ಬೆಂಗಳೂರು: “ರಾಜ್ಯ ವಿಧಾನಸಭೆ ಚುನಾವಣೆ ಸಮೀಪ ಇದ್ದು,ಸದ್ಯಕ್ಕೆ ಬಿಬಿಎಂಪಿಯನ್ನು ವಿಭಜಿಸುವ ಯಾವುದೇ ಆಲೋಚನೆ ಸರ್ಕಾರಕ್ಕಿಲ್ಲ,’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ನಗರದ ಉಪ್ಪಾರಪೇಟೆಯಲ್ಲಿ ಸೋಮವಾರ ಟೆಂಡರ್‌ಶ್ಯೂರ್ ಮಾದರಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಮಹಾನಗರ ಪಾಲಿಕೆ ವಿಭಜನೆಯಿಂದ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಳ್ಳುತ್ತದೆ. ಆಡಳಿತಾತ್ಮಕ ದೃಷ್ಟಿಯಿಂದಲೂ ವಿಭಜನೆ ಸೂಕ್ತ. ಆದರೆ, ವಿಭಜನೆ ಮಾಡುವ ಆಲೋಚನೆ ಸದ್ಯಕ್ಕಿಲ್ಲ. ಬಿ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿನ ಸಮಿತಿ ನೀಡಿದ ಶಿಫಾರಸಿನಂತೆ ಚುನಾವಣೆ ನಂತರ ಜನರ ಅಭಿಪ್ರಾಯ ಸಂಗ್ರಹಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,’ ಎಂದು ಹೇಳಿದರು.
“ನಗರದ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳುವ ಯೋಜನೆಗಳಿಗೆ ಕೆಲವರಿಂದ ವಿರೋಧ ಎದುರಾಗುತ್ತದೆ. ಉಕ್ಕಿನ ಸೇತುವೆ ಯೋಜನೆ ಕೈಗೆತ್ತಿಕೊಂಡಾಗಲೂ ಈ ವಿರೋಧ ವ್ಯಕ್ತವಾಗಿತ್ತು. ಸೇತುವೆ ನಿರ್ಮಾಣದ ವಿರುದ್ಧ ಬ್ಯಾನರ್‌ಗಳನ್ನು ಹಿಡಿದು ಕೆಲವರು ಘೋಷಣೆ ಕೂಗಿದರು. ಆದರೆ, ಅವರೆಲ್ಲಾ ಅಭಿವೃದ್ಧಿ ವಿರೋಧಿಗಳು,’ ಎಂದು ಟೀಕಿಸಿದರು.
10 ಕಿ.ಮೀ. ಟೆಂಡರ್‌ಶ್ಯೂರ್: ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ನಗರದ ಮೆಜೆಸ್ಟಿಕ್ ಸುತ್ತಲಿನ ರಸ್ತೆಗಳು ಸೇರಿದಂತೆ 9.73 ಕಿ.ಮೀ ಉದ್ದದ ಆರು ರಸ್ತೆಗಳನ್ನು 129.43 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಸುಬೇದಾರ್ ಛತ್ರಂ ರಸ್ತೆ- ಕೆ.ಜಿ. ರಸ್ತೆ ಶೇಷಾದ್ರಿ ರಸ್ತೆವರೆಗೆ, ಗುಬ್ಬಿ ತೋಟದಪ್ಪ ರಸ್ತೆ-ಖೋಡೆ ವೃತ್ತದಿಂದ ಗೂಡ್‌ಶೆಡ್ ಜಂಕ್ಷನ್ ಮಾರ್ಗವಾಗಿ ಕೆ.ಜಿ.ರಸ್ತೆವರೆಗೆ, ಧನ್ವಂತರಿ ರಸ್ತೆ-ಉಪ್ಪಾರಪೇಟೆ ಪೊಲೀಸ್ ಠಾಣೆ- ಆನಂದರಾವ್ ವೃತ್ತ, ಗಾಂಧಿನಗರ ಸುತ್ತಲಿನ ಆಯ್ದ ರಸ್ತೆಗಳು, ಕಾಟನ್‌ಪೇಟೆ ಮುಖ್ಯರಸ್ತೆ- ಗೂಡ್‌ಶೆಡ್ ಜಂಕ್ಷನ್-ಮೈಸೂರು ರಸ್ತೆ ನಡುವಿನ ಒಟ್ಟಾರೆ 9.73 ಕಿ.ಮೀ. ಉದ್ದದ ರಸ್ತೆಗಳನ್ನು ಟೆಂಡರ್‌ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಶಾಸಕರಾದ ದಿನೇಶ್ ಗುಂಡೂರಾವ್, ಆರ್.ವಿ. ದೇವರಾಜ್, ಪಾಲಿಕೆ ಸದಸ್ಯೆ ಲತಾ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
30 ರಸ್ತೆ ವೈಟ್ ಟಾಪಿಂಗ್: ಕಾಮಗಾರಿಗೆ ಚಾಲನೆ ನೀಡಿದ ನಂತರ ರಾಜರಾಜೇಶ್ವರಿ ನಗರದಲ್ಲಿ “ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ’ ಅಡಿ ಕೈಗೆತ್ತಿಕೊಳ್ಳಲಾದ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು. ಸುಮಾರು 972.69 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನು ನಿರ್ಮಿಸುತ್ತಿದ್ದು, ಮಾಗಡಿ ರಸ್ತೆ, ತುಮಕೂರು ರಸ್ತೆ, ಸರ್ಜಾಪುರ ರಸ್ತೆ, ವಿಲ್ಸನ್‌ಗಾರ್ಡನ್, ಬಿಟಿಎಸ್ ರಸ್ತೆ ಸೇರಿದಂತೆ 93.47 ಕಿ.ಮೀ. ಉದ್ದದ 30 ರಸ್ತೆಗಳನ್ನು ಮುಂದಿನ 11 ತಿಂಗಳಲ್ಲಿ ವೈಟ್‌ಟಾಪಿಂಗ್‌ಗೆ ಪರಿವರ್ತಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಸ್ತೆ ಗುಂಡಿಗಳ ಸಮಸ್ಯೆ ಇಲ್ಲ, ದೀರ್ಘ ಬಾಳಿಕೆ, ಕಡಿಮೆ ನಿರ್ವಹಣೆ ವೆಚ್ಚ, ಕಡಿಮೆ ಇಂಧನ ವೆಚ್ಚ, ಸುಗಮ ಮತ್ತು ಸುರಕ್ಷಾ ಸಂಚಾರ, ಮಳೆಯಿಂದ ಹಾಳಾಗುವುದಿಲ್ಲ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್‌ಗೆ ಉದ್ದೇಶಿಸಲಾಗಿದೆ ಎಂದರು. ಶಾಸಕ ಮುನಿರತ್ನ, ಮೇಯರ್ ಸಂಪತ್‌ರಾಜ್, ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.