Advertisement
ಇಡೀ ಸಿನಿಮಾದ ಮೂಲ ಸದ್ಗುಣ ಮತ್ತು ದುರ್ಗುಣ. ಇದನ್ನು ಪ್ರೇಮ್ ತಮ್ಮದೇ ಶೈಲಿಯಲ್ಲಿ ತೋರಿಸುತ್ತಾ ಹೋಗಿದ್ದಾರೆ. ಈ ಹಾದಿಯಲ್ಲಿ ಪ್ರೇಕ್ಷಕರಿಗೆ ಖುಷಿ, ಸಂತೋಷ, ನೋವು, ನಲಿವು, ಕಾತರ ಎಲ್ಲವೂ ಸಿಗುತ್ತದೆ. ಪ್ರೇಮ್ ಮಾಡಿಕೊಂಡಿರೋದು ಒಂದು ಹುಡುಕಾಟದ ಕಥೆಯನ್ನು. ಚಿಕ್ಕ ಹಳ್ಳಿಯಿಂದ ಆರಂಭವಾಗುವ ಈ ಹುಡುಕಾಟ ದೇಶ-ವಿದೇಶಗಳನ್ನು ಸುತ್ತಿಕೊಂಡು ಮತ್ತೆ ಹಳ್ಳಿಗೆ ಬಂದು ನಿಲ್ಲುತ್ತದೆ. ಇಷ್ಟು ಹೇಳಿದ ಮೇಲೆ ಸಿನಿಮಾದ ಅದ್ಧೂರಿತನದ ಬಗ್ಗೆ ಹೇಳಬೇಕಿಲ್ಲ.
Related Articles
Advertisement
ಹಾಗಾದರೆ ಮಗ ಯಾರು? ಶಿವರಾಜಕುಮಾರ್ ಅಥವಾ ಸುದೀಪ್? ಎಂದು ನೀವು ಕೇಳಬಹುದು. ಅದನ್ನು ನೀವು ಥಿಯೇಟರ್‌ನಲ್ಲೇ ನೋಡಬೇಕು. ಸಾಮಾನ್ಯವಾಗಿ ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಮಾಸ್, ಪಂಚಿಂಗ್ ಸಂಭಾಷಣೆಗಳಿರುತ್ತವೆ. ಈ ಬಾರಿ ಪ್ರೇಮ್ ಮಾತು ಕಮ್ಮಿ ಮಾಡಿದ್ದಾರೆ. ಮಾತಿಗಿಂತ ದೃಶ್ಯಗಳ ಮೂಲಕವೇ ಎಲ್ಲವನ್ನು ಹೇಳಲು ಪ್ರಯತ್ನಿಸಿದ್ದಾರೆ. ಹಾಗಂತ ಪಂಚಿಂಗ್ ಡೈಲಾಗ್ ಇಲ್ಲವೆಂದಲ್ಲ. ಅಲ್ಲಲ್ಲಿ ಬಂದು ಹೋಗುತ್ತವೆ. ಇಬ್ಬರು ಸ್ಟಾರ್ ನಟರನ್ನಿಟ್ಟುಕೊಂಡು ಸಿನಿಮಾ ಮಾಡುವಾಗ ಯಾರು ಹೆಚ್ಚು, ಯಾರು ಕಮ್ಮಿ ಎಂಬ ಪ್ರಶ್ನೆ ಬರುತ್ತದೆ.
ಇಲ್ಲಿ ಇಬ್ಬರ ಅಭಿಮಾನಿಗಳನ್ನು ತೃಪ್ತಪಡಿಸಲು ಪ್ರೇಮ್ ಪ್ರಯತ್ನಿಸಿದ್ದಾರೆ. ಇನ್ನು, ಚಿತ್ರದಲ್ಲಿ ಹಲವು ಪಾತ್ರಗಳು ಬಂದು ಹೋದರೂ ಅವ್ಯಾವು ನಿಮ್ಮ ನೆನಪಲ್ಲಿ ಉಳಿಯುವುದಿಲ್ಲ. ಮಿಥುನ್ ಚಕ್ರವರ್ತಿ, ಶ್ರೀಕಾಂತ್, ಕುರಿ ಪ್ರತಾಪ್, ಆ್ಯಮಿ ಜಾಕ್ಸನ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಆದರೆ, ಸಿನಿಮಾ ನೋಡಿ ಹೊರಬಂದಾಗ ನಿಮಗೆ ಕೇವಲ ಎರಡೇ ಎರಡು ಮಾತ್ರ ನೆನಪಲ್ಲಿ ಉಳಿಯುತ್ತದೆ – ಸುದೀಪ್-ಶಿವರಾಜಕುಮಾರ್.
ಉಳಿದ ಪಾತ್ರಗಳನ್ನು ಪ್ರೇಮ್ ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ಚಿತ್ರವನ್ನು ಮಕ್ಕಳೂ ಇಷ್ಟಪಡಬೇಕೆಂಬ ಕಾರಣಕ್ಕೆ ಪ್ರೇಮ್ ಸಾಕಷ್ಟು ದೃಶ್ಯಗಳಲ್ಲಿ ಗ್ರಾಫಿಕ್ ಮೊರೆ ಹೋಗಿದ್ದಾರೆ. ಇಲ್ಲಿ ನೀವು ಜಿಂಕೆ, ಡೈನೋಸಾರ್, ನವಿಲು ಎಲ್ಲದರ ಆಟವನ್ನು ಕಾಣಬಹುದು. ಸಿನಿಮಾದ ಸರಿತಪ್ಪುಗಳು ಏನೇ ಇರಬಹುದು, ಥಿಯೇಟರ್‌ನಿಂದ ಹೊರಬರುವಾಗ ಪ್ರೇಕ್ಷಕನ ಕಣ್ಣಂಚಲ್ಲಿ ಒಂದನಿ ಜಿನುಗಿರುತ್ತದೆ.
ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ನಟಿಸಿದ್ದಾರೆ- ಶಿವರಾಜ್‌ಕುಮಾರ್ ಹಾಗೂ ಸುದೀಪ್. ಸುದೀಪ್ ಸಖತ್ ಸ್ಟೈಲಿಶ್ ಪಾತ್ರದಲ್ಲಿ ಮಿಂಚಿದರೆ, ಶಿವರಾಜಕುಮಾರ್ ಹಳ್ಳಿ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ಹೊಂದಿಕೊಂಡಿಲ್ಲ. ಭಾಷೆಯ ಸಮಸ್ಯೆಯಿಂದಲೋ ಏನೋ, ಸಂಭಾಷಣೆಗೂ ಅವರ ಮುಖಭಾವಕ್ಕೂ ಹೊಂದಿಕೆಯಾಗಿಲ್ಲ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಇಷ್ಟವಾಗುತ್ತದೆ. ಚಿತ್ರಕ್ಕೆ ಗಿರಿ ಛಾಯಾಗ್ರಹಣವಿದೆ.
ಚಿತ್ರ: ದಿ ವಿಲನ್ ನಿರ್ಮಾಣ: ಸಿ.ಆರ್.ಮನೋಹರ್
ನಿರ್ದೇಶನ: ಪ್ರೇಮ್
ತಾರಾಗಣ: ಶಿವರಾಜಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ ಮತ್ತಿತರರು. * ರವಿಪ್ರಕಾಶ್ ರೈ