ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಲಾಭದಾಯಕ ಮಾರ್ಗವಾಗಲು ಪೂರಕವಾಗಿ ಬೇಲೇಕೇರಿ ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಪ್ರಸ್ತಾವನೆ ಸಲ್ಲಿಕೆಗೆ ಮುಂದಾಗಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಒತ್ತಾಯಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೇಲೇಕೇರಿ ಬಂದರು ಅಭಿವೃದ್ಧಿಗೆ ಉತ್ಸುಕರಾಗಿದ್ದು, ಇದರಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹೆಚ್ಚಿನ ಪ್ರಯೋಜನಕಾರಿ ಆಗಲಿದೆ.
ಬಂದರು ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಕೇಂದ್ರ ಸಿದ್ಧವಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೂಕ್ತ ಪ್ರಸ್ತಾವನೆ ಸಲ್ಲಿಕೆಯೊಂದಿಗೆ ಪ್ರಯೋಜನ ಪಡೆಯಬೇಕು ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕುರಿತಾಗಿ ಅರಣ್ಯ ಭೂಮಿ ಬಳಕೆಗೆ ಪರ್ಯಾಯ ಭೂಮಿ ನೀಡಿಕೆ ಕುರಿತಾಗಿ ರಾಜ್ಯ ಸರಕಾರದ ಅಧಿಕಾರಿಗಳ ಸಭೆ ನಡೆಸುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.
ರಾಜ್ಯ ಸರಕಾರ ಪರ್ಯಾಯ ಅರಣ್ಯ ಪ್ರದೇಶ ನೀಡಿಕೆಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ರೈಲ್ವೆ ಮಾರ್ಗ ಯೋಜನೆಗೆ ಕರ್ನಾಟಕ ಸರಕಾರದ ಶೇ.50ರಷ್ಟು ಕಾಮಗಾರಿ ವೆಚ್ಚ ನೀಡಬೇಕಿದೆ. ಒಂದು ವೇಳೆ ರಾಜ್ಯ ಸರಕಾರ ವೆಚ್ಚದ ಹಣ ನೀಡದಿದ್ದರೂ ಸಹ ಯೋಜನೆ ಕೈಗೊಳ್ಳಲು ರೈಲ್ವೆ ಮಂಡಳಿ ನಿರ್ಧರಿಸಿದೆ ಎಂದರು.
ಹುಬ್ಬಳ್ಳಿ-ವಾರಾಣಸಿ ನಡುವೆ ಪ್ರಸ್ತುತ ವಾರಕ್ಕೊಮ್ಮೆ ರೈಲು ಸಂಚಾರ ಆರಂಭವಾಗಿದ್ದು, ಇದನ್ನು ಕನಿಷ್ಠ ವಾರದಲ್ಲಿ ಮೂರು ದಿನ ಸಂಚಾರ ಕೈಗೊಳ್ಳುವಂತಾಗುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದರು.