Advertisement

ವಿದ್ಯಾರ್ಥಿಗೆ ಕಲೆ-ಸಂಸ್ಕೃತಿ ಆಸಕ್ತಿ ಅಗತ್ಯ

12:35 PM Jul 24, 2017 | |

ದಾವಣಗೆರೆ: ಕನ್ನಡದಿಂದ ಏನು ಸಿಕ್ಕುತ್ತದೆ ಹಾಗೂ ಯಾವ ಲಾಭ ಇದೆ ಎನ್ನುವ ಪ್ರಶ್ನೆ ಸಾರ್ವತ್ರಿಕವಾಗಿ ಕೇಳಿಬರುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ನಾಡಿನ ಹಿರಿಯ ಕವಿ ಎಚ್‌. ಡುಂಡಿರಾಜ್‌ ತಿಳಿಸಿದ್ದಾರೆ.

Advertisement

2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 120 ಅಂಕ ಪಡೆದವರಿಗೆ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಓದಿದಂತಹ ಮಕ್ಕಳಿಗೆ ಇಂಜಿನಿಯರಿಂಗ್‌, ವೈದ್ಯಕೀಯ ಸೀಟ್‌, ಉದ್ಯೋಗ ದೊರೆಯುವುದಿಲ್ಲ. ವಿದೇಶಕ್ಕೆ ಹೋಗಲಿಕ್ಕಾಗುವುದಿಲ್ಲ ಎಂಬ ಭಾವನೆ ಪೋಷಕರಲ್ಲಿ ಮನೆ ಮಾಡುತ್ತಿರುವುದರಿಂದಲೇ ಕನ್ನಡದ ಶಾಲೆ ಮುಚ್ಚುವಂತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾವು ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಇಂತಹ ವಾತಾವರಣ ಇಲ್ಲ. ಸದಾ ಸೋರುವ ಶಾಲೆಯಲ್ಲಿ ಅಭ್ಯಾಸ ಮಾಡಿದವರು ನಾವು. ನಮ್ಮ ಶಾಲೆಯಲ್ಲಿ ಇದ್ದಂತಹ ಅತ್ಯುತ್ತಮ ಶಿಕ್ಷಕರು ನಾವು ಬರೆದಂತಹ ಕವಿತೆಗಳನ್ನು ಓದಿಸುವ ಜೊತೆಗೆ ಬೇರೆಯವರು ಬರೆದಂತಹ ಕವಿತೆಗಳನ್ನು ತಂದು, ಓದಿಸುತ್ತಿದ್ದರು. ಆ ರೀತಿಯ ಪ್ರೋತ್ಸಾಹ ಸಿಕ್ಕ ಕಾರಣಕ್ಕೆ ತಮ್ಮಂತಹ ಅನೇಕರು ಕವಿ, ಸಾಹಿತಿಗಳಾಗಿದ್ದಾರೆ. ಕವಿ ಎಂಬ ಕಾರಣಕ್ಕಾಗಿಯೇ ದೂರದ ಬೆಂಗಳೂರಿನಿಂದ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವಂತಾಗಿದೆ ಎಂದು ತಿಳಿಸಿದರು.

ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕೆಲಸ ಮಾಡುತ್ತಿದ್ದರೂ ಎಲ್ಲಿಯೋ ಒಂದು ಕಡೆ ಕನ್ನಡದ ಅವಗಣನೆ ಕಂಡು ಬರುತ್ತಿದೆ.
ತಮ್ಮದೇ ಊರಲ್ಲಿ ಶಾಲೆಗಳಿದ್ದರೂ ದೂರದ ಊರಿನ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಆಂಗ್ಲ ವ್ಯಾಮೋಹ ಹೆಚ್ಚಾಗಿ ಕಂಡು ಬರುತ್ತಿದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಅದನ್ನು ದಿಕ್ಕು ತಪ್ಪಿಸುವ ಬುದ್ಧಿವಂತಿಕೆ ಹೊಂದಿರುವ ಶಾಲಾ ಆಡಳಿತ ಮಂಡಳಿಗಳು ಇವೆ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಉದ್ಯೋಗ ಸಿಕ್ಕ, ಮದುವೆಯಾದ ಮೇಲೆ ಆಸಕ್ತಿ 
ಬೆಳೆಸಿಕೊಳ್ಳಲು ಆಗುವುದಿಲ್ಲ. ವಿದ್ಯಾರ್ಥಿಗಳಿದ್ದಾಗಲೇ ಸಾಧನೆ ಮಾಡಬೇಕು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ಹಲವಾರು ವರ್ಷದಿಂದ ಕನ್ನಡದ ಕೆಲಸ ಮಾಡುತ್ತಿದೆ. ಇನ್ನೂ ವೈವಿಧ್ಯಮಯ ರೀತಿ ಕಾರ್ಯಕ್ರಮ ನಡೆಸುವಂತಾಗಲಿ ಎಂದರು.

Advertisement

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೆ.ಎಚ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕವಿ ಬಿ.ಆರ್‌. ಲಕ್ಷ್ಮಣರಾವ್‌, ರಾಜ್ಯಸಭೆ ಮಾಜಿ
ಸದಸ್ಯ ಕೆ.ಆರ್‌. ಜಯದೇವಪ್ಪ, ಶಿಮುಲ್‌ ಅಧ್ಯಕ್ಷ ಜಗದೀಶಪ್ಪ ಬಣಕಾರ್‌, ನಿರ್ದೇಶಕ ಆರ್‌. ಹನುಮಂತಪ್ಪ, ಹೇಮಾ ಶಾಂತಪ್ಪ ಪೂಜಾರಿ,
ಜಿ.ಬಿ. ಲೋಕೇಶ್‌, ಕುಸುಮಾ ಲೋಕೇಶ್‌ ಇತರರು ಇದ್ದರು. ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕ ಮಾತುಗಳಾಡಿದರು. ರೇಖಾ ಪುರಾಣಿಕ್‌
ನಿರೂಪಿಸಿದರು. 

ಪಠ್ಯ-ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ: ಮಕ್ಕಳು 10ನೇ ತರಗತಿಗೆ ಬರುವ ತನಕ ಕ್ರೀಡೆ, ಸಂಗೀತ, ಕಲೆಗೆ ಪ್ರೋತ್ಸಾಹ ನೀಡುವ ಪೋಷಕರು 10ನೇ ತರಗತಿ ಎಂದಾಕ್ಷಣಕ್ಕೆ ಎಲ್ಲವನ್ನೂ ನಿಲ್ಲಿಸಿ, ತಮ್ಮ ಮಕ್ಕಳು ಅಂಕಗಳಿಸುವಂತಾಗಬೇಕು ಎನ್ನುವುದರತ್ತ ಗಮನ ನೀಡುತ್ತಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಭಾಗವಹಿಸುವುದರಿಂದ ಹೆಚ್ಚಿನ ಅಂಕ  ಗಳಿಸಲಿಕ್ಕೆ ಸಾಧ್ಯ ಇಲ್ಲ ಎಂಬ ಭಾವನೆ ನಿಜಕ್ಕೂ ತಪ್ಪು. ಅನೇಕರು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಲೇ ಅತ್ಯುತ್ತಮ ಅಂಕ, ಅತ್ಯುನ್ನತ ಸ್ಥಾನಮಾನ ಪಡೆದಿದ್ದಾರೆ. ಬದುಕನ್ನ ಎದುರಿಸುವ ಶಕ್ತಿ ಪಠ್ಯೇತರ ಚಟುವಟಿಕೆಯಿಂದ ದೊರೆಯುತ್ತದೆ. ಹಾಗಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಪೋಷಕರು ಮತ್ತು ಮಕ್ಕಳು ಸಮಾನ ಆದ್ಯತೆ ನೀಡಬೇಕು.
ಎಚ್‌. ಡುಂಡಿರಾಜ್‌, ಕವಿ.

Advertisement

Udayavani is now on Telegram. Click here to join our channel and stay updated with the latest news.

Next