Advertisement
ವ್ಯಾಪಾರಿಗಳ ಪ್ರತಿಭಟನೆಯ ನಡುವೆಯೂ ಮಂಗಳೂರು ಪುರಭವನ ವ್ಯಾಪ್ತಿಯಿಂದ ಆರಂಭವಾಗಿ ಸ್ಟೇಟ್‌ಬ್ಯಾಂಕ್ ಪರಿಸರ, ಸೆಂಟ್ರಲ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಯಿತು. ಸೀಯಾಳ ಮಾರಾಟದ ಗಾಡಿಗಳು, ಫಾಸ್ಟ್ ಫುಡ್, ಜ್ಯೂಸ್, ಪಾನಿಪುರಿ, ಆಮ್ಲೆಟ್ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಬೀದಿ ಬದಿಯಲ್ಲಿ ಟೇಬಲ್ ಇಟ್ಟು ವ್ಯಾಪಾರ ಮಾಡುವವರನ್ನೂ ತೆರವು ಮಾಡಲಾಯಿತು.
Related Articles
Advertisement
“ಸುದಿನ’ ಜತೆಗೆ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘಟನೆ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು “ಐಡಿ ಕಾರ್ಡ್ ಕೊಟ್ಟು ವ್ಯಾಪಾರಕ್ಕೆ ಅವಕಾಶ ಇದ್ದವರನ್ನೂ ಪಾಲಿಕೆ ತೆರವು ಮಾಡುತ್ತಿದೆ. ಸ್ಟೇಟ್‌ಬ್ಯಾಂಕ್‌ನ ಒಳಭಾಗದಲ್ಲಿ ಸುಮಾರು 10ರಷ್ಟು ವ್ಯಾಪಾರಿಗಳನ್ನು ತೆರವು ಮಾಡದೆ ಬಡವರನ್ನು ಮಾತ್ರ ತೆರವು ಮಾಡಲಾಗುತ್ತಿದೆ. ಬಡವರ ಹೊಟ್ಟೆಗೆ ಅನ್ಯಾಯ ಮಾಡುವ ಪಾಲಿಕೆ ಆಡಳಿತದ ಧೋರಣೆ ಖಂಡನೀಯ. ತೆರವು ಕಾರ್ಯಾ ಚರಣೆಯನ್ನು ತತ್‌ಕ್ಷಣವೇ ನಿಲ್ಲಿಸಬೇಕು.ಬಡವರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನಿಲ್ಲಿಸಿ’ ಎಂದರು.
“ವ್ಯಾಪಾರಿಗಳನ್ನು ನಿರಾಶ್ರಿತರನ್ನಾಗಿ ಸುವುದು ನಮ್ಮ ಉದ್ದೇಶವಲ್ಲ. ನಗರ ಸ್ವತ್ಛತೆ, ಜನರ ಆರೋಗ್ಯ ಹಿತದೃಷ್ಟಿ, ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಮುಂಚಿತವಾಗಿ ತಿಳಿಸಿಯೇ ಮಾಡಲಾಗಿದೆ’ ಎಂದು ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.
ಇಂದು ಪ್ರತಿಭಟನೆ
ಸರ್ವಿಸ್ ಬಸ್ ನಿಲ್ದಾಣದ ಒಳಗೆ ಶಾಶ್ವತ ಸಂರಚನೆಯ ಅಂಗಡಿಗಳನ್ನು ತೆರವುಗೊಳಿಸದೆ ಬಡ ಬೀದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಆ. 2ರಂದು ಬೆಳಗ್ಗೆ 10ಕ್ಕೆ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಂಗಡಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪ್ರ.ಕಾರ್ಯದರ್ಶಿ ಹರೀಶ್ ಪೂಜಾರಿ ತಿಳಿಸಿದ್ದಾರೆ.
ವ್ಯಾಪಾರಕ್ಕೆ ಪ್ರತ್ಯೇಕ ವಲಯ
ಬೀದಿ ಬದಿ ವ್ಯಾಪಾರದಿಂದಾಗುವ ಸಮಸ್ಯೆ ಹಾಗೂ ಅದನ್ನು ತೆರವು ಮಾಡುವಂತೆ ಪಾಲಿಕೆಯ ಪ್ರತೀ ಸಾಮಾನ್ಯ ಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರು ಆಗ್ರಹಿಸುತ್ತಿದ್ದರು. ಮಾರ್ಗದ ಬದಿಯಲ್ಲಿ ಅಸುರಕ್ಷಿತ ಮಾದರಿಯಲ್ಲಿ ತಿಂಡಿ-ತಿನಿಸು ವ್ಯಾಪಾರ ಮಾಡುವುದು, ಅದರಿಂದ ಡೆಂಗ್ಯೂ, ಮಲೇರಿಯಾ ಸಹಿತ ರೋಗಗಳಿಗೆ ಕಾರಣವಾಗುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದರು. ಫುಟ್‌ಪಾತ್‌ನಲ್ಲಿ ಜನರಿಗೆ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಬಗ್ಗೆ ಜನರು ದೂರು ನೀಡಿದ್ದರು. ಈ ಕಾರಣದಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ಅನಧಿಕೃತ ಬೀದಿ ಬದಿ ವ್ಯಾಪಾರ ತೆರವು ಮಾಡಿದ ಅನಂತರ ಜನರಿಗೆ ತೊಂದರೆ ಆಗದಂತೆ ಎಲ್ಲ ವಾರ್ಡ್‌ಗಳ ಸರ್ವೇ ನಡೆಸಿ ಪ್ರತ್ಯೇಕ ವ್ಯಾಪಾರಿ ವಲಯ ರಚಿಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು.
– ಸುಧೀರ್ ಶೆಟ್ಟಿ ಕಣ್ಣೂರು,ಮೇಯರ್, ಮಂಗಳೂರು ಪಾಲಿಕೆ