭಾನ್ವೇಷಣಾ ಜಾತ್ರೆ 2018 ಕಾರ್ಯಕ್ರಮದನ್ವಯ ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕಾಲೇಜು ಆವರಣದಲ್ಲಿ ನಡೆದ ಅನ್ವೇಷಣೆಯ ಸ್ಪರ್ಧಾತ್ಮಕ ಜಾತ್ರೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಉಷಾ ಚನ್ನಪ್ಪ ಗ್ರಾಮೀಣ ಭಾಗದಲ್ಲಿ ಒಂದು ಒಳ್ಳೆಯ ಸಂಸ್ಥೆ ಆರಂಭಗೊಂಡಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳು ತಮ್ಮಲ್ಲಡಗಿರುವ ಸುಪ್ತ ಪ್ರತಿಭೆಯನ್ನು ಹೊರಸೂಸಲು ಉತ್ತಮ ವೇದಿಕೆ ಕಲ್ಪಿಸಿದ್ದಾರೆಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರಾಟ ಇಲಾಖೆಯ ನಿವೃತ್ತ ಉಪನಿರ್ದೇಶಕ ಹಾಗೂ ಸಂಸ್ಥೆಯ ಮುಖ್ಯಸ್ಥ ಎಚ್.ಕೆ.ಚಂದ್ರಮೋಹನ್ ಮಾತನಾಡಿ, ನಮ್ಮ ಸಂಸ್ಥೆಯು ಪ್ರಥಮವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳ ಪ್ರತಿಭೆ ಹೊರಹೊಮ್ಮಿದೆ. ಮುಂದೆಯೂ ಇಂತಹ ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವೆಂದರು.
ವಿವಿಧ ಸ್ಪರ್ಧೆಗಳು: ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಂಗೋಲಿ, ಮೆಹಂದಿ, ಕರಾಟೆ, ಯೋಗ, ಭರತನಾಟ್ಯ, ಫ್ಯಾನ್ಸಿಡ್ರೆಸ್ ಸ್ಪರ್ಧೆಗಳು ಸೇರಿದಂತೆ ನಮ್ಮ ಊರು ಹೇಗಿದ್ದರೆ ಚೆನ್ನ ಮತ್ತು ಪರಿಸರ ನಾಶ ತಡೆಯುವ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆಗಳಲ್ಲಿ ಹುಣಸೂರು ಮತ್ತು ಕೆ.ಆರ್.ನಗರ ತಾಲೂಕಿನ ವಿವಿಧ ಶಾಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಹಾಗೂ ಶಿಕ್ಷಕರಿಗೂ ವಿವಿಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಸಮಾರಂಭದಲ್ಲಿ ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಕಾರ್ಯದರ್ಶಿ ಹಿರಣ್ಣಯ್ಯ, ಸಂಸ್ಥೆಯ ಮುಖ್ಯಸ್ಥ ನಂಜುಂಡಶೆಟ್ಟಿ, ಪ್ರಾಂಶುಪಾಲ ಗಿರೀಶ್, ಕಾರ್ಯದರ್ಶಿ ಪ್ರಶಾಂತ್, ಉಪನ್ಯಾಸಕರಾದ ತೀರ್ಥೇಗೌಡ, ಆಶಾ, ಕಾರ್ಯಕ್ರಮ ಸಂಚಾಲಕ ತ್ಯಾಗರಾಜಯ್ಯ, ಉಪನ್ಯಾಸಕರಾದ ಸಿದ್ದಪ್ಪಾಜಿ, ನವೀನ್, ಅನಂತನಾರಾಯಣ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.