Advertisement

ಧರ್ಮವ್ಯಾಧನ ಕಥೆ

03:45 AM Jun 29, 2017 | Harsha Rao |

ಕೌಶಿಕನೆಂಬುವನು ಒಬ್ಬ ಬ್ರಾಹ್ಮಣ. ದೊಡ್ಡ ವಿದ್ವಾಂಸ . ತಪಸ್ವಿ. ಒಂದು ದಿನ ಅವನು ಒಂದು ಮರದ ಕೆಳಗೆ ಕುಳಿತಿದ್ದಾಗ ಒಂದು ಪಕ್ಷಿಯು ಅವನ ಮೇಲೆ ಹೊಲಸು ಹಾಕಿತು. ಅವನು ಕೋಪದಿಂದ ಆ ಪಕ್ಷಿಯತ್ತ ನೋಡಿದಾಗ ಅದು ಸತ್ತುಬಿದ್ದಿತು. ಅನಂತರ ಅವನು ಭಿಕ್ಷೆಗೆ ಹೊರಟ. ಒಂದು ಮನೆಯ ಬಾಗಿಲಿನಲ್ಲಿ ನಿಂತು ಭಿಕ್ಷೆಬೇಡಿದ. ಯಜಮಾನಿಯು “ಸ್ವಲ್ಪ ನಿಂತು ಕೊಳ್ಳಿ’ ಎಂದಳು. ಅದೇ ಹೊತ್ತಿಗೆ ಹಸಿದಿದ್ದ ಆ ಹೆಂಗಸಿನ ಗಂಡನು ಮನೆಗೆ ಬಂದ. ಅವಳು ಅವನಿಗೆ ಊಟ ಬಡಿಸಿ, ಆನಂತರವೇ ಕೌಶಿಕನಿಗೆ ಭಿಕ್ಷೆ ಹಾಕಲು ಬಂದಳು. ಅವನು ಕೋಪದಿಂದ “ನನ್ನನ್ನು ಹೀಗೆ ಕಾಯಿಸಬಹುದೇ?’ ಎಂದ. ಅವಳು “ಕ್ಷಮಿಸಿ,ನನ್ನ ಗಂಡ ಹಸಿದು ಬಂದ. ಮನೆಯ ಯಜಮಾನ ಹಸಿದಿದ್ದಾಗ ಅವನಿಗೆ ಊಟ ಹಾಕುವುದು ಕರ್ತವ್ಯ. ಹಾಗಾಗಿ ಅವನಿಗೆ ಬಡಿಸಿಬಂದೆ’ ಎಂದಳು. ಕೌಶಿಕನು “ಬ್ರಾಹ್ಮಣನಿಗಿಂತ ನಿನಗೆ ನಿನ್ನ ಗಂಡನೇ ದೊಡ್ಡವನಾದನೋ? ಬ್ರಾಹ್ಮಣರು ಬೆಂಕಿಯ ಹಾಗೆ ಸುಡಬಲ್ಲರು’ ಎಂದು ಸಿಟ್ಟಿನಿಂದ ಹೇಳಿದ. ಗೃಹಿಣಿಯು, “ಸ್ವಾಮಿ, ನೀವು ಪಕ್ಷಿಯನ್ನು  ಸುಟ್ಟ ಸಂಗತಿ ನನಗೆ ಗೊತ್ತು. ನಾನು ನಿಮ್ಮನ್ನು ಕಾಯಿಸಿದ್ದಕ್ಕೆ ಕ್ಷಮಿಸಿ. ನಾನು ನನ್ನ ಗಂಡನನ್ನು ದೇವರು ಎಂದು ಕಾಣುತ್ತೇನೆ. ನೀವು ಕೋಪ ಮಾಡಿಕೊಳ್ಳಬಾರದು. ನಿಮಗೆ ಧರ್ಮ ಸರಿಯಾಗಿ ತಿಳಿದಿಲ್ಲ ಎಂದು ಕಾಣುತ್ತದೆ. ಮಿಥಿಲೆಯಲ್ಲಿ ಧರ್ಮವ್ಯಾಧನಿದ್ದಾನೆ.ಅವನ ಬಳಿಗೆ ಹೋಗಿ’ ಎಂದು ಹೇಳಿದಳು.

Advertisement

ಈ ಮಾತು ಕೇಳುತ್ತಿದ್ದಂತೆಯೇ, ಕೌಶಿಕನ ಕೋಪ ಇಳಿಯಿತು. ಧರ್ಮವ್ಯಾಧನನ್ನು ಕಾಣಲು ಹೊರಟ. ಅಲ್ಲಿಗೆ ಹೋಗಿ ನೋಡಿದರೆ, ಅವನೊಬ್ಬ ಮಾಂಸದ ವ್ಯಾಪಾರಿ. ಮಾಂಸವನ್ನು  ಕೊಳ್ಳಲು ಜನರು ಅಂಗಡಿಗೆ ಬಂದಿದ್ದರು. ಅವರೆಲ್ಲಾ ಹೊರಟಮೇಲೆ  ಧರ್ಮವ್ಯಾಧನು, “ನಿಮ್ಮನ್ನು ಒಬ್ಬ ಗೃಹಿಣಿ ಕಳುಹಿಸಿದಳು ಅಲ್ಲವೆ? ನಿಮ್ಮ ವಿಷಯ, ನೀವು ಬಂದ ಕಾರಣ ನನಗೆ ಗೊತ್ತು’ ಎಂದು ಕೌಶಿಕನಿಗೆ ಹೇಳಿದ. ಕೌಶಿಕನನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ.

ಕೌಶಿಕನು, “ಅಯ್ನಾ, ನಿನ್ನ ವೃತ್ತಿಯು ನಿನಗೆ ತಕ್ಕುದಲ್ಲ. ಇದನ್ನು ನೋಡಿ ನನಗೆ ವ್ಯಸನವಾಗುತ್ತಿದೆ’ ಎಂದ. ವ್ಯಾಧನು, “ಇದು ನನಗೆ ನನ °ಹಿರಿಯರಿಂದ ಬಂದ ವೃತ್ತಿ. ಇದನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತೇನೆ. ವೃದ್ಧ ತಂದೆತಾಯಿಯರ ಸೇವೆ ಮಾಡುತ್ತೇನೆ. ನನ್ನಿಂದಾದಷ್ಟು ದಾನ ಮಾಡುತ್ತೇನೆ. ಪ್ರಾಣಿಗಳನ್ನು ನಾನು ಕೊಲ್ಲುವುದಿಲ್ಲ.

ಅವುಗಳ ಮಾಂಸವನ್ನು ಮಾರುತ್ತೇನೆ. ಅದನ್ನು ತಿನ್ನುವುದಿಲ್ಲ. ಪಾಪ ಮಾಡಿದವರು ನಾಶವಾಗುತ್ತಾರೆ. ಆಸೆಯೇ ಪಾಪಕ್ಕೆ ಮೂಲ’ ಎಂದು ಹೇಳಿದನು. ನಂತರ ಮಾತಾಪಿತರನ್ನು ತೋರಿಸಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ನಂತರ “ಇವರೇ ನನ್ನ ದೇವರು. ನಿನ್ನ ಅಧ್ಯಯನಕ್ಕಾಗಿ ನಿನ್ನ ವೃದ್ಧ ತಂದೆತಾಯಿಯರನ್ನು ಬಿಟ್ಟು ಬಂದಿದ್ದೀಯೆ.

ಭಕ್ತಿಯಿಂದ ಅವರ ಸೇವೆ ಮಾಡು’ ಎಂದು ಹೇಳಿದ. ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಶ್ರದ್ಧೆಯಿಂದ  ಮಾಡುವುದು, ಪಾಪದಿಂದ ದೂರ ಇರುವುದು, ಕೋಪದಿಂದ ದೂರ ಉಳಿಯುವುದು, ಹಿಂಸೆಯನ್ನು ಆಚರಿಸದೇ ಇರುವುದು, ದಾನ ಮಾಡುವುದು ಇವು ಬದುಕಿನಲ್ಲಿ ಮುಖ್ಯ ಎಂದು ಕೌಶಿಕ ತಿಳಿದುಕೊಂಡ.

Advertisement

– ಪ್ರೊ. ಎಲ್‌. ಎನ್‌ ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ

Advertisement

Udayavani is now on Telegram. Click here to join our channel and stay updated with the latest news.

Next