Advertisement

ಉಪನಿಷತ್ತಿನ ಕಥಾ ಸಾರ

12:04 PM Apr 15, 2020 | mahesh |

ಹಿಂದೊಮ್ಮೆ ಮಾನವರೆಲ್ಲಾ ಯಥೇಚ್ಛವಾಗಿ ಸಂಪಾದಿಸುತ್ತಿದ್ದರೂ, ಇನ್ನೂ ತೃಪ್ತಿಯಿಲ್ಲದಂತೆ ದುಡಿಯತೊಡಗಿದರು. ಇನ್ನೊಂದೆಡೆ, ರಾಕ್ಷಸರು ಯಥೇಚ್ಛವಾಗಿ ದುಷ್ಟಕರ್ಮಗಳನ್ನು ಮಾಡತೊಡಗಿದ್ದರು. ಹಿಂಸಿಸುವುದು, ಅನ್ಯರನ್ನು ನೋಯಿಸುವುದು, ಅನ್ಯಾಯ ಮಾಡುವುದರಲ್ಲೇ ಸುಖಪಡುತ್ತಲಿದ್ದರು.

Advertisement

ಮತ್ತೂಂದೆಡೆ ದೇವತೆಗಳು, ಇಂದ್ರಿಯಗಳಿಗೆ ಕಡಿವಾಣವೇ ಇಲ್ಲದಂತೆ ವೈಭೋಗ, ವ್ಯಸನಗಳಲ್ಲಿ ತಲ್ಲೀನರಾಗಿದ್ದರು. ಹೀಗೆ ದೇವತೆಗಳು, ರಾಕ್ಷಸರು, ಮಾನವರು ಮೂರು ವರ್ಗದವರೂ ಮನಸೋ ಇಚ್ಛೆಯಾಗಿ ವರ್ತಿಸಿದರೂ, ಅವರಿಗೆ ನೆಮ್ಮದಿ ದೊರಕುತ್ತಿರಲಿಲ್ಲ. ಅತಿಯಾದ ಸುಖವೂ ದುಃ ಖಕ್ಕೆ ಕಾರಣವಂತೆ. ಹಾಗೆ ಯಥೇಚ್ಛ ಸುಖದ ಅನುಭವದಲ್ಲಿದ್ದರೂ, ದುಃಖ ತಪ್ತರಾಗಿ, ಮೂರೂ ವರ್ಗದವರು ಬ್ರಹ್ಮನಲ್ಲಿಗೆ ಹೋಗಿ ತಮ್ಮ ಸಮಸ್ಯೆಯನ್ನಿಟ್ಟರು. ಬ್ರಹ್ಮನು ಇವರೆಲ್ಲರ ವಿಶೇಷತೆಗಳನ್ನು ಗಮನಿಸಿ, ಪರಿಹಾರಸೂಚಕವಾಗಿ ಒಂದೇ ಒಂದು ಅಕ್ಷರವನ್ನು ಅರುಹಿದ. “ದ’ ಎಂಬುದಾಗಿ. “ದ’ ಎಂಬ ಒಂದೇ ಶಬ್ದವನ್ನು
ಮೂವರೂ ಅವರ ಸಂಸ್ಕಾರಕ್ಕೆ ಅನುಗುಣವಾಗಿ ಗ್ರಹಿಸಿದರು. ಇಂದ್ರಿಯಗಳು ಕೆಲಸ ಮಾಡುವುದು ದೇವತೆಗಳ ಶಕ್ತಿಯಿಂದ. ಅದನ್ನು ಅವರೇ ನಿಗ್ರಹಿಸಬೇಕು. ಹಾಗೆಂದೇ ದೇವತೆಗಳು “ದ’ ಅಂದರೆ “ದಮ್ಯತಾ’ ಎಂಬುದಾಗಿ ಗ್ರಹಿಸಿದರು. ಇಂದ್ರಿಯ ನಿಗ್ರಹ ಮಾಡಿ ಚಾಪಲ್ಯವನ್ನು ತೊರೆದು ನೆಮ್ಮದಿ ಕಂಡುಕೊಂಡರು.

ಕ್ರೌರ್ಯ ಅಸುರೀ ಪ್ರವೃತ್ತಿ. ಅದನ್ನು ಆ ಶಕ್ತಿಗಳೇ ನಿಗ್ರಹಿಸಬೇಕು. ಹಾಗಾಗಿ ಅಸುರರು, “ದ- ದಯಾ’ ಎಂಬುದಾಗಿ ಅರ್ಥೈಸಿಕೊಂಡರು. ಎಲ್ಲರಲ್ಲೂ ದಯೆ
ತೋರಿಸುತ್ತಾ, ಸಾತ್ವಿಕ ಮನೋಭಾವ ಹೊಂದಿ ನೆಮ್ಮದಿ ಕಂಡರು. ಮಾನವರಿಗೆ ಸಂಪತ್ತಿನ ಸಂಗ್ರಹ ಸ್ವಭಾವ. ಅವರು “ದ-ದಾನಂ’ ಎಂಬುದಾಗಿ ಅರ್ಥೈಸಿಕೊಂಡು, ಸ್ವಾರ್ಥಕ್ಕಾಗಿ ಕೂಡಿಟ್ಟುಕೊಳ್ಳದೆ ಪರರಿಗೂ ಹಂಚುತ್ತಾ, ಪ್ರಕೃತಿಯಲ್ಲಿಯ ಸಮತೋಲನ ಕಾಪಾಡಿಕೊಂಡರು. ದೇವತಾಭಾವ, ಆಸುರಿಭಾವ, ಮಾನುಷಿಭಾವ ಎಲ್ಲವೂ, ನಮ್ಮಲ್ಲಿ ಆಗಾಗ ಕಾಣುವಂಥದ್ದೇ. ಇಂದ್ರಿಯ ಸುಖಕ್ಕೆ ಅಲ್ಲಲ್ಲಿ ಕಡಿವಾಣ ಹಾಕುತ್ತಾ, ಅನ್ಯರಿಗೆ ಹಿಂಸೆ ಮಾಡದೆ, ತಮಗೇ ತಾವು ಹಿಂಸೆಗೈದುಕೊಳ್ಳದೆ ದಯಾಪರ ರಾಗಿ, ದಾನ ಮಾಡುತ್ತ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು ಎಂಬುದೇ, ಈ ಉಪನಿಷತ್ತಿನ ಕಥೆಯ ಸಾರ.

ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನ ಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next