ಪಣಜಿ: ಬುಡಕಟ್ಟು ಜನಾಂಗವಾದ ಇರುಳಿಗರ ವಿಶಿಷ್ಟವಾದ ಚಲನಚಿತ್ರ ಪ್ರದರ್ಶನಕ್ಕೆ ಇಫಿ ಈ ಬಾರಿ ಸಾಕ್ಷಿಯಾಗಿದೆ. ಪಾತ್ರವರ್ಗದ ಸುಮಾರು 60 ಮಂದಿ ಬುಡಕಟ್ಟು ಜನಾಂಗಕ್ಕೆ ಸೇರಿದವರೇ. ಇರುಳಿಗರ ಭಾಷೆಯಲ್ಲೇ ಇರುವ “ದಾಬಾರಿ ಖುರುವಿʼ ಚಲನಚಿತ್ರವನ್ನು ಮಲಯಾಳ ಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪ್ರಿಯನಂದನ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು.
ನಟವರ್ಗದ ಬಹುತೇಕರು ಇಫಿ ಚಿತ್ರೋತ್ಸವದಲ್ಲೂ ಭಾಗವಹಿಸಿದ್ದು ವಿಶೇಷ. ಇನ್ನೂ ವಿಶಿಷ್ಟವೆಂದರೆ, ಈ ಬುಡಕಟ್ಟು ಜನಾಂಗದವರು ತಮ್ಮ ಪ್ರದೇಶ ಅಟ್ಟಪಾಡಿಯನ್ನು ಬಿಟ್ಟು ಇಷ್ಟು ದೂರ ಬಂದದ್ದೇ ಬದುಕಿನಲ್ಲಿ ಇದೇ ಮೊದಲು.
ಇದರ ಕುರಿತ ಪತ್ರಿಕಾಗೋಷ್ಠಿಯಲ್ಲೂ ಅತ್ಯಂತ ಭಾವುಕರಾಗಿ ಮಾತನಾಡಿದ ಪ್ರಧಾನ ಪಾತ್ರ ನಿರ್ವಹಿಸಿದ ಮೀನಾಕ್ಷಿ, ʼನನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುವುದೋ ತಿಳಿಯುತ್ತಿಲ್ಲ. ಈ ಸಿನಿಮಾ ನಮ್ಮ ಎಲ್ಲ ಬುಡಕಟ್ಟು ಸಮುದಾಯದವರಿಗೆ ತೋರಿಸಬೇಕು. ಈ ಮೂಲಕ ತಮಗೆ ತಾವೇ ಹೋರಾಡುವಂತೆ ಮಾಡಬೇಕುʼ ಎಂದರು.
ಇರುಳಿಗ ಬುಡಕಟ್ಟು ಜನಾಂಗದಲ್ಲಿರುವ ಕೆಲವು ಆಚರಣೆಗಳ ಕುರಿತಾದ ಚಿತ್ರವಿದು. ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಪ್ರದೇಶದ ಇರುಳಿಗರ ಜಾನಪದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಸಿನಿಮಾ ಶೀರ್ಷಿಕೆಯ ಅರ್ಥ ಅಪ್ಪನಿಲ್ಲದ ಗುಬ್ಬಿಮರಿ. ಇದು ಈ ಬುಡಕಟ್ಟು ಜನಾಂಗದಲ್ಲಿರುವ ಅವಿವಾಹಿತ ತಾಯಂದಿರ ಸಮಸ್ಯೆಯನ್ನು ಪ್ರತಿನಿಧಿಸುತ್ತದೆ. ಇದೊಂದು ಪದ್ಧತಿ, ತಮ್ಮದೇ ಸಮುದಾಯ, ಸಮಾಜ, ಕಟ್ಟುಕಟ್ಟಳೆಯಂಥ ಪಂಜರದಿಂದ ಹೊರಬಂದು ಹಾರಲು ಪ್ರಯತ್ನಿಸುತ್ತಿರುವ ಬಾಲಕಿಯರ ಕಥೆ.
Related Articles
ʼನಮ್ಮ ಸಮುದಾಯದ ಬಹಳಷ್ಟು ಹೆಣ್ಣುಮಕ್ಕಳು ಈ ಸಂಕಷ್ಟದಿಂದ ಬಸವಳಿದಿದ್ದಾರೆ. ಕೊನೇಪಕ್ಷ ನಮ್ಮ ಮುಂದಿನ ತಲೆಮಾರಿನ ಹೆಣ್ಣುಮಕ್ಕಳಿಗಾದರೂ ಈ ಪದ್ಧತಿಯಿಂದ ಮುಕ್ತಿ ಸಿಗುವಲ್ಲಿ ಸಿನಿಮಾ ಸಹಾಯ ಮಾಡಲಿʼ ಎಂದು ಆಶಿಸಿದವರು ಮೀನಾಕ್ಷಿಯೊಂದಿಗೆ ಗೆಳತಿಯಾಗಿ ನಟಿಸಿದ್ದ ಶ್ಯಾಮ್ಮಿ. ಭಾರತೀಯ ಸಿನಿಮಾದಲ್ಲೇ ಇದೊಂದು ವಿಶಿಷ್ಟ ಪ್ರಯೋಗ. ಎಲ್ಲ ಬುಡಕಟ್ಟು ಜನಾಂಗದವರನ್ನೇ ನಟನೆಗೆ ಒಗ್ಗಿಸಿ ಚಿತ್ರೀಕರಿಸಿರುವುದು.
ʼಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಒಂದು ಯಾರಿಗೂ ತಿಳಿಯದ ಸತ್ಯಕಥೆಯನ್ನು ಹೇಳಲಿಚ್ಚಿಸಿದ್ದೇನೆ. ಇದರ ಹಿಂದೆ ಸಾಮಾಜಿಕ ಉದ್ದೇಶವೂ ಇದೆ. ಈ ಸಿನಿಮಾದ ಮೂಲಕ ಈ ಸಮುದಾಯದವರಿಗೆ ಒಳ್ಳೆಯ ಬದುಕು ಸಿಗಲಿ. ನನ್ನ ದೃಷ್ಟಿಯಲ್ಲಿ ಸಿನಿಮಾ ಮಾಧ್ಯಮ ಇರುವುದು ಬರೀ ಮನೋರಂಜನೆಗಲ್ಲ; ಸಮಾಜದ ಪರಿವರ್ತನೆಗೂʼ ಎಂದವರು ನಿರ್ದೇಶಕ ಪ್ರಿಯನಂದನ್. ಅಟ್ಟಪಾಡಿ ಇರುಳಿಗರು, ಮುಡುಕ, ಕುರುಂಬ ಹಾಗೂ ವಡುಕ ಬುಡಕಟ್ಟು ಜನಾಂಗದವರು ಹೆಚ್ಚಾಗಿರುವ ಪ್ರದೇಶ. ಈ ಪ್ರದೇಶ ಜಿಲ್ಲಾ ಕೇಂದ್ರದಿಂದಲೂ ಬಹಳ ದೂರದಲ್ಲಿದೆ.
ನಿರ್ದೇಶಕರ ಪ್ರಕಾರ ಇಡೀ ಚಿತ್ರೀಕರಣವೆಂಬುದು ಬಹಳ ಸರಾಗ ಹಾಗೂ ಸುಲಭವಾಗಿ ಆಯಿತು. ಭಾಷೆಯ ಗಡಿ ಮೀರಿ ಭಾವನೆಗಳು ಮಾತನಾಡಿದವು. ಹಾಗಾಗಿ ಅಷ್ಟೊಂದು ಕಷ್ಟವಾಗಲಿಲ್ಲ. ಚಿತ್ರಕಥೆ ಮೊದಲು ಮಲಯಾಳದಲ್ಲಿ ಬರೆದು ಇರುಳ ಭಾಷೆಗೆ ತರಲಾಯಿತು. ನಟರಿಗೆ ನಟನೆಯ ತರಬೇತಿಯನ್ನೂ ನೀಡಿದ್ದು ಅನುಕೂಲವಾಗಿದೆ.
ನನ್ನ ನಿರೀಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಅದ್ಭುತವೆನ್ನುವಂತೆ ಬುಡಕಟ್ಟು ಜನಾಂಗದ ಕಲಾವಿದರು ನಟಿಸಿದ್ದಾರೆ. ಭಾವನೆಗಳೇ ನಿಜವಾದ ಸಾರ್ವಕಾಲಿಕ ಹಾಗೂ ಜಾಗತಿಕ ಭಾಷೆ. ತರಬೇತಿಯಿಲ್ಲದೇ ನಟಿಸುವ ಸಾಧ್ಯತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾಗಿ ಇರುಳಿಗರೊಂದಿಗೆ ಸಿನಿಮಾ ಮಾಡಲು ಕಷ್ಟವಾಗಲಿಲ್ಲʼ ಎಂದರು ಪ್ರಿಯನಂದನ್.