Advertisement
ಅಬ್ದುಲ್ಲ ಬಡವರಿಗೆ ಹಣವನ್ನು ಸಾಲವಾಗಿ ಕೊಡುತ್ತಿದ್ದ. ಅವರಿಂದ ದುಬಾರಿ ಬಡ್ಡಿಯನ್ನು ಕಿತ್ತುಕೊಳ್ಳುತ್ತಿದ್ದ. ಸಾಲ ಮರುಪಾವತಿ ಮಾಡಲು ಕಷ್ಟವಾದವರ ಪಾತ್ರೆಗಳನ್ನು, ಕುರಿ, ಮೇಕೆಗಳನ್ನು ಬಲವಂತವಾಗಿ ತರುತ್ತಿದ್ದ. ತನ್ನ ಮನೆಯವರಿಗೆ ಕೂಡ ಹೊಟ್ಟೆ ತುಂಬ ಊಟ ಮಾಡಲು ಬಿಡುತ್ತಿರಲಿಲ್ಲ. ಒಂದು ತರಕಾರಿಯ ಸಿಪ್ಪೆಯನ್ನು ಒಂದು ದಿನ, ಬೀಜಗಳನ್ನು ಒಂದು ದಿನ, ತೊಟ್ಟುಗಳನ್ನು ಒಂದು ದಿನ ಪದಾರ್ಥ ಮಾಡಲು ಹೇಳಿ ಅಲ್ಲಿಯೂ ಉಳಿತಾಯ ಮಾಡಿಕೊಳ್ಳುತ್ತಿದ್ದ.
Related Articles
Advertisement
ಅಂದು ರಾತ್ರೆ ನಿದ್ರಿಸುತ್ತಿದ್ದ ಅಬ್ದುಲ್ಲನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡು, “”ನಿನಗೆ ನಾನು ಸಾಕಷ್ಟು ಸಂಪತ್ತನ್ನು ಕರುಣಿಸಿದ್ದೇನೆ. ಆದರೂ ನಿನ್ನ ಬಳಿಗೆ ಸಹಾಯಕ್ಕಾಗಿ ಒಬ್ಬ ಮಹಿಳೆಯನ್ನು ನಾನೇ ಕಳುಹಿಸಿದ್ದರೂ ನೀನು ಅವಳಿಗೆ ಚಿಕ್ಕಾಸನ್ನೂ ಕೊಡಲಿಲ್ಲ. ಅವಳ ಮಗಳ ವಿವಾಹಕ್ಕೆ ನೆರವಾಗಿ ಪುಣ್ಯ ಗಳಿಸುವ ಅವಕಾಶದಿಂದ ನೀನು ವಂಚಿತನಾದೆ” ಎಂದು ಬೇಸರದಿಂದ ಹೇಳಿದ. ಈ ಮಾತಿಗೆ ಅಬ್ದುಲ್ಲ ಜೋರಾಗಿ ನಕ್ಕುಬಿಟ್ಟ. “”ದೇವರೇ, ಬಡವರಿಗೆ ಚಿನ್ನ ಕೊಟ್ಟರೆ ಮಾರಾಟ ಮಾಡುತ್ತಾರೆ, ಅದರ ಸಂತೋಷವನ್ನು ಉಳಿಸಿಕೊಳ್ಳುವುದಿಲ್ಲ. ನನ್ನಂಥವರು ಚಿನ್ನವನ್ನು, ಹಣವನ್ನು ಬಹು ಎಚ್ಚರಿಕೆಯಿಂದ ಜೋಪಾನ ಮಾಡಿ ಅದನ್ನು ನೋಡಿ ಸದಾ ಸಂತೋಷಪಡುತ್ತಾರೆ. ಹೀಗಾಗಿ ಸಹಾಯ ಕೋರಿಕೊಂಡು ಯಾವ ಬಡವರನ್ನೂ ನನ್ನ ಸನಿಹ ಕಳುಹಿಸಬೇಡ. ನನಗೆ ಅದರಿಂದ ಸಿಗುವ ಪುಣ್ಯವೂ ಬೇಡ” ಎಂದು ನಿಷ್ಠುರವಾಗಿಯೇ ಹೇಳಿದ.
ಮರುದಿನ ಬೆಳಗಾಯಿತು. ಅಬ್ದುಲ್ಲನಿಗೆ ದೊಡ್ಡ ಆಘಾತವೇ ಎದುರಾಯಿತು. ಕಳ್ಳರು ಅವನ ನೆಲಮಾಳಿಗೆಯ ಗೋಡೆಗೆ ಕನ್ನ ಕೊರೆದು ಎಲ್ಲ ಸಂಪತ್ತನ್ನೂ ಅಪಹರಿಸಿಕೊಂಡು ಹೋಗಿದ್ದರು. ಅವನು ಈ ದುಃಖದಲ್ಲಿರುವಾಗಲೇ ಅವನ ಗೆಳೆಯನೊಬ್ಬ, “”ನೋಡಿದೆಯಾ, ನಿನ್ನೆ ನಿನ್ನ ಬಳಿಗೆ ನೆರವು ಕೇಳಿಕೊಂಡು ಬಂದ ಮಹಿಳೆಯನ್ನು ಬರಿಗೈಯಲ್ಲಿ ಕಳುಹಿಸಿದೆಯಲ್ಲ? ಬಳಿಕ ಅವಳು ಒಬ್ಬ ಸಂತನ ಬಳಿಗೆ ಹೋಗಿ ಬೇಡಿಕೊಂಡಳಂತೆ. ಸಂತನು ಅವಳಿಗೆ ಸಹಾಯ ಮಾಡುವುದಾಗಿ ಹೇಳಿ ಕಳುಹಿಸಿದ. ನಿನ್ನೆ ರಾತ್ರೆ ಅಜಾnತ ವ್ಯಕ್ತಿಯೊಬ್ಬ ಅವಳ ಮನೆಯ ಒಳಗೆ ಬಂಗಾರದ ದೊಡ್ಡ ಮೂಟೆಯನ್ನೇ ತಂದು ಹಾಕಿ ಹೋದನಂತೆ” ಎಂದು ಹೇಳಿದ.
ಅಬ್ದುಲ್ಲ ಆ ಮಹಿಳೆಯ ಮನೆಯನ್ನು ಹುಡುಕಿಕೊಂಡು ಹೋದ. ಗೆಳೆಯನ ಮಾತು ಸುಳ್ಳಾಗಿರಲಿಲ್ಲ. ಅವಳು ಮಗಳಿಗೆ ಮದುವೆ ಮಾಡುತ್ತಿದ್ದಳು. “”ಇದಕ್ಕೆಲ್ಲ ಹಣ ಎಲ್ಲಿಂದ ಬಂತು?” ಎಂದು ಅಬ್ದುಲ್ಲ ಕೇಳಿದ. ಮಹಿಳೆ ಏನನ್ನೂ ಮುಚ್ಚಿಡಲಿಲ್ಲ. ಮಹಿಮಾವಂತರಾದ ಸಂತರು, “”ನಿನ್ನ ಮಗಳ ಮದುವೆಗೆ ಅಗತ್ಯವಿರುವ ಬಂಗಾರ, ಹಣ ಎಲ್ಲವೂ ದೊರಕುತ್ತದೆ ಎಂದು ಭರವಸೆ ನೀಡಿದರು. ಯಾರೋ ಧರ್ಮಾತ್ಮರು ತಂದು ಕೊಟ್ಟುಹೋದರು” ಎಂದು ನಡೆದುದನ್ನು ಹೇಳಿದಳು. ಮಹಿಳೆಯ ಮನೆಗೆ ಬಂದುದು ತಾನು ಸಂಗ್ರಹಿಸಿಟ್ಟ ಸಂಪತ್ತು ಎಂಬುದರಲ್ಲಿ ಅಬ್ದುಲ್ಲನಿಗೆ ಯಾವ ಅನುಮಾನವೂ ಉಳಿಯಲಿಲ್ಲ. ಸಂತನ ಬಳಿಗೆ ಹೋಗಿ ಬೇಡಿಕೊಂಡು ಇದನ್ನೆಲ್ಲ ಮರಳಿ ಪಡೆಯಬೇಕೆಂದು ಯೋಚಿಸಿ ಅಲ್ಲಿಗೆ ಹೋದ.
ಸಂತನು ಸಾವಧಾನದಿಂದ ಅಬ್ದುಲ್ಲನ ಮಾತುಗಳನ್ನು ಕೇಳಿಸಿಕೊಂಡ. ಬಳಿಕ, “”ನಿನ್ನಂಥವನಿಗೆ ಉಪಕಾರ ಮಾಡುವುದಕ್ಕಿಂತ ದೊಡ್ಡ ಪುಣ್ಯವಾದರೂ ಇನ್ನೇನಿದೆ? ಅದೋ ಅಲ್ಲಿ ನಿನ್ನ ಸಂಪತ್ತಿನ ರಾಶಿಯಿದೆ, ತೆಗೆದುಕೊಂಡು ಹೋಗು” ಎಂದು ಅಂಗಳದೆಡೆಗೆ ಕೈತೋರಿಸಿದ. ಅಬ್ದುಲ್ಲ ನೋಡಿದಾಗ ಒಂದು ದೊಡ್ಡ ಕಲ್ಲು ಕಾಣಿಸಿತು. ಅವನಿಗೆ ಕೋಪದಿಂದ, “”ತಾವು ನನ್ನ ದುಃಖವನ್ನು ಪರಿಹರಿಸುತ್ತೀರೆಂದು ಭಾವಿಸಿದರೆ ಸಂಪತ್ತಿನ ಬದಲು ಒಂದು ಕಲ್ಲನ್ನು ತೋರಿಸುತ್ತಿದ್ದೀರಲ್ಲ? ಏನಿದು ತಮಾಷೆ?” ಎಂದು ಕೇಳಿದ.
ಸಂತ ಮುಗುಳ್ನಕ್ಕ. “”ತಮಾಷೆಯಲ್ಲ. ಜಿಪುಣನಾದ ನಿನಗೆ ಸಂಪತ್ತು ಇರುವುದು ನೋಡುವುದಕ್ಕೆ ವಿನಃ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಅಲ್ಲ ತಾನೆ? ನೊಂದವರ ಕಣ್ಣೀರು ಒರೆಸುವುದಕ್ಕೆ ಆಗದ ಚಿನ್ನಕ್ಕೂ ಕಲ್ಲಿಗೂ ಭೇದ ಏನಿದೆ? ಆ ಕಲ್ಲನ್ನೇ ಚಿನ್ನ ಎಂದು ಭಾವಿಸಿ ನೋಡುತ್ತ ಇರು. ನಿನ್ನಂಥವನಿಗೆ ದೇವರೂ ನೆರವಾಗುವುದಿಲ್ಲ” ಎಂದು ಹೇಳಿದ. ಅಬ್ದುಲ್ಲ ಬುದ್ಧಿ ಕಲಿತುಕೊಂಡ. ಶ್ರಮಪಟ್ಟು ಮತ್ತೆ ಸಂಪತ್ತು ಗಳಿಸಿದ. ಅದರಲ್ಲಿ ಪರರಿಗೂ ಸಹಾಯ ಮಾಡಿ ಪುಣ್ಯವನ್ನು ಸಂಪಾದಿಸಿದ.
ಪ. ರಾಮಕೃಷ್ಣ ಶಾಸ್ತ್ರಿ