Advertisement

2 ಸಿದ್ದಾಂತಗಳ ನಡುವಿನ ಹೋರಾಟ 

10:01 AM Nov 01, 2018 | |

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟವೇ ಹೊರತು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಶ್ಲೇಷಿಸಿದರು.

Advertisement

ನಗರದಲ್ಲಿ ಮಾತನಾಡಿ, ಸಮಾಜ ವಾದಿ, ಕಾಗೋಡು, ರೈತ, ದಲಿತ ಚಳವಳಿಗಳು ಹುಟ್ಟಿ ಬೆಳೆದಂತಹ ಜಿಲ್ಲೆಯಲ್ಲಿ
ಜಾತ್ಯತೀತ ನಿಲುವು ಹೊಂದಿದ ಪಕ್ಷಗಳ ವಿರುದ್ಧ ಕೋಮು ವಾದಿಗಳು ಸ್ಪರ್ಧೆ ಮಾಡಿದ್ದಾರೆ. ಈ ಹೋರಾಟದಲ್ಲಿ ಜನತೆ ಬಿಜೆಪಿಯನ್ನು ಮಣಿಸಿದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೊಸ ಆಯಾಮ ದೊರಕುತ್ತದೆ. ನಮಗೀಗ ಬೇಕಾಗಿರುವುದು ಹಿಂದೂ, ಮುಸ್ಲಿಂ, ಕ್ರೈಸ್ತರು ಒಳಗೊಂಡಂತೆ ಎಲ್ಲ ಧರ್ಮಗಳ ಸಮನ್ವಯದ ಜಾತ್ಯತೀತ ಏಕತೆಯ ಭಾರತವೇ ಹೊರತು ದೇಶದೊಳಗೆ ಸಂಘರ್ಷ, ಅಶಾಂತಿಯ ಬೀಡಲ್ಲ. ಅದು ಸಾಧ್ಯವಾಗಬೇಕೆಂಬ ಕಾರಣಕ್ಕೆ ಜಾತ್ಯತೀತ ನಿಲುವುಗಳನ್ನು ಹೊಂದಿದ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ದೇಶದ ಜನತೆ 282 ಸದಸ್ಯರನ್ನು ಕೊಟ್ಟು ಆಡಳಿತ ನಡೆಸುವಂತೆ ಆಶೀರ್ವದಿಸಿದ್ದು ಪ್ರತ್ಯೇಕತೆಯ ಭಾರತವನ್ನು ಸೃಷ್ಟಿ ಮಾಡುವುದಕ್ಕಲ್ಲ. ಹಾಗೆ ಮಾಡುವುದಾದಲ್ಲಿ 45 ಕೋಟಿ ಮುಸ್ಲಿಮರು ಮತ್ತು 25 ಕೋಟಿ ಕ್ರೈಸ್ತರನ್ನು ಎಲ್ಲಿಗೆ ಕಳಿಸುತ್ತೀರ ಎಂಬುದನ್ನು
ಮೊದಲು ಸ್ಪಷ್ಟಪಡಿಸಿ. ಧರ್ಮಗಳ ಆಂತರಿಕ ಪದ್ಧತಿಗಳ ಮೇಲೆ ಗದಾಪ್ರಹಾರ ನಡೆಸುವುದನ್ನು ಮೊದಲು ಕೈಬಿಡಿ ಎಂದು ಆಗ್ರಹಿಸಿದರು. 

ಉಪ ಚುನಾವಣೆ ಮಾದರಿಯಲ್ಲೇ ಮುಂಬರುವ ಲೋಕಸಭೆ ಚುನಾವಣೆಗೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವರಿಷ್ಠರೊಂದಿಗೆ ಕುಳಿತು ಚರ್ಚಿಸಿ ಸೀಟು ಹಂಚಿಕೆ ಮಾಡಿಕೊಳ್ಳಲಾಗುವುದು. ಮೈತ್ರಿಪಕ್ಷದೊಳಗೆ ಸಾಮರಸ್ಯ ಕಾಪಾಡಿಕೊಂಡು ಹೋಗುವ ವಿಷಯದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ.
● ಎಚ್‌.ಡಿ.ದೇವೇಗೌಡ ಮಾಜಿ ಪ್ರಧಾನಿ
 

Advertisement

Udayavani is now on Telegram. Click here to join our channel and stay updated with the latest news.

Next