ಅಮರಾವತಿ: ಲಡ್ಡುಪ್ರಸಾದ ಅಪವಿತ್ರವಾದ ಭಾರೀ ವಿವಾದದ ನಡುವೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಉದ್ದೇಶಿತ ತಿರುಪತಿ ದೇವಸ್ಥಾನದ ಭೇಟಿಯನ್ನು ಶುಕ್ರವಾರ(ಸೆ27) ರದ್ದು ಮಾಡಿದ್ದಾರೆ.
ಪೊಲೀಸರು, ಜಗನ್ ಮತ್ತು ವೈ ಎಸ್ ಆರ್ ಸಿಪಿ ಸದಸ್ಯರಿಗೆ ನೋಟಿಸ್ ನೀಡಿದ ನಂತರ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗನ್,ಆಂಧ್ರದಲ್ಲಿ ರಾಕ್ಷಸ ಆಳ್ವಿಕೆ ಮುಂದುವರಿದಿದೆ. ತಿರುಮಲ ದೇವಸ್ಥಾನಕ್ಕೆ ನನ್ನ ಭೇಟಿಗೆ ಅಡ್ಡಿಪಡಿಸಲು ಸರಕಾರ ಪ್ರಯತ್ನಿಸುತ್ತಿದೆ. ದೇವಾಲಯಕ್ಕೆ ಭೇಟಿ ನೀಡದಂತೆ ನಿರ್ಬಂಧಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ತಮ್ಮ ಪಕ್ಷದ ಸದಸ್ಯರಿಗೆ ನೀಡಲಾದ ನೋಟಿಸ್‌ಗಳನ್ನು ಪ್ರದರ್ಶಿಸಿದರು.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಟಿಡಿಪಿ ವಿರುದ್ಧ ಕಿಡಿ ಕಾರಿ, ”ರಾಜಕೀಯ ಲಾಭಕ್ಕಾಗಿ “ಹಿಂದೂ ಧರ್ಮವನ್ನು ಬಳಸುತ್ತಿದ್ದಾರೆ. ಕೊಳಕು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುವ ಬದಲು ಬಿಜೆಪಿ ಅವರನ್ನು ಬೆಂಬಲಿಸುತ್ತಿದೆ ಎಂದರು.
ಈ ವರ್ಷ ಜುಲೈನಲ್ಲಿ ಕಲಬೆರಕೆ ತುಪ್ಪ ತುಂಬಿದ ಟ್ಯಾಂಕರ್‌ಗಳನ್ನು ತಿರಸ್ಕರಿಸಲಾಗಿತ್ತು. ಪ್ರಶ್ನಾರ್ಹವಾಗಿರುವ ತುಪ್ಪವು ಸಸ್ಯಜನ್ಯಗಳ ಕಲಬೆರಕೆಯಾಗಿತ್ತು. ಪ್ರಾಣಿಗಳ ಕೊಬ್ಬನ್ನು ಲಡ್ಡು ತಯಾರಿಕೆಯಲ್ಲಿ ಎಂದಿಗೂ ಬಳಸಲಾಗಿಲ್ಲ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ದೃಢಪಡಿಸಿದ ವೀಡಿಯೊವನ್ನು ಜಗನ್ ಪ್ಲೇ ಮಾಡಿದರು. ಜವಾಬ್ದಾರಿಯುತ ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
2014 ರಿಂದ 2019 ರವರೆಗಿನ ಚಂದ್ರಬಾಬು ನಾಯ್ಡು ಅವರ ಆಡಳಿತದಲ್ಲಿ ಗುಣಮಟ್ಟದ ಸಮಸ್ಯೆಗಳಿಂದಾಗಿ ಸುಮಾರು 14 ರಿಂದ 15 ತುಪ್ಪದ ಟ್ಯಾಂಕರ್ ಗಳನ್ನು ತಿರಸ್ಕರಿಸಲಾಗಿದೆ. ಅದೇ ರೀತಿ, 2019 ಮತ್ತು 2024 ರ ನಡುವೆ, 18 ತುಪ್ಪದ ಟ್ಯಾಂಕರ್‌ಗಳನ್ನು ತಿರಸ್ಕರಿಸಲಾಗಿದೆ, ಇದು ಪ್ರಮಾಣಿತ ಪ್ರಕ್ರಿಯೆ ಎಂದು ಒತ್ತಿ ಹೇಳಿ “ನಾನು ಹೇಳುತ್ತಿರುವುದು ಸತ್ಯವನ್ನು ಆಧರಿಸಿದೆ” ಎಂದರು.