Advertisement

ಇಂದ್ರಿಯಗಳ ಆಕರ್ಷಣೆಯಿಂದ ಹೊರಬನ್ನಿ: ಸ್ವರ್ಣವಲ್ಲೀ ಶ್ರೀ

07:46 PM Jul 20, 2022 | Team Udayavani |

ಶಿರಸಿ: ಪ್ರತಿಯೊಬ್ಬ ಮನುಷ್ಯನೂ ಕೂಡ ಅತಿಯಾಗಿ ಇಂದ್ರಿಯಗಳ ಆಕರ್ಷಣೆಗೆ ಒಳಗಾಗಬಾರದು. ಅದನ್ನು ವಿವೇಚನೆ ಹಾಗೂ ಭಗವದ್ಭಕ್ತಿಯ ಮೂಲಕ ತಡೆಯಬೇಕು ಎಂದು ಸೋಂದಾ ಶ್ರೀಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ‌ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಿಸಿದರು.

Advertisement

ಸ್ವರ್ಣವಲ್ಲೀ ಮಠದಲ್ಲಿ ಅವರು ತಮ್ಮ 32 ನೇ ಚಾತುರ್ಮಾಸ್ಯದ ನಿಮಿತ್ತ ಶಿರಸಿ ಸೀಮೆಯ ತೆರಕನಳ್ಳಿ ಭಾಗದ ಶಿಷ್ಯ-ಭಕ್ತರು ಸಮರ್ಪಿಸಿದ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.

ಇಂದ್ರಿಯ ನಿಗ್ರಹ ಇಲ್ಲದಿದ್ದರೆ ಅದು ನಮ್ಮ ಸಾಧನೆಗೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಅವುಗಳನ್ನು ಈ‌ ಮೂಲಕ ತಡೆಯುವ ಕೆಲಸ ಆಗಬೇಕು ಎಂದರು.

ಮನುಷ್ಯನಿಗೆ ಉಳಿದ ಪ್ರಾಣಿಗಳಿಗಿಂತ ಹೆಚ್ಚು ಇಂದ್ರಿಯ ಆಕರ್ಷಣೆ ಇರುತ್ತದೆ. ಉಳಿದ ಪ್ರಾಣಿಗಳಿಗೆ ಹೆಚ್ಚಾಗಿ ಒಂದು ಇಂದ್ರಿಯದ ಆಕರ್ಷಣೆ ಇರುವುದು. ಆಚಾರ್ಯ ಶ್ರೀ ಶಂಕರಾಚಾರ್ಯರು ತಮ್ಮ ವಿವೇಕ ಚೂಡಾಮಣಿ ಗ್ರಂಥದಲ್ಲಿ ಉಲ್ಲೇಖಿಸುತ್ತಾರೆ. ಏನೆಂದರೆ, ಹಾವಿಗೆ ಶಬ್ದದ ಆಕರ್ಷಣೆ. ಅದರಿಂದಾಗಿ ಹಾವಾಡಿಗನ ವಶವಾಗುತ್ತದೆ. ಪತಂಗಕ್ಕೆ ಬಣ್ಣದ ಆಕರ್ಷಣೆ. ದೀಪ ನೋಡಿದಾಗ ಅದಕ್ಕೆ ಚಂದ ಕಾಣುತ್ತದೆ. ಮುತ್ತಿಕ್ಕಲು ಹೋಗಿ ಸಾಯುತ್ತದೆ. ಆನೆಗೆ ಚರ್ಮದ ಆಕರ್ಷಣೆ. ಮಾವುತನು ಅಂಕುಶದಿಂದ ತಿವಿದಾಗ ಅವನ ಆದೇಶಕ್ಕೆ ಒಳಗಾಗುತ್ತದೆ. ಮೀನಿಗೆ ರುಚಿಯ ಆಕರ್ಷಣೆ. ಮಾಂಸದ ತುಂಡಿಗೆ ಆಕರ್ಷಿತವಾಗಿ ಮೀನುಗಾರನ ವಶವಾಗುತ್ತದೆ. ಹೀಗೆ ಒಂದೊಂದು ಪ್ರಾಣಿಗೆ ಒಂದೊಂದು ಇಂದ್ರಿಯದ ಆಕರ್ಷಣೆ. ಒಂದೊಂದು ಇಂದ್ರಯದ ಆಕರ್ಷಣೆಯಿಂದಾಗಿಯೇ ಆ ಪ್ರಾಣಿಗಳು ಹಾನಿಯನ್ನು ಅನುಭವಿಸುತ್ತವೆ ಎಂದು ವಿಶ್ಲೇಷಿಸಿದರು.

ಇನ್ನು ಮನುಷ್ಯನ ಗತಿ ಏನು? ಈತ ಐದು ಇಂದ್ರಿಯಗಳ ಆಕರ್ಷಣೆಗೆ ಒಳಗಾಗುತ್ತಾನೆ. ಹೀಗೆ ಇಂದ್ರಿಯಗಳ ವಶವರ್ತಿಯಾದರೆ ಸಾಧನೆಗೆ ವಿಘ್ನಗಳು ಬಂದೊದಗುತ್ತವೆ. ಆದ್ದರಿಂದ ಇಂದ್ರಿಯಗಳ ಆಕರ್ಷಣೆಯಿಂದ ಹೊರಬರಬೇಕು ಎಂದೂ ಎಚ್ಚರಿಸಿದರು.

Advertisement

ಆತ ಚಂದ ಇದ್ದಾನೆ, ಆಕೆ ಚಂದ ಇದ್ದಾಳೆ ಎಂಬ ಹೊರಗಿನ ಸೌಂದರ್ಯಕ್ಕೆ ಮನುಷ್ಯ ಆಕರ್ಷಿತನಾಗುತ್ತಾನೆ. ಶೂಪರ್ನಕಿ ರಾಮ ಚಂದ ಇದ್ದಾನೆ ಎಂದು ತಾನೂ ಸುಂದರಳಾಗಿ ಬದಲಾದಳು. ಆದರೆ ಅದು ಉಪಯೋಗಕ್ಕೆ ಬರಲಿಲ್ಲ. ಮರು ಕ್ಷಣದಲ್ಲೇ ಲಕ್ಷ್ಮಣನ ಬಾಣದಿಂದ ಬಣ್ಣ ಬಯಲಾಯಿತು ಎಂದ ಶ್ರೀಗಳು, ಪೂತನಿ ಕೃಷ್ಣನ ಕೊಲ್ಲಲು ಸುರೂಪ ತಾಳಿದಳು. ಆದರೆ ಕೃಷ್ಣನ ಆಘಾತದಿಂದ ಅವಳ ಕುರೂಪ ತಿಳಿಯಿತು. ಈ ದೇಹವೂ ಸಹ ನೋಡಲು ಚಂದ ಕಂಡರೂ ಅದು ಕ್ಷಣಿಕ. ಕೆಲ ವರ್ಷಗಳಲ್ಲಿ ಸೌಂದರ್ಯ ಕಳೆದುಕೊಳ್ಳುತ್ತದೆ. ಅಲ್ಲದೆ ಮನುಷ್ಯನಿಗೆ ತಾನು ಚಂದ ಇದ್ದೇನೆ. ಚೆನ್ನಾಗಿ ಕಾಣಬೇಕು ಎಂಬ ಶರೀರಾಭಿಮಾನ. ಇದು ಕೂಡ ಅರೆಕ್ಷಣದಲ್ಲಿ ನಾಶವಾಗಬಹುದು. ಹಾಗಾಗಿ ಹೊರಗಿನ ಸೌಂದರ್ಯಕ್ಕಾಗಿ ತುಂಬಾ ಸಮಯ ವ್ಯಯ ಮಾಡಬಾರದು. ಇವೆಲ್ಲವೂ ಮನುಷ್ಯನ ಉನ್ನತಿಗೆ ಭಂಗ ತರುತ್ತವೆ ಎಂದರು.

ಅತಿಯಾದ ಇಂದ್ರಿಯಗಳ ಆಕರ್ಷಣೆಯಿಂದ ಮನಸ್ಸು ಚಂಚಲವಾಗುತ್ತದೆ. ಚಾಂಚಲ್ಯದ ಮನಸ್ಸು ನೆಮ್ಮದಿ ಕಳೆದುಕೊಳ್ಳುತ್ತದೆ. ಆರೋಗ್ಯ ಕೆಡುತ್ತದೆ. ಆಯುಷ್ಯ ಕಡಿಮೆಯಾಗುತ್ತದೆ. ಹೀಗೆ ನಮ್ಮ ಸಾಧನೆ ಕೆಳಮುಖವಾಗುತ್ತದೆ. ಆದ್ದರಿಂದ ಇಂದ್ರಿಯಗಳ ವಿಷಯಗಳಲ್ಲಿ ಅತಿಯಾಗಬಾರದು. ಒಂದು ಹಂತಕ್ಕೆ ಬೇಕು. ಸಮಾಜ, ಸುವ್ಯವಸ್ಥೆಗೆ ತಕ್ಕಮಟ್ಟಿಗೆ ಇರಬೇಕು ಎಂದರು.

ಇಂದ್ರಿಯಗಳ ಆಕರ್ಷಣೆಯಿಂದ ಹೊರಬರಲು ಉತ್ತಮ ಗ್ರಂಥಗಳ ಅಧ್ಯಯನ ಮೂಲಕ ವಿವೇಚನ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಭಕ್ತಿಯಿಂದ ದೇವರ ಉಪಾಸನೆಯನ್ನು ನಿತ್ಯ ಮಾಡುವುದರಿಂದಲೂ ಸಾಧ್ಯ ಎಂದ ಶ್ರೀಗಳು, ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಇದನ್ನೆ ಸೂಚಿಸಿದ್ದಾನೆ ಎಂದೂ ತಿಳಿಸಿದರು.

ಭಾಗಿ ಅಧ್ಯಕ್ಷ ಗಣಪತಿ ಹೆಗಡೆ ಹೊಸಬಾಳೆ, ಮಾತೃ ಮಂಡಳಿ ಅಧ್ಯಕ್ಷೆ ನೇತ್ರಾವತಿ ಹೆಗಡೆ ಕೆಂಚಗದ್ದೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next