Advertisement

ಈಜು ಪ್ರತಿಭೆಗಳಿಗೆ ಸೌಲಭ್ಯ ಕೊರತೆ

01:05 PM Feb 10, 2017 | |

ಹುಬ್ಬಳ್ಳಿ: ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಬಹುದಾದ ಈಜುಪಟುಗಳು ನಮ್ಮಲ್ಲಿದ್ದರೂ, ಸೂಕ್ತ ಸೌಲಭ್ಯ-ಪ್ರೋತ್ಸಾಹಗಳಿಲ್ಲದೆ ಪ್ರತಿಭೆಗಳು ಕಮರುವಂತಾಗಿದೆ ಎಂಬುದು ಆಸ್ಟ್ರೇಲಿಯಾ ಕ್ರೀಡಾ ಆಯೋಗದಿಂದ “ಡಿಪ್ಲೋಮಾ ಇನ್‌ ಡೈವಿಂಗ್‌’ನಲ್ಲಿ ಪ್ರಮಾಣಪತ್ರ ಪಡೆದ ದೇಶದ ಏಕೈಕ ಈಜು ಡೈವಿಂಗ್‌ ತರಬೇತುದಾರ ಮೈಸೂರಿನ ಗುರುಪ್ರಸಾದ್‌ ಅವರ ಅಸಮಾಧಾನ. 

Advertisement

ದೇಶದಲ್ಲಿರುವ ಡೈವಿಂಗ್‌ ಸೌಲಭ್ಯ ಇರುವ ಈಜುಕೊಳಗಳಲ್ಲಿ ಹುಬ್ಬಳ್ಳಿಯ ಈಜುಕೊಳವೂ ಒಂದಾಗಿದೆ. ಇಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ ಕ್ರೀಡಾಪಟುಗಳಿಗೆ ಸರಿಯಾದ ತರಬೇತಿ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಆಡಳಿತ ಹಾಗೂ ಸರಕಾರದ ನಿರ್ಲಕ್ಷ್ಯದಿಂದಾಗಿ ಸಮರ್ಪಕ ತರಬೇತಿ-ಸಾಧನೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

ಕೊಲ್ಕತ್ತಾ ಹೊರತುಪಡಿಸಿದರೆ ಈಜುಗೊಳ ಮತ್ತು ಡೈವಿಂಗ್‌ (“ಎಲ್‌’ ಆಕಾರ) ವಿಭಾಗ ಹೊಂದಿರುವ ಈಜುಕೊಳ ಹುಬ್ಬಳ್ಳಿಯಲ್ಲಿ ಮಾತ್ರವಿದೆ. ಪಾಲಿಕೆ ಆಯುಕ್ತರಿಂದ ವಿಶೇಷ ಅನುಮತಿ ಪಡೆದು ನಾಲ್ಕು ತಿಂಗಳಿಂದ ನಿತ್ಯ ಸಂಜೆ 5ರಿಂದ 7ರ ವರೆಗೆ ಎಂಟು ಈಜುಪಟುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

2010ರಲ್ಲಿ ಸ್ಥಗಿತ: 2010ರ ಬಳಿಕ ಕಾರಣಾಂತರಗಳಿಂದ ಈಜುಕೊಳ ಸ್ಥಗಿತಗೊಂಡಿದ್ದರಿಂದ ಅನಿವಾರ್ಯವಾಗಿ ಡೈವಿಂಗ್‌ ತರಬೇತಿ ನಿಲ್ಲಿಸಲಾಯಿತು. ಸತತವಾಗಿ ತರಬೇತಿ ನೀಡಿದ್ದರೆ ನಮ್ಮ ವಿದ್ಯಾರ್ಥಿಗಳು ಡೈವಿಂಗ್‌ನಲ್ಲಿ ಇಂದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗುತ್ತಿತ್ತು. 4 ತಿಂಗಳಿಂದ ತರಬೇತಿ ಮತ್ತೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಕೆಲ ಕ್ರೀಡಾಪಟುಗಳು ಉತ್ತಮ ಪ್ರದರ್ಶನಕ್ಕೆ ಸಿದ್ಧರಾಗಲಿದ್ದಾರೆ ಎಂಬುದು ಅವರ ಆಶಯ. 

ಕ್ರೀಡಾಪಟುಗಳಿಗೆ ಉದ್ಯೋಗ: ಕ್ರೀಡೆಯಲ್ಲಿ ಸಾಧನೆ ಮಾಡಿದ ಹಲವರಿಗೆ ಸರಕಾರದಿಂದ ಉದ್ಯೋಗ ಪಡೆಯುವುದು ಸುಲಭ, ಆದರೆ ಶ್ರಮಕ್ಕೆ ತಕ್ಕ ಉದ್ಯೋಗ ಸಿಗದೇ ಇದ್ದರೆ ಅಂತಹ ಉದ್ಯೋಗ ಇದ್ದರೆಷ್ಟು ಬಿಟ್ಟರೆಷ್ಟು? ಆಸ್ಟ್ರೇಲಿಯಾ ಕ್ರೀಡಾ ಆಯೋಗದಿಂದ “ಡಿಪ್ಲೊಮಾ ಇನ್‌ ಡೈವಿಂಗ್‌’ನಲ್ಲಿ ಪ್ರಮಾಣಪತ್ರ ಪಡೆದ ದೇಶದ ಏಕೈಕ ತರಬೇತುದಾರನಾಗಿದ್ದು, ರಾಜ್ಯೋತ್ಸವ, ಏಕಲವ್ಯ ಪ್ರಶಸ್ತಿ ಪಡೆದಿರುವೆ.

Advertisement

ಎಂಬಿಎ ಪದವಿ ಪಡೆದಿರುವ ನನಗೆ ಪೊಲೀಸ್‌ ಇಲಾಖೆ ದಫೇದಾರ್‌ ಹುದ್ದೆ ನೀಡಿತು. ಬೇಸರವಾಗಿ ನಿರಾಕರಿಸಿದೆ. ಅದರ ಬದಲಾಗಿ ವಿದ್ಯಾರ್ಥಿಗಳಿಗೆ ಈಜು ತರಬೇತಿ ನೀಡುವ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಒಂದಿಷ್ಟು ಕ್ರೀಡಾ ಸಾಧಕರು ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯ ಸಾಧನೆ ತೋರಿದರೆ ಶ್ರಮ ಸಾರ್ಥಕ ಎಂಬುದು ಗುರುಪ್ರಸಾದ್‌ ಅವರ ಅನಿಸಿಕೆ.

* ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next