Advertisement

ಕಾಂಗ್ರೆಸ್‌ ಖರ್ಚು-ವೆಚ್ಚಕ್ಕೆ ರಾಜ್ಯ ಸರ್ಕಾರ ಹಣ

06:15 AM Dec 25, 2017 | Team Udayavani |

ಹಾವೇರಿ: ಕಾಂಗ್ರೆಸ್‌ ಪಕ್ಷದ ಎಲ್ಲ ಖರ್ಚು-ವೆಚ್ಚಗಳಿಗೆ ರಾಜ್ಯ ಸರ್ಕಾರದಿಂದಲೇ ಹಣ ಹೋಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಹಣ ಲೂಟಿ ಹೊಡೆದು ಪಕ್ಷಕ್ಕೆ ನೀಡುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್‌ ಚವ್ಹಾಣ್‌ ಆರೋಪಿಸಿದರು.

Advertisement

ನಗರದ ಶಿವಲಿಂಗೇಶ್ವರ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೋ ಅಲ್ಲಿಯವರೆಗೆ ರಾಜ್ಯದ ಜನರಿಗೆ ಸುಖ ಇರುವುದಿಲ್ಲ ಎಂದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಮೇಲಿಂದ ಹಿಡಿದು ಕೆಳಗಿನ ಹಂತದವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ರಾಜ್ಯದಲ್ಲಿ ಮರಳು ಮಾಫಿಯಾ, ಗ್ರೆ„ನೆಟ್‌ ಮಾಫಿಯಾದವರು ಸುರಕ್ಷಿತವಾಗಿದ್ದಾರೆ. ಆದರೆ ಮಹಿಳೆ, ಮಕ್ಕಳು ಸೇರಿ ಯಾರೂ ಸುರಕ್ಷಿತವಾಗಿಲ್ಲ. ಕೊಲೆ, ಹತ್ಯೆ, ಅತ್ಯಾಚಾರ ನಿರಂತರವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ. ರಾಜ್ಯದ ಜನತೆಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದರ ಜತೆಗೆ ಕಾಂಗ್ರೆಸ್‌ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ರಾಪಂನಿಂದ ಮರಳು ನಿರ್ವಹಣೆ: ಮಧ್ಯಪ್ರದೇಶದಲ್ಲಿ ಮರಳು ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಿ ಕೊಡಲಾಗಿದೆ. ಅಲ್ಲಿಯ ಜನರಿಗೆ ಕಡಿಮೆ ದರದಲ್ಲಿ ಮರಳು ಸುಲಭವಾಗಿ ಸಿಗುತ್ತಿದೆ. ಆದರೆ ಇಲ್ಲಿ ಮರಳನ್ನು ಲೂಟಿ ಹೊಡೆದು, ಬಡವರಿಗೆ ಸಿಗದಂತೆ ಮಾಡಿ ಈಗ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ದುಬಾರಿ ಹಣ ಕೊಟ್ಟು ಮರಳು ಪಡೆಯಲಾಗದೆ ಬಡವರು ಮನೆ ಕಟ್ಟಿಕೊಳ್ಳಲು ಸಹ ಆಗುತ್ತಿಲ್ಲ ಎಂದರು.

ಕೇಂದ್ರ ಸರ್ಕಾರದ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡದೇ ಸಿಎಂ ಸಿದ್ದರಾಮಯ್ಯ ಕೇಂದ್ರ ಏನೂ ಮಾಡಿಲ್ಲ ಎಂದು ದೂರುತ್ತಿರುವುದು ದೌರ್ಭಾಗ್ಯ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಬಂದರೆ ಮುಂದೆ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಪಕ್ಷವಿರುವುದರಿಂದ ಜನತೆಗೆ ಹೆಚ್ಚಿನ ಲಾಭ ಸಿಗಲಿದೆ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಕಾಂಗ್ರೆಸ್‌ ಎಲ್ಲಿಯೂ ಉಳಿದಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರ ಇದ್ದು ಅದನ್ನೂ ಹೊರ ಹಾಕಿದರೆ ದೇಶದಲ್ಲಿ ಹುಡುಕಿದರೂ ಕಾಂಗ್ರೆಸ್‌ ಸಿಗದ ಪರಿಸ್ಥಿತಿ ಉಂಟಾಗುತ್ತದೆ. ಆ ಕೆಲಸವನ್ನು ರಾಜ್ಯದ ಜನರು ಮಾಡಬೇಕು. 

Advertisement

ದೇಶದ್ರೋಹಿಗಳನ್ನು ಬಿಡುವುದಿಲ್ಲ. ಯಾರನ್ನೂ ತುಷ್ಟೀಕರಣ ಮಾಡುವುದಿಲ್ಲ. ಇದು ಬಿಜೆಪಿಯ ನೀತಿ ಎಂದರು. ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ರ್ಯಾಲಿ ನಡೆಯುತ್ತಿದ್ದು, ಎಲ್ಲೆಡೆ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ತನ್ಮೂಲಕ ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ ಎಂದರು.

ಕೆಲಸ ಕೇಂದ್ರದ್ದು ಫೋಟೋ ರಾಜ್ಯದ್ದು
ರಾಜ್ಯದಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಶಂಕುಸ್ಥಾಪನೆ ಮಾಡಿದ ಕೆಲಸಗಳನ್ನೇ ಈಗ ಉದ್ಘಾಟಿಸಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಮಾಡಿದ್ದು, ನಾವು ಮಾಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಶಿವರಾಜಸಿಂಗ್‌ ಚವ್ಹಾಣ್‌ ವ್ಯಂಗ್ಯವಾಡಿದರು. ಅನ್ನಭಾಗ್ಯಕ್ಕೆ ರಿಯಾಯ್ತಿಯಲ್ಲಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ. ಆದರೆ, ಮುಖ್ಯಮಂತ್ರಿಯವರು ಇದನ್ನು ನಾವೇ ಕೊಟ್ಟಿದ್ದು ಎಂದು ಹೇಳುತ್ತಿದ್ದಾರೆ. ಮೋದಿಯವರ ಯೋಜನೆಗೆ ಅವರ ಫೋಟೋ ಹಾಕಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ನೀರಾವರಿಗಾಗಿ 50,000 ಕೋಟಿ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ, ಅಷ್ಟು ಖರ್ಚು ಮಾಡಿಲ್ಲ. ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನೀರಿಲ್ಲದಂತಾಗಿದೆ. ಹೀಗಿರುವಾಗ ರಾಜ್ಯದ ಜನರಿಗೆ ಅವರು ಎಲ್ಲಿಂದ ನೀರು ಕೊಡುತ್ತಾರೆ ಎಂದು ಶಿವರಾಜಸಿಂಗ್‌ ವ್ಯಂಗ್ಯವಾಡಿದರು.

ಕೆಲಸ ನೋಡಿ ಮತ ಕೊಡಿ
ಕಾಂಗ್ರೆಸ್‌ನವರು ನಾಲ್ಕೂವರೆ ವರ್ಷದಲ್ಲಿ ಏನೂ ಮಾಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವಂತೆ ರಾಜ್ಯದ ಜನತೆ ಪ್ರಧಾನಿ ಮೋದಿ ಹಾಗೂ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಕೆಲಸ ನೋಡಿಯೇ ಮತ ಕೊಡಿ ಎಂದು ಶಿವರಾಜಸಿಂಗ್‌ ಚವ್ಹಾಣ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next