Advertisement

ಮಾಜಿ ಶಾಸಕರ ಬೆಂಬಲ ಸೀಕ್ರೆಟ್‌ ಆಗಿ ಉಳಿದಿಲ್ಲ

11:26 PM May 14, 2019 | Team Udayavani |

ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರ ಮಂಡ್ಯ. ಈಗಲೂ ಅಷ್ಟೇ ಕುತೂಹಲ ಕೆರಳಿಸಿರುವ ಕ್ಷೇತ್ರವದು. ಅದಕ್ಕೆ ಕಾರಣ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್‌ ಮತ್ತು ಮುಖ್ಯಮಂತ್ರಿ ಪುತ್ರ ನಿಖಿಲ್‌. ಹಾಗಾಗಿ ಈ ಕ್ಷೇತ್ರ ಜಿದ್ದಾಜಿದ್ದಿಯಾಗಿಯೇ ಬಿಂಬಿತವಾಗಿದೆ. ಚುನಾವಣೆ ಸಂದರ್ಭದಲ್ಲಿ ಕೇಳಿಬಂದ ಟೀಕೆ, ಟಿಪ್ಪಣಿಗಳಿಗೆ ಲೆಕ್ಕವಿಲ್ಲ.

Advertisement

ಪರ, ವಿರೋಧ ಮಾತುಗಳಿಗೂ ಬರವಿರಲಿಲ್ಲ. ಅಷ್ಟಾದರೂ ಮತದಾರ ಯಾರ ಪರ ನಿಂತಿದ್ದಾನೆ ಎಂಬುದು ಈಗಲೂ ನಿಗೂಢ. ಚುನಾವಣೆ ಮುಗಿದಿದೆ. ಫ‌ಲಿತಾಂಶ ಬಾಕಿ ಇದೆ. ಒಟ್ಟಾರೆ ರಾಜಕೀಯ ವಿದ್ಯಮಾನಗಳ ಬಗ್ಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್‌ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಫ‌ಲಿತಾಂಶಕ್ಕೆ ಕೌಂಟ್‌ ಡೌನ್‌ ಶುರುವಾಗಿದೆಯಲ್ಲಾ?
ನನಗೆ ಯಾವ ಗೊಂದಲವೂ ಇಲ್ಲ, ರಾಜಕೀಯದ ಒತ್ತಡದಲ್ಲೂ ಇಲ್ಲ. ತುಂಬಾನೇ ಕೂಲ್‌ ಆಗಿದ್ದೇನೆ. ಟೆನ್ಶನ್‌ ಅಂತೂ ಇಲ್ಲವೇ ಇಲ್ಲ. ಅಂಬರೀಶ್‌ ಅವರ ಎಲೆಕ್ಷನ್‌ ರಿಸಲ್ಟ್ ಫೇಸ್‌ ಮಾಡಿದ್ದೇನೆ. ಆ ಫ‌ಲಿತಾಂಶ ಹೇಗಿರುತ್ತಿತ್ತು ಎಂಬುದನ್ನೂ ನೋಡಿದ್ದೇನೆ. ಅವರು ರಿಸಲ್ಟ್ ಬರುವ ಸಂದರ್ಭದಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೂಲ್‌ ಆಗಿ ಮನೆಯಲ್ಲಿ ಬಿಂದಾಸ್‌ ಆಗಿರುತ್ತಿದ್ದರು. ಆದರೆ, ನಮಗೇ ಸ್ವಲ್ಪ ಟೆನ್ಶನ್‌ ಆಗಿರುತ್ತಿತ್ತು. ಆದರೆ, ಈಗ ನಾನೂ ಅಷ್ಟೇ ಐ ಡೋಂಟ್‌ ಫೀಲ್‌.

* ಸಮೀಕ್ಷೆಗಳ ವರದಿ ಬಗ್ಗೆ ನಿಮ್ಮ ಅನಿಸಿಕೆಯೇನು?
ವೋಟಿಂಗ್‌ ದಿನವೇ ನನಗೆ ಒಳ್ಳೆಯ ಫೀಡ್‌ಬ್ಯಾಕ್‌ ಬಂದಿತ್ತು. ಜನರ ರಿಯಾಕ್ಷನ್‌, ಅವರ ಎಕ್ಸ್‌ಪ್ರೆಷನ್‌ ಮತ್ತು ಅವರು ಹೇಳುವ ಮಾತುಗಳಿಂದಲೇ ಪಾಸಿಟಿವ್‌ ಆಗಿದೆ ಎನಿಸಿದೆ. ನಾವು ಯಾವುದೇ ಸರ್ವೇ ಮಾಡಿಸಿಲ್ಲ. ಈಗ ಬರುತ್ತಿರುವ ರಿಪೋರ್ಟ್‌ಗಳನ್ನೂ ನಾನು ಅಷ್ಟೊಂದು ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ಒಂದೊಂದು ದಿನ ಒಂದೊಂದು ಡಿಫ‌ರೆಂಟ್‌ ರಿಪೋರ್ಟ್‌ಗಳು ಮೀಡಿಯಾದಲ್ಲಿ ಬರುತ್ತಿವೆ. ಸೋ, ನಾನು ಯಾವುದನ್ನೂ ಅಷ್ಟೊಂದು ಸೀರಿಯಸ್‌ ಆಗಿ ತೆಗೆದುಕೊಂಡಿಲ್ಲ.

* ಮಕ್ಕಳ ಬಾಯಲ್ಲೂ ಸುಮಲತಾ ಹೆಸರೇ ಕೇಳಿಬರುತ್ತಿದೆ..?
ಅದು ಬ್ಲೆಸಿಂಗ್‌. ಎಲ್ಲವೂ ಪಾಸಿಟಿವ್‌ ಅನಿಸುತ್ತಿದೆ. ಚುನಾವಣೆ ಬಳಿಕವೂ ನಾನು ಮಂಡ್ಯ ಮತ್ತು ಸುತ್ತಮುತ್ತಲ ಊರುಗಳಿಗೆ ಅಭಿಷೇಕ್‌ ಜೊತೆ ಹೋಗಿ ಬರುತ್ತಿದ್ದೇನೆ. ನಮಗೆ ಯಾರೇ ಸಿಕ್ಕರೂ ತುಂಬಾ ಪಾಸಿಟಿವ್‌ ಆಗಿ ಮಾತಾಡುತ್ತರೆ. ಎಲ್ಲರೂ ಖುಷಿಯಾಗಿದ್ದಾರೆ. ಒಳ್ಳೆಯದಾಗುತ್ತೆ, ನಾವೂ ಕಾಯುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ.

Advertisement

* ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಕಾಂಗ್ರೆಸ್‌ನವರು ತಟಸ್ಥರಿದ್ದರಾ, ನಿಮಗೆ ಬೆಂಬಲಿಸಿದರಾ?
ಆ ಬಗ್ಗೆ ನಾನೇನು ಹೇಳಲಿ? ಅದು ಅವರ ನಿರ್ಧಾರ. ಅಷ್ಟಕ್ಕೂ ಅದು ಸೀಕ್ರೆಟ್‌ ಆಗಿ ಉಳಿದಿಲ್ಲ. ಎದುರಾಳಿ ಪಕ್ಷಗಳ ಕಾರ್ಯಕರ್ತರೇ ಓಪನ್‌ ಆಗಿ ಸಹಕಾರ ನೀಡಿದ್ದು ಗೊತ್ತೇ ಇದೆ. ಅವರ ನಿರ್ಧಾರಕ್ಕೆ ಆ ಪಕ್ಷಗಳು ಏನು ಆ್ಯಕ್ಷನ್‌ ತೆಗೆದುಕೊಳ್ಳುತ್ತವೋ ಅದು ಅವರಿಗೆ ಬಿಟ್ಟಿದ್ದು. ಅದಕ್ಕೂ ನನಗೂ ಸಂಬಂಧವಿಲ್ಲ. ಇನ್ನು, ನಾನು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿಲ್ಲ. ಯಾರಧ್ದೋ ಬರ್ತ್‌ಡೆ ಇತ್ತು, ನಾನು ಹೋಗಿದ್ದೆ. ಅದಕ್ಕೆ ಬೇರೆ ಬಣ್ಣ ಕೊಡೋದು ಸರಿಯಲ್ಲ. ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಖಾಸಗಿ ಬದುಕಿನಲ್ಲಿ ಏನೇನು ಮಾಡ್ತೀವಿ ಅಂತ ಜಸ್ಟಿಫೈ ಕೊಡಬೇಕೆಂದೇನಿಲ್ಲ.

* ಗೆಲುವಿನ ಬಗ್ಗೆ ವಿಶ್ವಾಸವಿದೆಯಾ?
ನೋಡಿ ಯಾರೇ ಚುನಾವಣೆಗೆ ನಿಂತರೂ ಗೆಲ್ಲಲೇಬೇಕು ಅಂತಾನೇ ಭಾವಿಸುತ್ತಾರೆ. ನನಗೆ ಕಾನ್ಫಿಡೆಂಟ್‌ ಇದೆ. ಆದರೆ ಓವರ್‌ ಕಾನ್ಫಿಡೆಂಟ್‌ ಇಲ್ಲ. ನಾನು ಇಷ್ಟು ಮತಗಳಿಂದ ಗೆಲ್ಲುತ್ತೇನೆ ಎಂಬ ಮಾತುಗಳನ್ನು ಹೇಳಲ್ಲ. ನನಗಂತೂ ಪಾಸಿಟಿವ್‌ ವೈಬ್ಸ್ ಎನಿಸುತ್ತಿದೆ. ಪ್ರಚಾರದ ವೇಳೆ ವೋಟಿಂಗ್‌ ಬೂತ್‌ ಕಡೆ ಹೋದಾಗಲೇ, ಜನರು ಗೆಲ್ಲುವ ಭರವಸೆ ಕೊಟ್ಟಿದ್ದಾರೆ. ಈಗಲೂ ಮನೆಗೆ ಬರುವವರೆಲ್ಲರೂ ಪಾಸಿಟಿವ್‌ ಆಗಿ ಮಾತಾಡುತ್ತಾರೆ. ಹಾಗಾಗಿ, ಗೆಲ್ಲುವ ಕಾನ್ಫಿಡೆಂಟ್‌ ಇದೆ.

* ನಿಮ್ಮದು ವ್ಯಾಲ್ಯು ಬೇಸ್ಡ್ ಪಾಲಿಟಿಕ್ಸಾ ಅಥವಾ ಇಷ್ಯು ಬೇಸ್ಡ್ ಪಾಲಿಟಿಕ್ಸಾ?
ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಾಗಾಗಿ ಮಂಡ್ಯ ಜನರ ನಿರ್ಧಾರದಂತೆಯೇ ಕೆಲಸ ಮಾಡುತ್ತೇನೆ. ಯಾವುದೇ ಕೆಲಸ ಮಾಡಬೇಕಾದರೂ ಮಂಡ್ಯ ಕ್ಷೇತ್ರದ ಜನರನ್ನು ಕೇಳಿಯೇ ಮಾಡ್ತೀನಿ. ನನ್ನ ಕ್ಷೇತ್ರದ ಜನರಿಗೆ ಏನೆಲ್ಲಾ ಬೇಕೋ ಅದನ್ನು ಕೊಡಿಸುವ ಸಲುವಾಗಿ ಕೆಲಸ ಮಾಡಲು ಇಷ್ಟಪಡ್ತೀನಿ. ಹಾಗಾಗಿ ನನ್ನದು ಇಷ್ಯು ಬೇಸ್ಡ್ ಪಾಲಿಟಿಕ್ಸ್‌.

* ಚುನಾವಣೆ ವೇಳೆ “ಜೋಡೆತ್ತು’, “ನಿಖಿಲ್‌ ಎಲ್ಲಿದ್ದೀಯಪ್ಪಾ’ ಮಾತುಗಳೀಗ ಸಿನಿಮಾ ಆಗುತ್ತಿವೆ.
ಹೌದಾ, ಅವರಿಗೆ ಒಳ್ಳೆಯದಾಗಲಿ.

* ಚಿತ್ರರಂಗದ ಸಹಕಾರ ಹೇಗಿತ್ತು?
ಚಿತ್ರರಂಗದ ಬಹಳಷ್ಟು ಮಂದಿಯ ಆಶೀರ್ವಾದ ನನ್ನ ಮೇಲಿದೆ. ನನಗೆ ಗೊತ್ತಿರುವ ಬಹುತೇಕರು ಬಹಿರಂಗವಾಗಿ ಹೇಳದಿದ್ದರೂ, ಬೆನ್ನ ಹಿಂದೆ ನಿಂತು ಬೆಂಬಲಿಸಿದ್ದಾರೆ.

* ಅಂಬರೀಶ್‌ ಇಲ್ಲದ ಮೊದಲ ಬರ್ತ್‌ಡೇ ಹೇಗಿರುತ್ತೆ?
ಅಭಿಮಾನಿಗಳೊಂದಿಗೆ ಪ್ಲಾನ್‌ ಮಾಡಬೇಕು. ಇನ್ನೂ ಯೋಚಿಸಿಲ್ಲ. ಮೇ23 ರ ಫ‌ಲಿತಾಂಶದ ಬಳಿಕ ತೀರ್ಮಾನ ಮಾಡುತ್ತೇವೆ. ಇನ್ನೂ ಕ್ಲಿಯರ್‌ ಪಿಕ್ಚರ್‌ ಸಿಗಬೇಕು. ಆ ಬಳಿಕ ಎಲ್ಲವೂ ನಿರ್ಧಾರವಾಗುತ್ತೆ. ಮೇ 29 ಅಂಬರೀಶ್‌ ಹುಟ್ಟುಹಬ್ಬ, ಮೇ 31 ಅಭಿಷೇಕ್‌ ಅಭಿನಯದ ‘ಅಮರ್‌’ ಚಿತ್ರ ರಿಲೀಸ್‌ ಆಗಲಿದೆ.

* ನಟನೆ ಮುಂದುವರಿಸುತ್ತೀರಾ, ಮಗನ ಜತೆ ನಟಿಸುತ್ತೀರಾ?
ಸದ್ಯಕ್ಕೆ ಆ ಬಗ್ಗೆ ಯೋಚಿಸಿಲ್ಲ. “ಅಮರ್‌’ ಚಿತ್ರದಲ್ಲೇ ನಟಿಸುವಂತೆ ಹೇಳಿದ್ದರು. ಆಗ ಅಂಬರೀಶ್‌ ಜತೆ ಚರ್ಚೆ ಮಾಡಿ ಬೇಡ ಅಂತ ಬಿಟ್ಟಿದ್ದೆ. ಇನ್ನು, “ಅಮರ್‌’ ಸಿನಿಮಾ ನಾನು ನೋಡಿಲ್ಲ. ಅಂಬರೀಶ್‌ ಅವರು ಅನ್‌ಫಿನಿಶ್‌ ಸಿನಿಮಾ ನೋಡಿದ್ದರು. ಅಭಿಷೇಕ್‌ನನ್ನು ಸ್ಕ್ರೀನ್‌ ಮೇಲೆ ನೋಡಿದ ಅನುಭವ ಹಂಚಿಕೊಂಡಿದ್ದರು.

* ಫ‌ಲಿತಾಂಶ ಏನಾದರೂ ಸ್ವೀಕರಿಸುತ್ತೀರಾ?
ಖಂಡಿತವಾಗಿ. ಫ‌ಲಿತಾಂಶ ಬೇಸರ ತರಿಸಲ್ಲ ಎಂಬ ನಂಬಿಕೆ ಇದೆ. ಆದರೆ, ವಿನಾಕಾರಣ ಗೊತ್ತಿಲ್ಲದ ಕೆಲ ವಿಚಾರಗಳ ಬಗ್ಗೆ ನಾನು ಮಾತನಾಡಲ್ಲ. ಫ‌ಲಿತಾಂಶ ಹೇಗೆ ಬಂದರೂ, ಮಂಡ್ಯ ಕ್ಷೇತ್ರ ಬಿಡಲ್ಲ. ಅಲ್ಲಿ ನಮ್ಮ ಜಮೀನು ಇದೆ. ಅಲ್ಲೇ ಮನೆ ಕಟ್ಟಿಸುತ್ತೇನೆ. ಚುನಾವಣೆ ನಂತರ ಯಶ್‌, ದರ್ಶನ್‌ ಜೊತೆ ಭೇಟಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ. ಆದರೆ, ಆಗಾಗ ಫೋನ್‌ನಲ್ಲಿ ಮಾತಾಡುತ್ತಿದ್ದೇವೆ. ಅವರಿಗೂ ಪಾಸಿಟಿವ್‌ ಫೀಡ್‌ಬ್ಯಾಕ್‌ ಬಂದಿದೆ.

* ವಿಜಯ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next