Advertisement

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

09:20 PM Mar 27, 2024 | Team Udayavani |

ಮೂಡುಬಿದಿರೆ: ಐನೂರು ಪುಟಗಳ ‘ಬೃಹತ್ ವಿವಿಧ ಜೈನ ಆರಾಧನಾ ಕೋಶ’ ಸಂಪಾದಿಸಿ ಪ್ರಕಟಿಸಿದ್ದ ಮೂಡುಬಿದಿರೆ ಹಿರೇ ಅಮ್ಮನವರ ಬಸದಿ ಪ್ರಧಾನ ಪುರೋಹಿತರಾಗಿ ಸೇವೆ ಸಲ್ಲಿಸಿದ್ದ ಪ್ರತಿಷ್ಠಾಪನಾಚಾರ್ಯ, ಆರಾಧನಾ ಸಾಹಿತ್ಯ ಋಷಿ ಬಿರುದಾಂಕಿತ, ಸಾಹಿತಿ ಎಂ. ಧರ್ಮರಾಜ ಇಂದ್ರ (೯೪) ಇಲ್ಲಿನ ಪೇಪರ್‌ಮಿಲ್ ಬಳಿಯ ತಮ್ಮ ನಿವಾಸದಲ್ಲಿ ಬುಧವಾರ ನಿಧನ ಹೊಂದಿದರು.

Advertisement

ಅವರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಷ್ಟ್ರಭಾಷಾ ವಿಶಾರದರಾಗಿದ್ದ ಅವರು ಐದು ದಶಕಗಳಿಂದ ಬಸದಿಯ ಪುರೋಹಿತರಾಗಿ, ಬಸದಿಯಲ್ಲಿ ಒಂದುಕಾಲದಲ್ಲಿ ನಿಂತು ಹೋಗಿದ್ದ ರಥೋತ್ಸವವನ್ನು ಮತ್ತೆ ಆರಂಭಿಸಿದ್ದರು. ನವರಾತ್ರಿ ಪೂಜೆ, ಲಕ್ಷ ಕುಂಕುಮಾರ್ಚನ ಸಪ್ತಾಹ ಸಹಿತ ವಿವಿಧ ಜೈನ ಧಾರ್ಮಿಕ ಆರಾಧನೆಗಳಲ್ಲಿ ಪುರೋಹಿತರಾಗಿದ್ದರು.

ಹತ್ತಕ್ಕೂ ಅಧಿಕ ಜೈನ ಆರಾಧನಾ ಸಾಹಿತ್ಯ ಕೃತಿಗಳನ್ನು ಅವರು ರಚಿಸಿ, ಸಂಪಾದಿಸಿದ್ದು ಇವುಗಳಲ್ಲಿ `ಪದ್ಮಾವತಿ ದೇವಿ ಚರಿತ್ರೆ’ ಕನ್ನಡ, ಹಿಂದಿ, ಇಂಗ್ಲೀಷ್ ಸಹಿತ ಏಳು ಭಾಷೆಗಳಲ್ಲಿ ಪ್ರಕಟವಾಗಿದೆ.

ಜಿನಭಕ್ತಿಗೀತೆಗಳ ರಚನೆ, ಹಾಡುಗಾರರಾಗಿ, ಹಾರ್ಮೋನಿಯಂ ವಾದಕರಾಗಿಯೂ ಪ್ರತಿಭೆ ಮೆರೆದಿದ್ದರು.

Advertisement

1948 ರಲ್ಲಿ ಮೂಡುಬಿದಿರೆಯಲ್ಲಿ ಫೇಮಸ್ ಸೈಕಲ್ ಸ್ಟೋರ್ ಸ್ಥಾಪಿಸಿ, ಅಂದಿನ ದಿನಗಳಲ್ಲಿ ಜರ್ಮನ್ ಪೆಟ್ರೋಮ್ಯಾಕ್ಸ್, ಸೌಂಡ್ ಸಿಸ್ಟಮ್ ಬಾಡಿಗೆಗೆ ಒದಗಿಸುವ ವ್ಯವಹಾರ ನಡೆಸುತ್ತಿದ್ದರು. ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ, ಜೀವವಿಮಾ ಪ್ರತಿನಿಧಿಯೂ ಆಗಿದ್ದು ಮೂಡುಬಿದಿರೆ ಠಾಣೆಯಲ್ಲಿ ಟೈಪಿಂಗ್ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ಜಾಬ್ ಟೈಪಿಂಗ್ ಮಾಡಿಕೊಡುತ್ತಿದ್ದರು.

ಸಿದ್ಧಾಂತ ದರ್ಶನ ವಿಗ್ರಹಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಶ್ರೀ ಹನುಮಂತ ದೇವರಿಗೆ 1000 ಸೀಯಾಳ ಸಮರ್ಪಣೆಯಾದ ವೇಳೆ ‘ಧರ್ಮರಾಜ ಇಂದ್ರರು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಸ್ವಯಂಸ್ಪೂರ್ತಿಯಿಂದ ಸ್ತುತಿ ರಚಿಸಿ ಹಾಡಿ ಭಕ್ತರ ಗಮನಸೆಳೆದಿದ್ದರು.

ತೌಳವ ಇಂದ್ರ ಸಮಾಜ, ಶ್ರೀ ಜೈನ ಮಠದಿಂದ ಜಿನವಾಣಿ ಪುರಸ್ಕಾರ, ಎಂ.ಸಿ.ಎಸ್. ಬ್ಯಾಂಕಿನ ಸಹಕಾರಿ ಸಪ್ತಾಹ ಗೌರವ, ಮೂಡುಬಿದಿರೆ ಪ್ರೆಸ್ ಕ್ಲಬ್ ಗೌರವ (2023) ಸಹಿತ ಹಲವು ಗೌರವಾದರಗಳಿಗೆ ಅವರು ಪಾತ್ರರಾಗಿದ್ದರು.

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರು ಎಂ.ಡಿ. ಇಂದ್ರರ ನಿಧನಕ್ಕೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next