“ಆಡಿ ಮಾಡಿಸುವುದಕ್ಕಿಂತ ಮಾಡಿ ತೋರಿಸುವುದು ಮೇಲು…’
– ಎಲ್ಲಾ ಮುಗಿದ ಮೇಲೆ, ಹೀಗೊಂದು ಬರಹ ಆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿತು. ಅಷ್ಟೊತ್ತಿಗಾಗಲೇ, ಹಾಡು, ಕುಣಿತ, ಮಾತುಕತೆ, ಗುಣಗಾನ ಎಲ್ಲವೂ ಮುಗಿದಿತ್ತು. ಆದರೆ, ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಪಾರ್ಟ್ ಇಷ್ಟವಾಗುವಂತೆ, ಆ ಕಾರ್ಯಕ್ರಮದ ಕೊನೆಯಲ್ಲಿ ಬಿತ್ತರಗೊಂಡ ಮೇಕಿಂಗ್ ವಿಡೀಯೋ ಎಲ್ಲರಿಗೂ ಇಷ್ಟವಾಯಿತು. ಅದೊಂದೇ ಅಂದಿನ ಹೈಲೈಟ್ ಅಂದರೆ ತಪ್ಪಿಲ್ಲ. “ಆಡಿ ಮಾಡಿಸುವುದಕ್ಕಿಂತ ಮಾಡಿ ತೋರಿಸುವುದು ಮೇಲು..’ ಈ ಬರಹ ಮೇಕಿಂಗ್ ವಿಡೀಯೋ ಬಳಿಕ ಯಾಕೆ ಬಂತು ಎಂಬುದಕ್ಕೆ ವಿಡೀಯೋದೊಳಗಿದ್ದ ಹೂರಣ ಉತ್ತರವಾಗಿತ್ತು.
ಅಂದಹಾಗೆ, ಇದು ಕಂಡು ಬಂದದ್ದು ದೊರೆ-ಭಗವಾನ್ ನಿರ್ದೇಶನದ “ಆಡುವ ಗೊಂಬೆ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ. ಇಪ್ಪತ್ತೆರೆಡು ವರ್ಷಗಳ ಬಳಿಕ ಭಗವಾನ್ ನಿರ್ದೇಶಿಸಿದ ಚಿತ್ರವಿದು. ಅದರಲ್ಲೂ ಅವರ ನಿರ್ದೇಶನದ 50 ನೇ ಚಿತ್ರ ಎಂಬುದು ವಿಶೇಷ. ಹಾಗಾಗಿ ಅಂದು ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮುಖ್ಯ ಆಕರ್ಷಣೆಯಾಗಿದ್ದರು. ಇಬ್ಬರೂ ತಲಾ ಒಂದೊಂದು ಹಾಡನ್ನು ಬಿಡುಗಡೆ ಮಾಡಿ ಶುಭಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಇತರರು ಆಡಿಯೋ ಬಿಡುಗಡೆ ಮಾಡಿದರು. ಹಾಡುಗಳ ಬಿಡುಗಡೆ ಜೊತೆಗೆ ಶಿವರಾಜಕುಮಾರ್ ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಿದರು.
ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಹಾಗು ವಿಜಯರಾಘವೇಂದ್ರ ಅವರು ಹಾಡಿರುವುದು ವಿಶೇಷ. ಭಗವಾನ್, ನಾಗೇಂದ್ರ ಪ್ರಸಾದ್,ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಅಂದು ನಿರ್ದೇಶಕ ಭಗವಾನ್ ಅವರೇ, ಮೈಕ್ ಹಿಡಿದು ನಿರೂಪಣೆಗೆ ನಿಂತಿದ್ದರು. ಚಿತ್ರದ ಟೀಸರ್ ಬಗ್ಗೆ, ಹಾಡಿನ ಬಗ್ಗೆ ಗುಣಗಾನ ಮಾಡುತ್ತಲೇ ಒಬ್ಬೊಬ್ಬರನ್ನೇ ವೇದಿಕೆಗೆ ಆಹ್ವಾನಿಸಿ, ಆಡಿಯೋ ಬಿಡುಗಡೆ ಮಾಡಿಸಿದರು. “ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ಅವರ ಲೈಫಲ್ಲಿ ವಿಧಿ ಹೇಗೆಲ್ಲಾ ಆಡಿಸುತ್ತೆ, ಮೇಲಿರುವ ದೇವ್ರು, ನಮ್ಮನ್ನು ಗೊಂಬೆಯಂತೆ ಆಡಿಸುತ್ತಾನೆ. ಅದು ಹೇಗೆ ಎಂಬುದನ್ನು ಸೂಕ್ಷ್ಮ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಅನಂತ್‌ನಾಗ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಂಚಾರಿ ವಿಜಯ್ ನಾಯಕರಾದರೆ, ನಿರೋಷ ಶೆಟ್ಟಿ, ಇಷಿತಾ ಮಲಾ°ಡ್ ಮತ್ತು ದಿಶಾ ಕೃಷ್ಣಯ್ಯ ನಾಯಕಿಯರು. ಇವರೊಂದಿಗೆ ಸುಧಾಬೆಳವಾಡಿ, ಖುಷಿ ಮೋಹಾತೋ, ಅನಿರುದ್ª, ಮಂಜುನಾಥ್, ಪೂಜಾ, ಸತೀಶ್ ಇತರರು ನಟಿಸಿದ್ದಾರೆ. ಹೇಮಂತ್‌ಕುಮಾರ್ ಸಂಗೀತ, ಜಬೇಜ್‌ಕೆ.ಗಣೇಶ್ ಛಾಯಾಗ್ರಹಣವಿದೆ. ಭಗವಾನ್ ಅವರ ವಿದ್ಯಾರ್ಥಿ ಸತೀಶ್ ಅವರ ತಂದೆ ಎ.ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಅವರೊಂದಿಗೆ ಕೆ.ವೇಣುಗೋಪಾಲ್, ರಾಜಲಕ್ಷೀ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.