Advertisement

ಸೂರ್ಯ ನಮ್ಮ ಕೈಯಲ್ಲಿದ್ದಾನೆ, ವಿದ್ಯುತ್‌ ಸಮೃದ್ಧ!

05:04 PM Apr 16, 2018 | |

ಸೋಲಾರ್‌ ಪ್ಯಾನೆಲ್‌ಗ‌ಳ ದಕ್ಷತೆ ಇವತ್ತಿಗೂ ಸಮರ್ಪಕವಾಗಿಲ್ಲ. ಸಿದ್ಧಾಂತಗಳನ್ನು ಪ್ರತಿಪಾದಿಸುವುದಾದರೆ, ಶೇ. 34ರಷ್ಟು ಎಫಿಶಿಯನ್ಸಿಯನ್ನು ಸಾಧಿಸಲಾಗಿದೆ ಎಂದು ಹೇಳಿಕೊಳ್ಳಬಹುದು. ವಾಸ್ತವವಾಗಿ, ಶೇ. 22ರಷ್ಟು ದಕ್ಷತೆಯನ್ನು ಮಾತ್ರ ಪಡೆಯಲಾಗುತ್ತಿದೆ. 

Advertisement

ವಿದ್ಯುತ್‌ ಕೊರತೆಯ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳ ಗೋಳು ನಿರಂತರ. ಲೋಡ್‌ಶೆಡ್ಡಿಂಗ್‌ ಖಚಿತ, ರೈತ ವರ್ಗ ರಾತ್ರಿ ನಿದ್ದೆಗೆಟ್ಟು ಪಂಪ್‌ ಚಾಲೂ ಮಾಡಬೇಕಾದ ಸ್ಥಿತಿ. ಒಂದೊಮ್ಮೆ ರಾಜ್ಯದ ವಿದ್ಯುತ್‌ ಜಾಲಗಳಲ್ಲಿ ನಿರಂತರ ವಿದ್ಯುತ್‌ ಸಿಗುತ್ತದೆ ಎಂತಾದರೆ ವಿದ್ಯುತ್‌ ಸರಬರಾಜು ಕಂಪನಿಗಳ ಹಲವು ಸಮಸ್ಯೆ ಶಾಕ್‌ ಹೊಡೆದು ಸಾಯುತ್ತವೆ! ಅದನ್ನು ಸಾಧಿಸಲು ಸೂರ್ಯ ದೇವನಿಗೆ ಶರಣಾಗಲೇಬೇಕು.

ಗುಜರಾತ್‌ ಮಾದರಿ!: ವಿದ್ಯುತ್‌ ಉತ್ಪಾದನೆಯಲ್ಲಿ ಹಿಂದಿನಿಂದಲೂ ಸ್ವಾವಲಂಬಿಯಾಗಿರುವ ಗುಜರಾತ್‌ನ ದೂರದೃಷ್ಟಿ ಗಮನಾರ್ಹವಾದುದು. ಸೋಲಾರ್‌ ವಿದ್ಯುತ್‌ ಉತ್ಪಾದನೆಯಲ್ಲಿ ಮೇಲುಪಂಕ್ತಿಯನ್ನು ಹಾಕಿಕೊಟ್ಟಿದ್ದು ಇದೇ ರಾಜ್ಯ. 2010ರಲ್ಲಿಯೇ 590 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಗುರಿಯ ಸೋಲಾರ್‌ ಪಾರ್ಕ್‌ನ್ನು ಅಲ್ಲಿನ ಪಠಾನ್‌ ಜಿಲ್ಲೆಯ ಚರಂಕದಲ್ಲಿ ಬಳಕೆಗೆ ಯೋಗ್ಯವಲ್ಲದ 5,384 ಎಕರೆ ಜಾಗದಲ್ಲಿ ಸ್ಥಾಪಿಸಲು ಆ ರಾಜ್ಯ ನಿರ್ಧರಿಸಿತ್ತು.

ಅದರ ಜೊತೆಗೆ 100 ಮೆಗಾವ್ಯಾಟ್‌ನ ಪವನ ವಿದ್ಯುತ್‌ಅನ್ನೂ ಇದೇ ಪಾರ್ಕ್‌ನಲ್ಲಿ ಉತ್ಪಾದಿಸಿ ಅದನ್ನೊಂದು ಹೈಬ್ರಿಡ್‌ ಪಾರ್ಕ್‌ ಮಾಡಿತು. ಗಮನಿಸಬೇಕಾದುದೆಂದರೆ, 4,500 ಕೋಟಿ ರೂ. ವೆಚ್ಚದ ಯೋಜನೆಗೆ ಹಸಿರು ನಿಶಾನೆ ಸಿಕ್ಕ ಒಂದು ವರ್ಷದೊಳಗೆ ವಿದ್ಯುತ್‌  ಉತ್ಪತ್ತಿಯಾಗಿ ಸರಬರಾಜು ಜಾಲದಲ್ಲಿ ಸೇರ್ಪಡೆಯಾಗಿತ್ತು. 24 ಕಂಪನಿಗಳು ಚರಂಕದ ಸೋಲಾರ್‌ ಪಾರ್ಕ್‌ನಲ್ಲಿ ಇಲ್ಲಿ ಬಂಡವಾಳ ಹೂಡಿವೆ.

3,42,400 ಟನ್‌ ಕಾರ್ಬನ್‌ ಎಮಿಷನ್‌ ರಿಡಕ್ಷನ್ಸ್‌(ಸಿಇಆರ್‌ಎಸ್‌) ಪರಿಸರ ಉಳಿಸಿದರೆ, ಈ ಸೋಲಾರ್‌ ಪಾರ್ಕ್‌ಅನ್ನು ಪ್ರವಾಸೋದ್ಯಮ ಸ್ಥಳವಾಗಿಯೂ ಆ ರಾಜ್ಯ ಅಭಿವೃದ್ಧಿ ಪಡಿಸಿದೆ. ಕರ್ನಾಟಕದಲ್ಲಿ ಇಂಥದೊಂದು ಯೋಜನೆಗೆ 2015ರಲ್ಲಿ ಬೀಜ ಬಿತ್ತಿ 2018ರ ಮೊನ್ನೆ ಮೊನ್ನೆ ಪಾವಗಡದಲ್ಲಿ ಬೆಳೆ ತೆಗೆಯಲಾಗಿದೆ. ಯೂನಿಟ್‌ ಬೆಲೆಯನ್ನು ಹೆಚ್ಚು ಇರಿಸಿ ರಾಜಕಾರಣಿಗಳು ಗುತ್ತಿಗೆ ಪಡೆಯುವಂತೆ ಮಾಡಿ “ಅಭಿವೃದ್ಧಿ’ ಕಾಣಲಾಗಿದೆ.

Advertisement

ಸೋಲಾರ್‌ ವಿದ್ಯುತ್‌ ಭಾಗ್ಯ!: 2022ರ ವೇಳೆಗೆ ಭಾರತ 100 ಗಿಗಾವ್ಯಾಟ್‌ನಷ್ಟು ಸೋಲಾರ್‌ ವಿದ್ಯುತ್‌ ಉತ್ಪಾದಿಸಬೇಕು ಎಂಬುದು ಗುರಿ. ಇದನ್ನು ಸಾಧಿಸಲು ಸೋಲಾರ್‌ ಪ್ಯಾನೆಲ್‌ಗ‌ಳನ್ನೇ ಹಾಕಬೇಕೆಂದರೆ ಇಡೀ ದೆಹಲಿ ರಾಜ್ಯ ವ್ಯಾಪ್ತಿಯ ಒಂದೂವರೆ ಪಟ್ಟಿನಷ್ಟು ಭೂ ಪ್ರದೇಶ ಬೇಕಾಗುತ್ತದೆ. ಈ ಕಾಲದಲ್ಲಂತೂ ಉದ್ಯಮಗಳನ್ನು ಸ್ಥಾಪಿಸಲು ಭೂಮಿ ಹಸ್ತಾಂತರ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿಯೂ ಗುಜರಾತ್‌ ಮಾದರಿ.

ಸರ್ದಾರ್‌ ಸರೋವರ್‌ ಯೋಜನೆಯ ಸನಂದ ಕಾಲುವೆಯ ಮೇಲೆ ಒಂದು ಮೆಗಾವ್ಯಾಟ್‌ನ ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಮೂಲಕ ಇಂತಹ ಪ್ರಪ್ರಥಮ ಪ್ರಯತ್ನ ಮಾಡಿದ ರಾಜ್ಯವಾಗಿ ಗುಜರಾತ್‌ ಗಮನ ಸೆಳೆಯಿತು. ಒಂದು ವರ್ಷಕ್ಕೆ 1.6 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪತ್ತಿಯಾಯಿತು. ಇದರ ಜೊತೆಗೆ ಕಾಲುವೆಯಿಂದ 90 ಲಕ್ಷ ಲೀಟರ್‌ ನೀರು ಆವಿಯಾಗುವುದನ್ನು ತಡೆಯಲಾಯಿತು. ಕರ್ನಾಟಕದಲ್ಲೂ ತುಂಗಾ, ಭದ್ರಾ ಸೇರಿದಂತೆ ವಿವಿಧ ಕಾಲುವೆಗಳಿವೆ.

ಎಲ್ಲಾದರೂ ಸೋಲಾರ್‌ ಕಾಲುವೆ “ಭಾಗ್ಯ’ ಕಂಡಿದ್ದೇವೆಯೇ? ಗುಜರಾತ್‌ನ ರಾಜ್ಯ ವಿದ್ಯುತ್‌ ನಿಗಮ ಜಿಎಸ್‌ಇಸಿಎಲ್‌ ಸುಮ್ಮನೆ ಕುಳಿತಿಲ್ಲ. ರಾಜ್ಯದಲ್ಲಿರುವ 80 ಸಾವಿರ ಕಿ.ಮೀಗಳಷ್ಟು ಉದ್ದದ ಕಾಲುವೆಗಳ ಮೇಲೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ವಿದ್ಯುತ್‌ ಉತ್ಪಾದನೆಗೆ ಮುಂದಾಗಲು ಚಿಂತಿಸಲಾಗಿದೆ. ಅವರ ಅಂದಾಜಿನ ಪ್ರಕಾರ, ಶೇ. 30ರಷ್ಟು ಉತ್ಪಾದನೆಯನ್ನು ಮಾಡಿದರೂ 18 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ತಯಾರಾಗುತ್ತದೆ. ಅಷ್ಟೇಕೆ, ಸೋಲಾರ್‌ ಪಾರ್ಕ್‌ ಮಾಡಿದ್ದರೆ ವ್ಯಯವಾಗುತ್ತಿದ್ದ 90 ಸಾವಿರ ಎಕರೆ ಜಾಗ ವಾಗುತ್ತದೆ!

ದಕ್ಷತೆಯ ಕೊರತೆ!: ಸೋಲಾರ್‌ ಪ್ಯಾನೆಲ್‌ಗ‌ಳ ದಕ್ಷತೆ ಇವತ್ತಿಗೂ ಸಮರ್ಪಕವಾಗಿಲ್ಲ. ಸಿದ್ಧಾಂತಗಳನ್ನು ಪ್ರತಿಪಾದಿಸುವುದಾದರೆ, ಶೇ. 34ರಷ್ಟು ಎಫಿಶಿಯನ್ಸಿಯನ್ನು ಸಾಧಿಸಲಾಗಿದೆ ಎಂದು ಹೇಳಿಕೊಳ್ಳಬಹುದು. ವಾಸ್ತವವಾಗಿ, ಶೇ. 22ರಷ್ಟು ದಕ್ಷತೆಯನ್ನು ಮಾತ್ರ ಪಡೆಯಲಾಗುತ್ತಿದೆ. ಇದನ್ನು ವಿಸ್ತರಿಸಿಕೊಂಡರೆ ಇನ್ನಷ್ಟು ಕಡಿಮೆ ವೆಚ್ಚದಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆ ಸಾಧ್ಯ. ಆಗ ಪರಿಸರಕ್ಕೆ ಅಪಾಯಕಾರಿಯಾದ ಕಲ್ಲಿದ್ದಲು, ಅಣು ಆಧಾರಿತ ವಿದ್ಯುತ್‌ ಉತ್ಪಾದನೆಗೆ ಕಡಿವಾಣ ಹಾಕಬಹುದು.

ಜಲ ವಿದ್ಯುತ್‌ ಹೆಸರಿನಲ್ಲಿ ಮುಳುಗಡೆಯಾಗುವ ಪ್ರದೇಶವನ್ನು ರಕ್ಷಿಸಿಟ್ಟುಕೊಳ್ಳಬಹುದು. ಅದೃಷ್ಟಕ್ಕೆ, ತೆಲಂಗಾಣದಂತ ಹೊಸ ರಾಜ್ಯ ಸೋಲಾರ್‌ ವಿಷಯದಲ್ಲಿ ಸೆಡ್ಡು ಹೊಡೆಯಲು ಹೆಜ್ಜೆ ಇರಿಸಿದೆ. ಈಗ ತೆಲಂಗಾಣ 2,792 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಿ ಪ್ರಥಮ ಸ್ಥಾನದಲ್ಲಿದೆ. ರಾಜಸ್ಥಾನ 2,219 ಮೆ.ವ್ಯಾನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಅಗ್ರ ಸ್ಥಾನಕ್ಕಿಂತ ಅಗ್ರ ಪರಿಚಯಕಾರನಾಗಿದ್ದ ಗುಜರಾತ್‌ 1,384 ಮೆ.ವ್ಯಾನೊಂದಿಗೆ ಆರನೇ ಸ್ಥಾನದಲ್ಲಿದೆ.

ಆ ಮಟ್ಟಿಗೆ ಕರ್ನಾಟಕ ಕೂಡ ಗುಜರಾತ್‌ಗೂ ಮೇಲಿನ ಸ್ಥಾನದಲ್ಲಿದ್ದು, 1,649 ಮೆವ್ಯಾ ವಿದ್ಯುತ್‌ ಉತ್ಪಾದಿಸುತ್ತಿದೆ. ಗುಜರಾತ್‌ನ ಇವತ್ತಿನ ಸ್ಥಾನ ವ್ಯಂಗ್ಯ ಮಾಡಲು ಬಳಸುವಂತದ್ದಲ್ಲ. ಅದರ ಯೋಜನೆಗಳು ಮಾರ್ಗದರ್ಶಕ ಸ್ಥಾನದಲ್ಲಿದ್ದುದನ್ನು ಮರೆಯಬಾರದು. ವೈಯುಕ್ತಿಕ ಸಾಧಕರ ಜೊತೆಗೆ ಸರ್ಕಾರ, ಸರ್ಕಾರಿ ಸಂಸ್ಥೆಗಳು ಸೋಲಾರ್‌ ರೂಫ್ಟಾಪ್‌ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿದರೆ ಒಂದು ಒಳ್ಳೆಯ ಕಾರಣಕ್ಕೆ ಕರ್ನಾಟಕ ಪ್ರಥಮ ಸ್ಥಾನ ಅಲಂಕರಿಸಬಲ್ಲದು!

* ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next