ಸತೀಶ್ ನೀನಾಸಂ ಅಭಿನಯದ ಮತ್ತು ಮಹೇಶ್ ಕುಮಾರ್ ನಿರ್ದೇಶನದ “ಅಯೋಗ್ಯ’ ಚಿತ್ರವು ವರಮಹಾಲಕ್ಷ್ಮೀ ಹಬ್ಬದಂದು ಸೆಟ್ಟೇರಿದೆ. ಸುದೀಪ್ ಅವರು ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಹೋಗಿದ್ದಾರೆ. ಇನ್ನು ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಸರಿ, “ಅಯೋಗ್ಯ’ ಎಂಬ ಟೈಟಲ್ ಇರುವ ಸಿನಿಮಾನದಲ್ಲಿ ನಟಿಸುವುದಕ್ಕೆ ಯಾವುದೇ ಬೇಸರವಿಲ್ಲವಾ ಎಂದರೆ, ಖಂಡಿತಾ ಇಲ್ಲ ಎಂಬ ಉತ್ತರ ಸತೀಶ್ ಅವರಿಂದ ಬರುತ್ತದೆ.
ಬರೀ ಅಯೋಗ್ಯ ಎಂಬ ಟೈಟಲ್ ಅಲ್ಲ, “ಮುಠ್ಠಾಳ’, “ಅವಿವೇಕಿ’ … ಹೀಗೆ ಚಿತ್ರಕ್ಕೆ ಯಾವ ಹೆಸರಿಟ್ಟರೂ ನಟಿಸುವುದಕ್ಕೆ ಸಿದ್ಧ ಎನ್ನುತ್ತಾರೆ ಸತೀಶ್. ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದೇ ವಿಚಾರದ ಕುರಿತು ಚರ್ಚೆ ಆಯಿತು. “ಅಯೋಗ್ಯ’ ಎಂಬ ಹೆಸರಿನ ಚಿತ್ರದಲ್ಲಿ ನಟಿಸುವುದಕ್ಕೆ ತಮಗೆ ಯಾವುದೇ ಮುಜುಗರವಿಲ್ಲ ಎಂದು ಸತೀಶ್ ಹೇಳಿಕೊಂಡರು. “ಅದೇನು ಕೆಟ್ಟ ಪದ ಅಲ್ಲ. ಪ್ರತಿ ಮನೆಯಲ್ಲೂ ಒಬ್ಬನ್ನ ಪ್ರೀತಿಯಿಂದ ಅಯೋಗ್ಯ ಅಂತ ಕರೀತಾರೆ.
ನಾನು ಸಹ ಒಬ್ಬ ಅಯೋಗ್ಯನೇ ಹಾಗೆಂದು ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ಮುಜುಗರವಿಲ್ಲ. ಏಕೆಂದರೆ, ನಾನು ಸಹ ನೂರು ತಪ್ಪುಗಳನ್ನು ಮಾಡಿದ್ದೀನಿ. ಅದನ್ನು ತಿದ್ದಿಕೊಂಡು ಬದುಕುವ ಪ್ರಯತ್ನ ಮಾಡಿದ್ದೀನಿ. ಇಲ್ಲಿ “ಅಯೋಗ್ಯ’ ಎಂದರೆ ನೆಗೆಟಿವ್ ಆಗಿ ಯೋಚಿಸುವಂತದ್ದೇನೂ ಇಲ್ಲ. ಹಳ್ಳಿಯಲ್ಲಿ ಎಲ್ಲರಿಂದ ಅಯೋಗ್ಯ ಎಂಥನಿಸಿಕೊಳ್ಳುವ ಯುವಕನೊಬ್ಬ, ಹೇಗೆ ಯೋಗ್ಯನಾಗಿ ಬೆಳೆಯುತ್ತಾನೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ ಸತೀಶ್.
ಇನ್ನು ಚಿತ್ರದ ಮುಹೂರ್ತಕ್ಕೆ ಬಂದ ಸುದೀಪ್, ತಮ್ಮ ಮೊಬೈಲ್‌ನಲ್ಲಿ ಸತೀಶ್ ಹೆಸರನ್ನು ಅಯೋಗ್ಯ ಸತೀಶ್ ಬದಲಾಯಿಸಿಕೊಂಡರಂತೆ. ಅದನ್ನು ಸತೀಶ್ ನಗುತ್ತಲೇ ಹೇಳಿಕೊಳ್ಳುತ್ತಾರೆ. “ಸುದೀಪ್ ಸಾರ್ ಮೊಬೈಲ್‌ನಲ್ಲಿ ಅಯೋಗ್ಯ ಸತೀಶ್ ಅಂತ ಬದಲಾಯಿಸಿಕೊಂಡಿದ್ದಾರೆ. ಆ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಬರೀ ಸಿನಿಮಾದಲ್ಲಿ ಅಷ್ಟೇ ಅಲ್ಲ, ನನ್ನನ್ನ ನಿಜಜೀವನದಲ್ಲಿ ಅಯೋಗ್ಯ ಅಂತ ಕರೆದರೂ ನಾನು ಬೇಸರ ಮಾಡಿಕೊಳ್ಳುವುದಿಲ್ಲ.
ಮೊದಲೇ ಹೇಳಿದಂತೆ ನಾನೇ ಹಲವು ತಪ್ಪುಗಳನ್ನು ಮಾಡಿದ್ದೇನೆ. ನಾನು ಒಳ್ಳೆಯವನು ಎಂದು ದೇವರಾಣೆ ಹೇಳುವುದಿಲ್ಲ. ಒಬ್ಬ ಮನುಷ್ಯ ಎಂದರೆ ಒಳ್ಳೇದು, ಕೆಟ್ಟದ್ದು ಎರಡೂ ಇರುತ್ತದೆ. ಅದೇ ರೀತಿ ಒಳ್ಳೆಯದರ ಜೊತೆಗೆ ಕೆಟ್ಟದ್ದನ್ನೂ ಮಾಡಿರಬಹುದು. ಹಾಗೆ ಕೆಟ್ಟದ್ದು ಮಾಡಿದ್ದರೆ, ಹಿರಿಯರು ತಿದ್ದಬೇಕು. ನನಗೆ ಈ ಟೈಟಲ್ ಬಗ್ಗೆ ಯಾವುದೇ ಬೇಸರವಿಲ್ಲ. ಮುಂದಿನ ದಿನಗಳಲ್ಲಿ “ಮುಠ್ಠಾಳ’, “ಅವಿವೇಕೆ’ಯಂತಹ ಹೆಸರಿರುವ ಚಿತ್ರ ಸಿಕ್ಕಿದರೂ ಮಾಡುತ್ತೀನಿ’ ಎನ್ನುತ್ತಾರೆ ಸತೀಶ್.