ಸುಮಾರು ನಾಲ್ಕು ದಶಕಗಳಿಂದಲೂ ಚಿತ್ರರಂಗದಲ್ಲಿ ಗಿಟಾರಿಸ್ಟ್ ಆಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸುದರ್ಶನ್ ಈಗ ನಿರ್ಮಾಣಕ್ಕಿಳಿದಿದ್ದಾರೆ. “ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ ಮುಹೂರ್ತವನ್ನೂ ನೆರವೇರಿಸಿದ್ದಾರೆ.
ತಮ್ಮ ಮೊದಲ ನಿರ್ಮಾಣದ ಚಿತ್ರದ ಬಗ್ಗೆ ಹೇಳಲೆಂದೇ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು ಸುದರ್ಶನ್. ಮೊದಲು ಮೈಕ್ ಹಿಡಿದ ಅವರು ಮಾತು ಶುರುಮಾಡಿದರು. “ಲಂಡನ್ ಸ್ಕ್ರೀನ್ ಜೊತೆ ಕೈ ಜೋಡಿಸಿ ಚಿತ್ರ ಮಾಡುತ್ತಿದ್ದೇನೆ. ಇದೊಂದು ಹಾಸ್ಯಮಯ ಚಿತ್ರ. ಆರಂಭದಿಂದ ಅಂತ್ಯದವರೆಗೂ ನಗಿಸುತ್ತಲೇ ಸಾಗುತ್ತದೆ. ಜೀವನದ ಮೌಲ್ಯ ಕುರಿತು ಒಂದಷ್ಟು ಅಂಶಗಳು ಇಲ್ಲಿವೆ. ಹೊಸ ತಂಡದ ಉತ್ಸಾಹ ಜೋರಾಗಿದೆ. ಅದಕ್ಕೆ ನಿಮ್ಮ ಸಹಕಾರ ಬೇಕು’ ಎಂದು ನಿರ್ದೇಶಕರ ಕೈಗೆ ಮೈಕ್ ಇಟ್ಟರು ಸುದರ್ಶನ್.
ನಿರ್ದೇಶಕ ರಾಜ್‌ಸೂರ್ಯ ಅವರಿಗೆ ಇದು ಮೊದಲ ಚಿತ್ರ. “ಇದೊಂದು ಕಾಮಿಡಿ, ಎಮೋಷನ್ಸ್ ಮತ್ತು ಮನರಂಜನೆ ಅಂಶವಿರುವ ಚಿತ್ರ. ದಿನ ಭವಿಷ್ಯ ನಂಬುವ ನಾಯಕ ತನ್ನ ಬದುಕನ್ನು ಹೇಗೆ ಕಂಡುಕೊಳ್ಳುತ್ತಾನೆ ಮತ್ತು ಆ ಭವಿಷ್ಯ ನಂಬಿ ಹೋಗುವ ಸಂದರ್ಭದಲ್ಲಿ ಆಗುವಂತಹ ಸಣ್ಣ ಪುಟ್ಟ ಎಡವಟ್ಟುಗಳು ಚಿತ್ರದ ಕಥಾವಸ್ತು. ಇಲ್ಲಿ ಇಡೀ ಚಿತ್ರವೇ ಹಾಸ್ಯಮಯವಾಗಿ ಸಾಗುತ್ತದೆ. ಇಷ್ಟಕ್ಕೂ ಈ ಕಥೆ ಹುಟ್ಟಿಕೊಳ್ಳೋಕೆ ಕಾರಣ ಅನಂತ್‌ನಾಗ್. ಅವರು ಮಾಡಿದ “ಲಂಬೋದರ’ ಪಾತ್ರ ಮಜವಾಗಿತ್ತು. ಅದೇ ಹೆಸರು ಇಟ್ಟುಕೊಂಡು ಇಲ್ಲಿ ಕಥೆಯನ್ನೇ ಹಾಸ್ಯಮಯವಾಗಿ ಹೇಳಿದ್ದೇನೆ. ಸಾಮಾನ್ಯವಾಗಿ ಟೆಕ್ಕಿಗಳು ಲಂಡನ್‌ಗೆ ಹೋಗ್ತಾರೆ. ಇಲ್ಲಿ ನಾಯಕ ಟೆಕ್ಕಿ ಅಲ್ಲ. ಆದರೂ ಲಂಡನ್‌ಗೆ ಯಾಕೆ ಹೋಗ್ತಾನೆ ಎಂಬುದೇ ಸ್ವಾರಸ್ಯಕರವಾಗಿರುತ್ತೆ’ ಎಂದರು ನಿರ್ದೇಶಕರು.
ನಾಯಕ ಸಂತು ಅವರು ಐಟಿ ಫಿಲ್ಡ್‌ನಲ್ಲಿದ್ದವರು. ಇಂಗ್ಲೆಂಡ್ ನಲ್ಲಿದ್ದಾಗ ಅವರು ಅಲ್ಲಿನ ಕನ್ನಡಿಗರನ್ನೆಲ್ಲಾ ಒಂದೆಡೆ ಸೇರಿಸಿ, ಹಬ್ಬ-ಹರಿದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರಂತೆ. ಆ ಮೂಲಕ ಅವರಿಗೆ ಸಿನಿಮಾ ಆಸೆ ಚಿಗುರಿ, ಅದೀಗ ಹೀರೋ ಆಗುವ ಹಂತಕ್ಕೆ ಬಂದು ನಿಂತಿದೆ. “ನಿರ್ದೇಶಕರು ಪರಿಚಯವಾಗಿ, ಕಥೆ ಹೇಳಿದಾಗ, ನಾನು ಯುಕೆಯಲ್ಲಿದ್ದ ಕೆಲಸ ಬಿಟ್ಟು ಬಂದೆ. ಲಂಬೋದರನ ಪಾತ್ರ ಹಾಸ್ಯದ್ದು. ಹಾಗಾಗಿ, ಅದಕ್ಕೆ ಪಕ್ಕಾ ತಯಾರಿ ಮಾಡಿಕೊಂಡಿದ್ದೇನೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಡ್ಯಾನ್ಸ್ ಕೂಡ ಇದೆ. ಚಿಕ್ಕದ್ದೊಂದು ಚೇಸಿಂಗ್ ಕೂಡ ಇರುತ್ತೆ. ಅದೊಂದು ತಮಾಷೆಯ ಚೇಸಿಂಗ್. ಈಗಾಗಲೇ ಎಲ್ಲವೂ ತಯಾರಿಯಲ್ಲಿದ್ದು, ಇಷ್ಟರಲ್ಲೇ ಚಿತ್ರೀಕರಣಕ್ಕೆ ಹೋಗುವುದಾಗಿ ಹೇಳಿಕೊಂಡರು ಸಂತು.
ಪ್ರಣವ್ ಸಂಗೀತ ನೀಡುತ್ತಿದ್ದಾರೆ. ಕಳೆದ ಹನ್ನೆರೆಡು ವರ್ಷಗಳಿಂದಲೂ ಅವರು ಮ್ಯೂಸಿಕ್ ಅಕಾಡೆಮಿ ನಡೆಸುತ್ತಿದ್ದು, ಹಲವು ಸಾಕ್ಷ್ಯಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ನಾಲ್ಕು ಹಾಡುಗಳು ಕಥೆಗೆ ಪೂರಕವಾಗಿವೆ. ಸಿಂಪಲ್ ಸುನಿ ಮತ್ತು ಜಯಂತ್ ಕಾಯ್ಕಿಣಿ ಅವರು ಗೀತೆ ರಚಿಸುತ್ತಿದ್ದಾರೆ. ಚಿತ್ರಕ್ಕೆ “ಬಿಗ್‌ಬಾಸ್’ ಮನೆಗೆ ಹೋಗಿದ್ದ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಅಚ್ಯುತ ತಂದೆ ಪಾತ್ರ ಮಾಡಿದರೆ, ಸಾಧುಕೋಕಿಲ, ಸಂಪತ್‌ರಾಜ್ ಇತರರು ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಮತ್ತು ಲಂಡನ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಫಣಿದರ್ ಛಾಯಾಗ್ರಹಣವಿದೆ.