Advertisement

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

01:14 PM Jun 29, 2024 | Team Udayavani |

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಅರೇ ! ಏನ್‌ ಹೇಳ್ತಿರಿ, ವೇದ ಎಂದಿಗಾದರೂ ಸುಳ್ಳಾಗುವುದೇ? ಹಾಗೆ ಹೇಳೋದೂ ತಪ್ಪು ಎಂಬುದಾದರೆ ಅದು ಸತ್ಯವೇ ಹೌದು. ವೇದ ಸುಳ್ಳು ಎಂದಾದಾಗ ಗಾದೆಯೂ ಸುಳ್ಳೇ ಆಗುವುದು. ವೇದವೂ ಸುಳ್ಳಾಗದು ಹಾಗೆಯೇ ಗಾದೆಯೂ ಸುಳ್ಳಲ್ಲ. ವೇದಗಳಷ್ಟೇ ಸತ್ಯ ದಾಸರಪದಗಳೂ ಸಹ. ದಾಸರ ಪದಗಳು ಅನುಭವ ವಾಣಿಗಳು. ಅದರಂತೆಯೇ ಗಾದೆಗಳೂ ಸಹ. ಅವೂ ಅನುಭವದ ವಾಣಿಗಳೇ. ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ ಎಂಬ ದಾಸರ ಪದದ ರೀತಿಯಲ್ಲಿ ಗಾದೆಯ ಬಗ್ಗೆ ಹೇಳಿದ ರೀತಿಯ ಕಾರಣವೇ ಇದು. ಸದ್ಯಕ್ಕೆ ವೇದಗಳ ಮಾತು ಮತ್ತು ದಾಸರಪದಗಳನ್ನು ಆ ಕಡೆ ಇರಿಸಿ, ಗಾದೆಯ ಬಗ್ಗೆ ಮಾತ್ರ ಹೇಳೋಣ.

Advertisement

ಒಂದೆರಡು ಗಾದೆಗಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು, ಅದನ್ನು ಬಗೆದು, ಕೊಂಚ ಭಿನ್ನವಾಗಿ ಅರ್ಥೈಸಿಕೊಳ್ಳೋಣ. ಬಗೆದು ಎಂದು ಹೇಳೋದ್ರಿಂದ ಗಾದೆಯನ್ನು ಸುಳ್ಳು ಎಂದು ಸಾಧಿಸುವ ಅಥವಾ ಸಾಬೀತು ಮಾಡುವ ಉದ್ಧಟತನ ಮಾಡುತ್ತಿಲ್ಲ ಬದಲಿಗೆ ಮುಂಚಿನಿಂದಲೂ ಅರಿತು ಬೆಳೆದಿರುವ ವಿಷಯವನ್ನು ಬೇರೊಂದು ಕೋನದಿಂದ, ಬೇರೊಂದು ಕಿಟಕಿಯಿಂದ ನೋಡುವ ಯತ್ನ ಮಾಡುತ್ತಾ ಮತ್ತಷ್ಟು ವಿಷಯ ಕಲಿಯೋಣ.

ಅನಾಥೋ ದೈವ ರಕ್ಷಕ: ಎಂಬ ಗಾದೆಯ ಮಾತನ್ನು ಕೇಳಿಯೇ ಇರುತ್ತೀರಾ. ಇಲ್ಲಿ ಮೂರು ವಿಷಯಗಳಿವೆ. ಮೊದಲಿಗೆ “ಅನಾಥ’, ಅನಂತರ “ದೈವ’ ಮತ್ತು ಕೊನೆಯದಾಗಿ “ರಕ್ಷಕ’. ಅನಾಥ ಎಂದರೆ ಏನು ಅಥವಾ ಯಾರು? ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ತಂದೆ-ತಾಯಿ ಇಲ್ಲದವರು ಅನಾಥರು. ಇದು ಪೂರ್ಣಸತ್ಯವಲ್ಲ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಇರುವಾಗ ಅವರೇನೂ ಅನಾಥರಲ್ಲ.

ಒಂದೊಮ್ಮೆ ಅವರೂ ಇಲ್ಲ ಎಂದರೆ ಸ್ನೇಹಿತರು, ಬಂಧುಬಳಗ ಇರುತ್ತಾರಲ್ಲವೇ? ಸರಿ ಬಿಡಿ, ಇವರಾರೂ ಇಲ್ಲದಿರುವ ನತದೃಷ್ಟರೂ ಇರುತ್ತಾರೆ ಅಲ್ಲವೇ? ಅವರೇ ಅನಾಥರು. ಸಿರಿನಾಥನೆಂದರೆ ಆ “ದೈವ. ಮೂರು ಪದಗಳ ಎರಡನೆಯ ಸೊಬಗೇ ದೈವ. ದಿಕ್ಕಿಲ್ಲದ ಅನಾಥರಿಗೆ ನಾಥನೇ ಆ ಸಿರಿನಾಥ. ಆ ಶ್ರೀಯ ನಾಥ. ಅವನೇ ದೈವ. ನಾಥನೆಂದರೆ ಗಂಡ ಎಂಬ ಅರ್ಥವಿರುವಂತೆ ಯಜಮಾನ ಎಂಬ ಅರ್ಥವೂ ಇದೆ. ಸೃಷ್ಟಿಕರ್ತನಿಗೇ ಯಜಮಾನನಿವ ಎಂದ ಮೇಲೆ, ಆ ಸೃಷ್ಟಿಕರ್ತನ ಮಕ್ಕಳಾದ ನಮಗೂ ಅವನು ನಾಥನಲ್ಲವೇ? ಯಜಮಾನನಲ್ಲವೇ?

ಈಗ “ರಕ್ಷಕ’ ಎಂದರೆ? ಬಲು ಸರಳ, ಯಾರು ರಕ್ಷಿಸುವನೋ ಅವನೇ ರಕ್ಷಕ. ಯಾರು ರಕ್ಷಿಸುವುದಿಲ್ಲವೋ ಅವನು ಅರಕ್ಷಕ ಅಲ್ಲ. ಪೊಲೀಸರೂ ರಕ್ಷಕರು ಆದರೆ ಅವರನ್ನು ನಾವು ರಕ್ಷಕರು ಎಂದು ಕರೆಯದೇ “ಆರಕ್ಷಕರು’ ಎಂದೇಕೆ ಕರೆಯುತ್ತೇವೆ ಎಂಬುದಕ್ಕೆ ನೀವೇ ಉತ್ತರಿಸಿ. ಇರಲಿ, ಈ ರಕ್ಷಕರಲ್ಲದ ಅರಕ್ಷಕರು ಯಾರು? ವೀಕ್ಷಕರು ಮತ್ತು ಪ್ರೇಕ್ಷಕರೇ ಈ ಅರಕ್ಷಕರು. ಕೆಲವೊಮ್ಮೆ ಇವರನ್ನು ಮೂಕಪ್ರೇಕ್ಷಕರು ಎಂದೂ ಕರೆಯುತ್ತೇವೆ. ಅನ್ಯಾಯವಾಗುವಾಗ ಬೇರೆ ದಾರಿಯಿಲ್ಲದೇ ಸುಮ್ಮನೆ ನೋಡುವ ಅಥವಾ ದುರ್ಘ‌ಟನೆ ನಡೆದಿ¨ªಾಗ ಸೆಲ್ಫಿ ತೆಗೆದುಕೊಳ್ಳುವವರಿಗೆ ಮಾತ್ರ ಈ ಮಾತು ಸಲ್ಲುತ್ತದೆ ಬಿಡಿ.

Advertisement

ಇದೆಲ್ಲವೂ ನಿಮಗೆ ಗೊತ್ತಿರುವ ವಿಷಯವೇ, ನಾನದಕ್ಕೆ ಅಕ್ಷರರೂಪ ಕೊಟ್ಟೆ ಅಷ್ಟೇ. ಈಗ ಈ ಪ್ರಶ್ನೆಗೆ ಉತ್ತರ ಹುಡುಕುವ. ಸೃಷ್ಟಿಕರ್ತನಿಗೇ ನಾಥನಾದವನು ನಮಗೂ ತಂದೆಯಾದ ಮೇಲೆ ನಾವು ಅನಾಥ ಹೇಗಾಗುತ್ತೇವೆ? ಹಾಗಾಗಿ ನಾವಿಲ್ಲಿ ಅರ್ಥೈಸಿಕೊಳ್ಳಬೇಕಾಗಿರುವ ವಿಷಯ ಎಂದರೆ ಅನಾಥ ಎಂದರೆ ನಾಥನಿಲ್ಲದವರು. ನಾಥ ಎಂದರೆ ಇಲ್ಲಿ ಮಾನವರು. ಇಲ್ಲಿನ ನಾಥನೆಂದರೆ ಆ ಸಿರಿನಾಥನಲ್ಲ. ಸಿರಿನಾಥನಿರುವಾಗ ಯಾರೂ ಅನಾಥರಲ್ಲ. ನಿಮ್ಮ ನಂಬಿಕೆಯ ದೈವ ಯಾರೇ ಆಗಿರಲಿ ಅವರೆಲ್ಲರನ್ನೂ “ದೈವ’ ಎಂದೇ ಕರೆದ ಮೇಲೆ ಅವನೇ ಎಲ್ಲರ “ರಕ್ಷಕ’ ಎಂಬುದೇ ಈ ಗಾದೆ ಅನಾಥೋ ದೈವ ರಕ್ಷಕ: ಹೂ ಅಂತೀರಾ? ಊಹೂ ಅಂತೀರಾ?

ದೈವದ ಬಗ್ಗೆ ಹೇಳುವಾಗ ಈಗ ಮಗದೊಂದು ಗಾದೆಯತ್ತ ಹೊರಳೋಣ ಬನ್ನಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಹೀಗೆ ಹೇಳಿದ್ದರೆ ಬಲು ಸುಲಭವಾಗಿ ಇರುತ್ತಿತ್ತು ಆದರೆ ಸ್ವಲ್ಪವೇ ವ್ಯತ್ಯಾಸ ಇರುವುದರಿಂದ ಅಲ್ಲೊಂದು ಗೊಂದಲವಿದೆ. ಮೊದಲಿಗೆ ಈ ಗಾದೆ ಮಾತುಗಳ ಹುಟ್ಟು ಎಂದು ಮತ್ತು ಯಾರಿಂದ ಎಂಬುದು ಯಾರಿಗೂ ಗೊತ್ತಿಲ್ಲ. “ಅಕ್ಕಿಯೊಳಗನ್ನವನು ಮೊದಲಾರು ಕಂಡವರು’ ಎಂಬಂತೆ “ಗಾದೆಗಳ ನುಡಿಗಳನ್ನು ಮೊದಲಾರು ನುಡಿದವರು?’ ಎಂಬ ಪ್ರಶ್ನೆಗೆ ಈ ಜನ್ಮದಲ್ಲಿ ತಿಳಿಯುವುದಿಲ್ಲ. ಇರಲಿ, ಈಗ ಗಾದೆಯ ಮಾತಿಗೆ ಸಾಗೋಣ.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂಬುದು ಒಂದು ಮಾತು. ಮಗದೊಂದು ಮಾತು ಎಂದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ? ಎಂಬುದು. ಹುಲ್ಲು ಎಂಬುದನ್ನು ಹಸುರು ಹುಲ್ಲು ಅಥವಾ ಒಣಹುಲ್ಲು ಎಂದುಕೊಂಡವರು ದೇವ ನಮ್ಮನ್ನು ಈ ಭುವಿಗೆ ನೀಡಿದ ಮೇಲೆ ಹುಲ್ಲು ಉಣಿಸುವನೇ ? ಇಲ್ಲ ಖಂಡಿತ ಉತ್ತಮವಾದ ನಾವುಣ್ಣುವ ಆಹಾರವನ್ನೇ ನೀಡೋದು ಎಂಬ ಅರ್ಥ ನೀಡುತ್ತಾರೆ. ಇಂದು ನಾವುಣ್ಣುವ ಆಹಾರಕ್ಕೆ ತಲುಪಲು ದಾಟಿದ ಹಂತಗಳೆಷ್ಟೋ ಅಲ್ಲವೇ? ಮಾನವ ಇಲ್ಲಿಗೆ ಬಂದಾಗ Vegan ಆಗಿ ಬರಲಿಲ್ಲ. ಇಲ್ಲಿ ಹಲವಾರು ವಾದಯೋಗ್ಯ ವಿಷಯಗಳಿವೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂಬ ಮಾತಿನಲ್ಲಿ ಮಾನವರು ಎಂಬುದು ಇಲ್ಲವೇ ಇಲ್ಲ ಅಲ್ಲವೇ?

ಹುಲ್ಲನ್ನೇ ತಿನ್ನುವ ಪ್ರಾಣಿವರ್ಗವನ್ನೂ ಲೋಕಕ್ಕೆ ತಂದವನು ಅವನೇ ಅಲ್ಲವೇ? ಹುಲ್ಲನ್ನೇ ತಿನ್ನುವ ಪ್ರಾಣಿಗೆ ಹುಲ್ಲನ್ನು ನೀಡದೆ ಇರುವನೇ ದೈವ? ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ? ಎಂಬುದು ಕೊಂಚ ಹೆಚ್ಚು ಅರ್ಥವುಳ್ಳ ಮಾತು ಇರಬಹುದು. ಮಕ್ಕಳ ಜವಾಬ್ದಾರಿ ಅಪ್ಪ-ಅಮ್ಮನದು ಎಂಬರ್ಥದÇÉೇ ಆಲೋಚಿಸಿದರೆ, ಆ ದೇವ ನಮ್ಮನ್ನಿಲ್ಲಿಗೆ ಕಳುಹಿಸಿದ ಮೇಲೆ ಉಣ್ಣುವ ಆಹಾರಕ್ಕೂ ಏನೋ ದಾರಿ ಮಾಡಿಯೇ ಕಳಿಸಿರುತ್ತಾನೆ. ಅದನ್ನು ಕಂಡುಕೊಳ್ಳುವುದು ಅಥವಾ ಗಳಿಸುವುದು ನಮಗೆ ಬಿಟ್ಟಿದ್ದು. ದಾರಿ ತೋರಿಹನೇ ಹೊರತು, ತಾನೇ ಕೆಳಗಿಳಿದು ಬಂದು ತಿನ್ನಿಸಲಾರ. ಎಲ್ಲರೂ ಗೋರಾ ಕುಂಬಾರರು ಆಗುವುದಿಲ್ಲ.

ಅನಾಥೋ ದೈವ ರಕ್ಷಕ: ಎನ್ನುವಾಗ ಇಹಲೋಕದ ಅನಾಥರಿಗೆ ಆ ದೇವನೇ ರಕ್ಷಕ ಮತ್ತು ರಕ್ಷಕನಾದ ಅವನು ಏನಾದರೂ ಒಂದು ಆಹಾರ ನೀಡದೇ ಇರಿಸುವುದಿಲ್ಲ ಎಂಬುದೇ ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ?. ಇದಿಷ್ಟೂ ನನ್ನ ಅನಿಸಿಕೆ. ನೀವೇನಂತೀರಾ?

ಕೊನೆ ಹನಿ: ಗಾದೆ ಎಂಬ ಪದವನ್ನೇ ಕೊಂಚ ಬಗೆಯೋಣ ಅಂತ ಹುಡುಕಿದಾಗ ದೊರೆತ ಮಾಹಿತಿ ಹೀಗಿದೆ. ನಮಗೆಲ್ಲ ಅರಿವಿರುವಂತೆ ಗಾದೆ ಎಂದರೆ Proverb. ಒಂದು action ಎಂಬುದನ್ನು ಹೇಳೋದು Verb. ಈ action ಹೇಗಾಯ್ತು ಅಥವಾ ಆಗುತ್ತಿದೆ ಎಂದು ಹೇಳೋದು Adverb. ಇವೆರಡಕ್ಕೂ Proverbಗೂ ಏನು ಸಂಬಂಧ? ಹೋಗಲಿ ಬಿಡಿ, ವಿಷಯ ಅದಲ್ಲ. ಗಾದೆ ಎಂದರೆ Proverb ಅದರಂತೆಯೇ Adage ಎಂದರೂ ಗಾದೆ. ಸಮಾನಾರ್ಥಕ ಪದಗಳು. Adage ಎಂಬುದೇ ಉಗಮ ಪದವಲ್ಲ. ಲ್ಯಾಟಿನ್‌ ಭಾಷೆಯಲ್ಲಿ ಒಂದು ಪದವಿದ್ದು ಅದು ಅನಂತರ ಕೊಂಚ ಮಾರ್ಪಾಡಾಗಿ ಅನಂತರ ಅದು ಫ್ರೆಂಚ್‌ ರೂಪದಲ್ಲಿ ಮತ್ತೇನೋ ಆಗಿ ಇಂದು Adage ಆಗಿದೆಯಂತೆ. ವಿಷಯ ಇದೂ ಅಲ್ಲ. ಒಂದೇ ಸಾಲಲ್ಲಿ ಏನು ಹೇಳಹೊರಟೆ ಎಂದರೆ, Adage ಎಂಬ ಪದದ ಅಕ್ಷರಗಳನ್ನು ಕೊಂಚ ಗಲಗಲ ಅಲ್ಲಾಡಿಸಿದರೆ Gaadeಅಂತ ಆಗುತ್ತದೆ ಅಲ್ಲವೇ?

*ಶ್ರೀನಾಥ್‌ ಭಲ್ಲೇ

Advertisement

Udayavani is now on Telegram. Click here to join our channel and stay updated with the latest news.

Next