Advertisement
ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಮಂಗಳವಾರದ ಕಲಾಪದಲ್ಲಿ ಕೋವಿಡ್ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್, ಕೋವಿಡ್ ಪರಿಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಇದನ್ನು ದೇವರ ಆಟ ಎಂದು ಹೇಳಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಅಂತಾ ಇದ್ದ ಮೇಲೆ ಅದಕ್ಕೆ ಅದರದೇ ಆದ ಜವಾಬ್ದಾರಿ, ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಕಳೆದ ಅಧಿವೇಶನ ನಡೆಯುವಾಗ ಈ ಪರಿಸ್ಥಿತಿ ಎದುರಾಗಿತ್ತು. ದೇಶದ ಪ್ರಧಾನಿಗಳು ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿ ಲಾಕ್ ಡೌನ್ ಹೇರಿದರು. ದೀಪ ಹಚ್ಚಲು, ಗಂಟೆ ಹೊಡೆಯಲು ನಾಲ್ಕು ದಿನ ಸಮಯ ಕೊಟ್ಟರು. ನಾವು ಅದನ್ನು ಸ್ವೀಕರಿಸಿದೆವು. ಮುಖ್ಯಮಂತ್ರಿಗಳು ಸ್ವಲ್ಪ ಮನಸ್ಸು ಮಾಡಿ ಒಂದು ದಿನದೊಳಗೆ ಹಳ್ಳಿಗೆ ಹೋಗುವವರು ಹೋಗಿ ಎಂದರು.
Related Articles
Advertisement
ಎಷ್ಟು ರೈತರಿಗೆ ನೆರವಾಗಿದ್ದೀರಿ?
ಎಷ್ಟು ರೈತರ ಬೆಳೆ ಖರೀದಿ ಮಾಡಿದ್ದೀರಿ, ಎಷ್ಟು ರೈತರಿಗೆ ಮಾರುಕಟ್ಟೆ ಕಲ್ಪಿಸಿದ್ದೀರಿ, ಎಷ್ಟು ರೈತರಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದೀರಿ? ಕೃಷಿ ಸಚಿವರು ಉತ್ತರ ನೀಡಲಿ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡಲ್ಲ ಅಂತಾ ಯಡಿಯೂರಪ್ಪನವರು ಹೇಳಿಕೆ ನೀಡಿದರು. ಆದೇಶ ಹೊರಡಿಸಿದರು. ಆದರೆ ಎಷ್ಚು ಅಧಿಕಾರಿಗಳು ಹೋಗಿ ಬೆಳೆ ನಷ್ಟದ ಸಮೀಕ್ಷೆ ಮಾಡಿದ್ದಾರೆ?
ಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ:
ಈ ಸರ್ಕಾರ ರೈತರು, ಕಾರ್ಮಿಕರನ್ನು ರಕ್ಷಿಸುವಲ್ಲೂ ವಿಫಲವಾಯಿತು. ಕಾರ್ಮಿಕರಿಗೆ ಮೂರು ಪಟ್ಟು ಬಸ್ ದರ ಏರಿಕೆ ವಿರುದ್ಧ ನಾವು ಹೋರಾಟ ಮಾಡಿದ ಮೇಲೆ ದೊಡ್ಡ ಮನಸ್ಸು ಮಾಡಿ ಅವರಿಗೆ ಐದು ದಿನಗಳ ಕಾಲ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು. ಈ ಕಠಿಣ ಸಮಯದಲ್ಲಿ ನಮ್ಮ ಹೃದಯ ಜನರಿಗಾಗಿ ಮಿಡಿಯುತ್ತಿದೆ. ಸರ್ಕಾರದ ಬೇಜವಾಬ್ದಾರಿಯಿಂದ ಈ ಕಾಯಿಲೆ ಹರಡಿದೆ. ಹೊರ ದೇಶದಿಂದ ಬರುವವರನ್ನು ಮುಂಚಿತವಾಗಿಯೇ ತಡೆದಿದ್ದರೆ, ಇವತ್ತು ಇಷ್ಟು ತೊಂದರೆ ಆಗುತಿತ್ತಾ? ನಿಮ್ಮ ಬೇಜವಾಬ್ದಾರಿ ತನಕ್ಕೆ ಇಡೀ ದೇಶ ನರಳುವಂತಾಗಿದೆ.
ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಎಷ್ಟು ಜನಕ್ಕೆ ತಲುಪಿದೆ? ಈ ಬಗ್ಗೆ ಮಾಹಿತಿ ಪಡೆಯೋಣ ಎಂದರೆ ಕಾರ್ಮಿಕ ಸಚಿವರು ಇಲ್ಲಿ ಇಲ್ಲ. ಇವತ್ತಿನವರೆಗೂ ಶೇ.10-20 ರಷ್ಟು ಜನರಿಗೆ ಈ ಪರಿಹಾರ ಹಣ ತಲುಪಿಲ್ಲಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರೆ, ಕಾರ್ಮಿಕರು ಯಾಕೆ ತಮ್ಮ ಊರಿಗೆ ವಾಪಸ್ ತೆರಳುತ್ತಿದ್ದರು.
ಈ ಸರ್ಕಾರಕ್ಕೆ ಕೊನೇ ಪಕ್ಷ ವೃದ್ಧರಿಗೆ, ವಿಧವೆಯರಿಗೆ, ವಿಶೇಷಚೇತನರಿಗೆ ಪಿಂಚಣಿ ನೀಡಲು ಸಾಧ್ಯವಾಗಿಲ್ಲ. ಅದನ್ನು ನೀಡಲು ಈಗ ಕೆ1, ಕೆ2 ಅಂತಾ ಏನೇನೋ ವಿಂಗಡಣೆ ಮಾಡಿದ್ದಾರೆ. 20, 30 ವರ್ಷಗಳಿಂದ 500, 1000 ರೂಪಾಯಿ ಕೊಡಲಾಗುತ್ತಿದೆ. ಇದನ್ನು ನೀಡುವುದರಲ್ಲೂ ರಾಜಕೀಯ ಮಾಡಬೇಕಾ?
ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡದಿರುವುದೂ ಒಂದು ಸಂಸ್ಕೃತಿನಾ?
ಆದರೆ ಈ ಸರ್ಕಾರ ಏನು ಮಾಡುತ್ತಿದೆ. ಬಡವರು ತಿನ್ನುವ ಅನ್ನದಲ್ಲಿ ಅಕ್ರಮ ಮಾಡುತ್ತಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿರುವುದು ಒಂದು ಸರ್ಕಾರವೇ? ಈ ಸರ್ಕಾರದ ಅಕ್ರಮವನ್ನು ನಾವು ನೋಡಿಕೊಂಡು ಸುಮ್ಮನಿರಬೇಕಾ? ಎಷ್ಟು ದಿನ ನಾವು ತಾಳ್ಮೆಯಿಂದ ಇರಬೇಕು. ಮಾಧ್ಯಮಗಳು ಪ್ರತಿ ವಿಚಾರವನ್ನು ಪ್ರಕಟಿಸಿವೆ. ಕೊರೋನಾದಿಂದ ಸತ್ತವರ ಹೆಣಕ್ಕೆ ಒಂದು ಒಳ್ಳೆಯ ಅಂತ್ಯ ಸಂಸ್ಕಾರ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಇದು ಯಾವ ಸಂಸ್ಕೃತಿ? ಎಂದು ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.