ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವೆ ಉಂಟಾಗಿದ್ದ ಬಿಕ್ಕಟ್ಟು ಶಮನಗೊಂಡಿದೆ. ಹೀಗೆಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದ್ದಾರೆ.
“ಕಾಫಿ ಕಪ್‌ನಲ್ಲಿ ಎದ್ದಿದ್ದ ಬಿರುಗಾಳಿ ಶಮನಗೊಳಿಸ ಲಾಗಿದೆ. ಎಲ್ಲ ವಿಚಾರಗಳನ್ನೂ ಇತ್ಯರ್ಥಗೊಳಿಸಲಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ. ಇದರ ಜತೆಗೆ ಕಳೆದ ಶುಕ್ರವಾರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜತೆಗೆ ನ್ಯಾಯವಾದಿಗಳ ಪರಮೋಚ್ಚ ಸಂಸ್ಥೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಕೂಡ “ವಿಷಯ ಇತ್ಯರ್ಥವಾಗಿದೆ’ ಎಂದು ಹೇಳಿದೆ.
ಸದ್ಯದ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ಎಲ್ಲ ವಿಚಾರ ಗಳನ್ನು ಇತ್ಯರ್ಥ ಮಾಡಲಾಗಿದೆ’ ಎಂದಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಮೂರ್ತಿ ಗಳ ಜತೆಗೆ ಸೋಮವಾರ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ “ಇಲ್ಲವೇ ಇಲ್ಲ’ ಎಂದಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಪತ್ರಿಕಾಗೋಷ್ಠಿ ನಡೆಸಿದ್ದ ನ್ಯಾಯಮೂರ್ತಿಗಳಾದ ಜಸ್ತಿ ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಬಿ.ಲೋಕುರ್ ಮತ್ತು ಕುರಿಯನ್ ಜೋಸೆಫ್ ಜತೆ ಅನೌಪಚಾರಿಕವಾಗಿ ಚಹಾ ಕೂಟ ನಡೆಸಿ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಕರ್ತವ್ಯಕ್ಕೆ ಹಾಜರು: ಸುಪ್ರೀಂ ಕೋರ್ಟ್ ಕಲಾಪ ಆರಂಭವಾಗುವುದಕ್ಕೂ ಮೊದಲು ಈ ಅನೌಪಚಾರಿಕ ಸಭೆ ನಡೆದಿದೆ. ಬಳಿಕ ನಾಲ್ವರು ನ್ಯಾಯಮೂರ್ತಿಗಳು ಸೇರಿ ಇತರ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷ ಮನ್ನನ್ ಕುಮಾರ್ ಮಿಶ್ರಾ ಕೂಡ “ಕಹಾನಿ ಕತಂ ಹೋಗಯಾ’ (ವಿಚಾರ ಇತ್ಯರ್ಥವಾಗಿದೆ) ಎಂದಿದ್ದಾರೆ. “ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿಚಾರದ ಬಗ್ಗೆ ರಾಜಕೀಯ ಲಾಭ ಪಡೆದುಕೊಳ್ಳಬಾರದು. ಹಾಗಾಗಿ ರವಿವಾರ 15 ಮಂದಿ ಹಿರಿಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆವು’ ಎಂದಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನಾಲ್ವರು ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಉಂಟೇ ಎಂದು ಪ್ರಶ್ನಿಸಿದಾಗ “ಎಲ್ಲ ನ್ಯಾಯಮೂರ್ತಿಗಳು ಪ್ರಾಮಾಣಿಕರು ಮತ್ತು ಗೌರವಾನ್ವಿತರು. ಹೀಗಾಗಿ ಅಂಥ ಕ್ರಮದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ ಮನ್ನನ್ ಕುಮಾರ್.
ಇಲ್ಲವೇ ಇಲ್ಲ ಎಂದ ಮುಖ್ಯ ನ್ಯಾಯಮೂರ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಕಳೆದ ಶುಕ್ರವಾರ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ್ದರ ವಿರುದ್ಧ ನ್ಯಾಯವಾದಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದಲ್ಲಿಯೇ ಅದು ವಿಚಾರಣೆಗೆ ಬಂದಿತ್ತು. ಅದನ್ನು ನೋಡುತ್ತಲೇ ಗರಂ ಆದ ಮುಖ್ಯ ನ್ಯಾಯಮೂರ್ತಿ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಿಲ್ಲ. ಕೋರ್ಟ್ ರೂಮ್‌ನಲ್ಲಿ ಇಂಥ ವಿಚಾರಗಳಿಗೆ ಆಸ್ಪದವೇ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
26ರಂದು ಸಂವಿಧಾನ ಉಳಿಸಿ ಯಾತ್ರೆ
ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ ಬಿಕ್ಕಟ್ಟು ಮುಕ್ತಾಯವಾಗಿದ್ದರೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನೇತೃತ್ವದಲ್ಲಿ ಜ.26ರಂದು ಮುಂಬಯಿಯಲ್ಲಿ “ಸಂವಿಧಾನ ಉಳಿಸಿ’ ಯಾತ್ರೆ ನಡೆಯಲಿದೆ. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ, ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಕೂಡ ಅದರಲ್ಲಿ ಭಾಗವಹಿಸಲಿದ್ದಾರೆ.